Justice M Nagaprasanna 
ಸುದ್ದಿಗಳು

ಕೊಲೆ ಪ್ರಕರಣದಲ್ಲಿ ಆರೋಪಿ ವಕೀಲನಿಗೆ ರಕ್ಷಣೆ ಒದಗಿಸಲು ಆತ್ಮಸಾಕ್ಷಿ ಒಪ್ಪುವುದಿಲ್ಲ: ನ್ಯಾ. ನಾಗಪ್ರಸನ್ನ

“ಕೊಲೆ ಪ್ರಕರಣದಲ್ಲಿ ನಮ್ಮ ಆತ್ಮಸಾಕ್ಷಿಗೆ ವಿರುದ್ಧವಾಗಿ ಯಾವುದೇ ಆದೇಶ ಮಾಡುವುದಿಲ್ಲ. ಇಲ್ಲವಾದಲ್ಲಿ ಆದೇಶ ಮಾಡುತ್ತಿದ್ದೆ, ಜಾಮೀನು ಪಡೆಯಿರಿ” ಎಂದಿತು.

Bar & Bench

ಬೆಂಗಳೂರಿನ ಜಿಮ್‌ ಟ್ರೇನರ್‌ ವಿಜಯಕುಮಾರ್‌ ಕೊಲೆ ಪ್ರಕರಣದಲ್ಲಿ ಸುಫಾರಿ ಕೊಲೆಗಾರರಿಗೆ ಹಣ ಸಂದಾಯ ಮಾಡಿದ ಆರೋಪದಲ್ಲಿ ಏಳನೇ ಆರೋಪಿಯಾಗಿರುವ ವಕೀಲ ಬಿ ಲೋಕೇಶ್‌ ವಿರುದ್ಧದ ಪ್ರಕರಣಕ್ಕೆ ನೀಡಿದ್ದ ತಡೆಯನ್ನು ತೆರವುಗೊಳಿಸಿರುವ ಕರ್ನಾಟಕ ಹೈಕೋರ್ಟ್‌, “ರಕ್ಷಣೆ ಒದಗಿಸಲು ಆತ್ಮಸಾಕ್ಷಿ ಒಪ್ಪುವುದಿಲ್ಲ” ಎಂದಿದೆ.

ಪ್ರಕರಣದಿಂದ ತಮ್ಮನ್ನು ಕೈಬಿಡುವಂತೆ ಕೋರಿ ಲೋಕೇಶ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಲೇವಾರಿ ಮಾಡಿದ್ದು, ಸಕ್ಷಮ ನ್ಯಾಯಾಲಯದಲ್ಲಿ ಜಾಮೀನು ಕೋರುವಂತೆ ನಿರ್ದೇಶಿಸಿದೆ.

“ಕೊಲೆ ಪ್ರಕರಣದಲ್ಲಿ ನಮ್ಮ ಆತ್ಮಸಾಕ್ಷಿಗೆ ವಿರುದ್ಧವಾಗಿ ಯಾವುದೇ ಆದೇಶ ಮಾಡುವುದಿಲ್ಲ. ಇಲ್ಲವಾದಲ್ಲಿ ಆದೇಶ ಮಾಡುತ್ತಿದ್ದೆ, ಜಾಮೀನು ಪಡೆಯಿರಿ” ಎಂದಿತು.

ವಕೀಲ ಲೋಕೇಶ್‌ ಮತ್ತು ಇತರೆ ಆರೋಪಿಗಳ ನಡುವಿನ ಹಣ ವರ್ಗಾವಣೆ ಕುರಿತು ಪೀಠವು “ಒಂದರಿಂದ ಐದನೇ ಆರೋಪಿಗಳು ಸುಫಾರಿ ಕೊಲೆಗಾರರಾಗಿರುವಾಗ ವಕೀಲರ ಖಾತೆಯಿಂದ ಅವರ ಖಾತೆಗೆ ಹಣ ಹೇಗೆ ಹೋಗುತ್ತದೆ?” ಎಂದು ಪ್ರಶ್ನಿಸಿತು.

ಜಿಮ್‌ ಟ್ರೇನರ್‌ ಕೊಲೆ ಪ್ರಕರಣದಲ್ಲಿ ಏಳನೇ ಆರೋಪಿಯಾಗಿರುವ ಲೋಕೇಶ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಡಿ ಆರ್‌ ರವಿಶಂಕರ್‌ ಅವರು “ಸಕ್ಷಮ ನ್ಯಾಯಾಲಯದಲ್ಲಿ ಜಾಮೀನು ಪಡೆಯುವವರೆಗೆ ರಕ್ಷಣೆ ಮುಂದುವರಿಸಬೇಕು” ಎಂದು ಕೋರಿದರು. ಇದಕ್ಕೆ ಪೀಠವು ಸ್ಪಷ್ಟವಾಗಿ ನಿರಾಕರಿಸಿ, “ಆತ್ಮಸಾಕ್ಷಿ ಒಪ್ಪುವುದಿಲ್ಲ” ಎಂದಿತು.

ಪ್ರಾಸಿಕ್ಯೂಷನ್‌ ಪ್ರತಿನಿಧಿಸಿದ್ದ ರಾಜ್ಯ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಅವರು “ಒಂದರಿಂದ ಐದನೇ ಆರೋಪಿಗಳು ಸುಫಾರಿ ಕೊಲೆಗಾರರಾಗಿದ್ದು, ರಿಯಲ್‌ ಎಸ್ಟೇಟ್‌ ಉದ್ಯಮಿ ಪ್ರಸಾದ್‌ ರಾವ್‌ ಪ್ರತೀಕಾರ ತೋರಿಸಲು ಜಿಮ್‌ ಟ್ರೇನರ್‌ ಕೊಲೆ ಮಾಡಲಾಗಿದೆ. ಜಿಮ್‌ ಟ್ರೇನರ್‌ ಮತ್ತು ಪ್ರಸಾದ್‌ ರಾವ್‌ ನಡುವೆ ಸಂಬಂಧ ಇತ್ತು” ಎಂದರು.

ಜುಲೈ 6ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್‌, ಲೋಕೇಶ್‌ ವಿರುದ್ಧದ ಪ್ರಕರಣಕ್ಕೆ ತಡೆ ನೀಡಿತ್ತು. ಇಂದು ತುರ್ತು ವಿಚಾರಣೆಗೆ ಜಗದೀಶ್‌ ಅವರು ಅರ್ಜಿ ಸಲ್ಲಿಸಿದ್ದು, ತನಿಖೆಯಲ್ಲಿ ಸಾಕಷ್ಟು ಪ್ರಗತಿಯಾಗಿರುವುದನ್ನು ಪೀಠದ ಗಮನಕ್ಕೆ ತಂದರು. ಇದನ್ನು ಆಲಿಸಿದ ಪೀಠವು ವಕೀಲ ಲೋಕೇಶ್‌ ಅವರು ಸಕ್ಷಮ ನ್ಯಾಯಾಲಯದಲ್ಲಿ ಜಾಮೀನು ಕೋರುವುದು ಸೂಕ್ತ ಎಂದು ಅರ್ಜಿ ಇತ್ಯರ್ಥಪಡಿಸಿತು.