ಮಾಜಿ ಸಂಸದ ಡಿ ಕೆ ಸುರೇಶ್ ಸಹೋದರಿ ಎಂದು ಹೇಳಿಕೊಂಡು ಐಶ್ವರ್ಯಾ ಗೌಡ ಎಂಬಾಕೆ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ವಂಚಿಸಿದ ಪ್ರಕರಣದ ಸಂಬಂಧ ದಾಖಲಿಸಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಮತ್ತು ತುಮಕೂರಿನ ಗುತ್ತಿಗೆದಾರ ಎಂ ಎನ್ ರಮೇಶ್ ವಿರುದ್ಧ ಆತುರದ ಮತ್ತು ಬಲವಂತ ಕ್ರಮಕೈಗೊಳ್ಳದಂತೆ ಕರ್ನಾಟಕ ಹೈಕೋರ್ಟ್ ಜಾರಿ ನಿರ್ದೇಶನಾಲಯಕ್ಕೆ ಗುರುವಾರ ಆದೇಶಿಸಿದೆ.
ಈ ಮಧ್ಯೆ, ಹೆಚ್ಚುವರಿ ಸಾಲಿಸಿಟರ್ ಜನರಲ್ ಅವರು ನ್ಯಾಯಾಲಯವು ತಮ್ಮ ವಾದ ಆಲಿಸದೇ ಮಧ್ಯಂತರ ಆದೇಶ ಮಾಡಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದೂ ಕೂಡ ನ್ಯಾಯಾಲಯದ ಕಲಾಪದ ವೇಳೆ ಕಂಡುಬಂದಿತು.
ಧಾರವಾಡ ಶಾಸಕ ವಿನಯ್ ಕುಲಕರ್ಣಿ ಹಾಗೂ ಮೆಸರ್ಸ್ ಎಂ ಎನ್ ರಮೇಶ್ ಎಂಜಿನಿಯರ್ಸ್ ಅಂಡ್ ಕಾಂಟ್ರಾಕ್ಟರ್ಸ್‌ನ ಪಾಲುದಾರ ಎಂ ಎನ್ ರಮೇಶ್ ಅವರು ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಶಿವಶಂಕರ್ ಅಮರಣ್ಣವರ್ ಅವರ ರಜಾಕಾಲೀನ ಏಕಸದಸ್ಯ ಪೀಠವು ಇಂದು ಮಧ್ಯಂತರ ಆದೇಶ ಮಾಡಿತು.
“ವಿನಯ್ ಕುಲಕರ್ಣಿ ಮತ್ತು ಎಂ ಎನ್ ರಮೇಶ್ ವಿರುದ್ಧ ಜಾರಿ ನಿರ್ದೇಶನಾಲಯವು ಯಾವುದೇ ತೆರನಾದ ಆತುರ ಮತ್ತು ಬಲವಂತದ ಕ್ರಮಕೈಗೊಳ್ಳಬಾರದು. ಜಾರಿ ನಿರ್ದೇಶನಾಲಯಕ್ಕೆ ನೋಟಿಸ್ ಜಾರಿ ಮಾಡಲಾಗಿದ್ದು, ಈ ಆದೇಶ ತೆರವು/ಮಾರ್ಪಾಡು ಕೋರುವ ಸ್ವಾತಂತ್ರ್ಯ ಹೊಂದಿದೆ” ಎಂದು ನ್ಯಾಯಾಲಯವು ಆದೇಶ ಮಾಡಿದೆ.
ಇದಕ್ಕೂ ಮುನ್ನ, ಕಳೆದ ವಿಚಾರಣೆಯ ಕೋರಿಕೆಯನ್ನು ಮುಂದುವರಿಸಿದ ಜಾರಿ ನಿರ್ದೇಶನಾಲಯ ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಅರವಿಂದ್ ಕಾಮತ್ ಅವರು “ಅರ್ಜಿಗೆ ಆಕ್ಷೇಪಣೆ ಸಿದ್ಧವಾಗಿದೆ. ಮಧ್ಯಂತರ ಕೋರಿಕೆಗೆ ವಿರೋಧಿಸಿ ವಾದಿಸಲು ಸಿದ್ಧವಾಗಿದ್ದೇನೆ” ಎಂದರು.
ಇದಕ್ಕೆ ಪೀಠವು “ಮೊದಲಿಗೆ ಮಧ್ಯಂತರ ಕೋರಿಕೆಗೆ ಸಂಬಂಧಿಸಿದಂತೆ ಆದೇಶ ಮಾಡುತ್ತೇನೆ. ಆನಂತರ ವಾದ ಮಂಡಿಸಬಹುದು” ಎಂದಿತು. ಇದರಿಂದ ಕುಪಿತರಾದ ಎಎಸ್‌ಜಿ ಕಾಮತ್ ಅವರು “ಅದು ಹೇಗೆ ಸಾಧ್ಯ ಮೈಲಾರ್ಡ್. ನನ್ನ ವಾದ ಆಲಿಸದೇ ಪೀಠವು ಆದೇಶ ಮಾಡಲಾಗದು” ಎಂದರು. ಆಗ ಪೀಠವು “ಯಾವ ಆದೇಶ ಮಾಡಲಾಗುತ್ತದೆ ಎಂಬುದನ್ನು ನೋಡಿಕೊಂಡು ವಾದಿಸಿ” ಎಂದು ಮಧ್ಯಂತರ ಆದೇಶ ಮಾಡಿತು.
ಇದನ್ನು ಆಲಿಸಿದ ಎಎಸ್‌ಜಿ ಅವರು ಆದೇಶ ಬಳಿಕ “ನಮ್ಮ ವಾದ ಆಲಿಸದೇ ಪೀಠವು ಈ ಆದೇಶ ಮಾಡಲಾಗದು. ಇದು ನಮ್ಮ ಹಿತಾಸಕ್ತಿಗೆ ವಿರುದ್ಧವಾಗಿದೆ” ಎಂದರು. ಆಗ ಪೀಠವು “ಈ ಆದೇಶ ಪ್ರಶ್ನಿಸಿ...” ಎಂದು ಉತ್ತರಿಸಿತು. ಈ ವೇಳೆ ಎಎಸ್‌ಜಿ ಕಾಮತ್ ಅವರು “ನಾವು ನ್ಯಾಯಾಲಯದಲ್ಲಿ ಉಪಸ್ಥಿತರಿದ್ದು, ಈ ಆದೇಶ ಮಾಡುವುದಕ್ಕೂ ಮುನ್ನ ನನ್ನ ವಾದ ಆಲಿಸಬೇಕು ಎಂದು ಕೋರಿದ್ದೇನೆ ಎಂಬುದನ್ನು ದಾಖಲಿಸಿ. ಹೀಗೆ ನಡೆದಿರುವ ಪೂರ್ವನಿದರ್ಶನವಿಲ್ಲ” ಎಂದು ಅಸಮಾಧಾನ ಸೂಚಿಸಿದರು.
ಅರ್ಜಿದಾರರ ಪರ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ ಮತ್ತು ವಕೀಲರಾದ ಸಂದೀಪ್ ಪಾಟೀಲ್ ಅವರು “ಜಾರಿ ನಿರ್ದೇಶನಾಲಯಕ್ಕೆ ನೋಟಿಸ್ ಜಾರಿಯಾಗಿಲ್ಲ. ಅದಾಗ್ಯೂ, ವಾದ ಮಂಡನೆಗೆ ಅವಕಾಶ ಕೋರುತ್ತಿರುವುದು ಸರಿಯಲ್ಲ. ಆದೇಶಕ್ಕೆ ತಕರಾರು ಇದ್ದರೆ ಇ ಡಿಯು ಆದೇಶ ಪ್ರಶ್ನಿಸಬಹುದು” ಎಂದರು.
ಅಂತಿಮವಾಗಿ ಎಎಸ್‌ಜಿ ಕಾಮತ್ ಅವರು “ನಮಗೆ (ಇ ಡಿ) ಅರ್ಜಿ ಪ್ರತಿ ನೀಡಲಾಗಿದೆ. ಎಎಸ್‌ಜಿಯಾಗಿ ನಾನು ಕೇಂದ್ರ ಸರ್ಕಾರದ ಹಿತಾಸಕ್ತಿಯನ್ನು ಪ್ರತಿನಿಧಿಸುತ್ತೇನೆ. ನನ್ನನ್ನು ಆಲಿಸದೇ ಪೀಠ ಈ ಆದೇಶವನ್ನು ಹೇಗೆ ಮಾಡುತ್ತದೆ? ನಾನು ನ್ಯಾಯಾಲಯದಲ್ಲಿ ಖುದ್ದು ಹಾಜರಿದ್ದು, ನಮ್ಮ ವಾದ ಆಲಿಸಬೇಕು ಎಂದು ಕೋರಿದ್ದನ್ನು ಆದೇಶದಲ್ಲಿ ದಾಖಲಿಸಬೇಕು” ಎಂದು ಕೋರಿದರು.
ಈ ವೇಳೆ ಪೀಠವು “ಅರ್ಜಿದಾರರು ಎಎಸ್‌ಜಿ ಕಾಮತ್ ಅವರಿಗೆ ಅರ್ಜಿಯ ಪ್ರತಿ ನೀಡಿದ್ದು, ಎಎಸ್‌ಜಿ ಕಾಮತ್ ಅವರು ಕಳೆದ ವಿಚಾರಣೆಯಲ್ಲಿ ಮತ್ತು ಇಂದು ವಿಚಾರಣೆಯಲ್ಲಿ ಭಾಗಿಯಾಗಿದ್ದರು. ಆದರೆ, ಅವರಿಗೆ ಯಾವುದೇ ನೋಟಿಸ್ ಜಾರಿ ಮಾಡಿರಲಿಲ್ಲ" ಎಂದು ಆದೇಶದಲ್ಲಿ ದಾಖಲಿಸಿ ವಿಚಾರಣೆ ಮುಂದೂಡಿತು.
ಕಳೆದ ವಿಚಾರಣೆಯಲ್ಲಿ ವಿನಯ್ ಪರ ಹಿರಿಯ ವಕೀಲ ಸಂದೇಶ್ ಚೌಟ ಅವರು “ಪಿಎಂಎಲ್‌ಎ ಅಡಿ ಅಧಿಕಾರ ಹೊಂದಿರುವ ಅಧಿಕಾರಿ ವಿನಯ್ ಕುಲಕರ್ಣಿ ಅವರಿಗೆ ಸಮನ್ಸ್ ಜಾರಿ ಮಾಡಿಲ್ಲ. ಜಫ್ತಿಯ ಸಂದರ್ಭದಲ್ಲಿ ವಿನಯ್ ಮನೆಯಲ್ಲಿ ಇ ಡಿ ಅಧಿಕಾರಿಗಳಿಗೆ ಏನೂ ದೊರೆತಿಲ್ಲ. ಹೀಗಿರುವಾಗ ವಿನಯ್ ಹೇಳಿಕೆ ದಾಖಲಿಸಿಕೊಳ್ಳುವಂತಿರಲಿಲ್ಲ. ಸಮನ್ಸ್‌ನಲ್ಲಿ ಮೂಲ ಅಪರಾಧ (ಪ್ರೆಡಿಕೇಟ್ ಅಪರಾಧ) ಯಾವುದು ಎಂದು ಹೇಳಲಾಗಿಲ್ಲ. ಐಶ್ವರ್ಯಾ ಗೌಡ ರಿಮ್ಯಾಂಡ್ ಅರ್ಜಿಯಲ್ಲಿಯೂ ವಿನಯ್ ಕುಲಕರ್ಣಿ ಬಗ್ಗೆ ಯಾವುದೇ ಉಲ್ಲೇಖವಿಲ್ಲ” ಎಂದು ಆಕ್ಷೇಪಿಸಿದ್ದರು.
ರಮೇಶ್ ಪ್ರತಿನಿಧಿಸಿದ್ದ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ ಅವರು “ಅಪರಾಧ ಪ್ರಕ್ರಿಯೆ ಇಲ್ಲದಿದ್ದರೂ ಪಿಎಂಎಲ್‌ಎ ಅಡಿ ರಮೇಶ್‌ಗೆ ಸಮನ್ಸ್ ಜಾರಿ ಮಾಡಿರುವುದು ಕಾನೂನು ಬಾಹಿರ ಕ್ರಮ” ಎಂದು ವಾದಿಸಿದ್ದರು.
ಏಪ್ರಿಲ್ 24 ಮತ್ತು 25ರಂದು ನಡೆಸಿರುವ ಶೋಧ ಮತ್ತು ಜಫ್ತಿ ಹಾಗೂ ಪಿಎಂಎಲ್‌ಎ ಕಾಯಿದೆ ಸೆಕ್ಷನ್ 17 ಅಡಿ ಹೇಳಿಕೆ ದಾಖಲಿಸಿಕೊಂಡಿರುವುದು ಕಾನೂನುಬಾಹಿರ ಎಂದು ಘೋಷಿಸಬೇಕು ವಿನಯ್ ಕುಲಕರ್ಣಿ ಕೋರಿದ್ದು, ಜಫ್ತಿ ಮತ್ತು ಶೋಧ ಹಾಗೂ 30.04.2025ರಂದು ಸಮನ್ಸ್ ಜಾರಿ ಮಾಡಿರುವುದನ್ನು ವಜಾ ಮಾಡಬೇಕು ಎಂದು ರಮೇಶ್ ಅವರು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿದ್ದಾರೆ.