Karnataka High Court
Karnataka High Court 
ಸುದ್ದಿಗಳು

ತಿರುಮಕೂಡಲುವಿನಲ್ಲಿ ನಿರ್ಮಿಸಲಾಗಿರುವ ಡಾ.ಬಾಬು ಜಗಜೀವನ್ ರಾಮ್ ಪ್ರತಿಮೆ ಅನಾವರಣಕ್ಕೆ ತಡೆ ನೀಡಲು ಹೈಕೋರ್ಟ್‌ ನಕಾರ

Bar & Bench

ಮೈಸೂರು ಜಿಲ್ಲೆಯ ಟಿ ನರಸೀಪುರ ಪುರಸಭೆಯ ಹೊಸ ತಿರುಮಕೂಡಲು ಗ್ರಾಮದ ವಾರ್ಡ್ ಸಂಖ್ಯೆ 2ರಲ್ಲಿ ಪ್ರತಿಷ್ಠಾಪಿಸಲಾಗಿರುವ ಡಾ. ಬಾಬು ಜಗಜೀವನ್ ರಾಮ್ ಅವರ ಪ್ರತಿಮೆ ಅನಾವರಣಕ್ಕೆ ಕರ್ನಾಟಕ ಹೈಕೋರ್ಟ್ ಗುರುವಾರ ಅನುಮತಿಸಿದೆ.

ಪ್ರತಿಮೆ ಸ್ಥಾಪನೆಗೆ ಸಂಬಂಧಪಟ್ಟ ಪ್ರಾಧಿಕಾರದಿಂದ ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಏಪ್ರಿಲ್‌ 30ರಂದು ನಡೆಯಲಿರುವ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಕೋರಿ ಎಸ್ ಕರಿಯಪ್ಪ ಸೇರಿದಂತೆ ಟಿ ನರಸೀಪುರ ತಾಲ್ಲೂಕಿನ 13 ನಿವಾಸಿಗಳು ಸಲ್ಲಿಸಿದ್ದ ಮನವಿಯನ್ನು ನ್ಯಾಯಮೂರ್ತಿಗಳಾದ ಆರ್ ದೇವದಾಸ್ ಮತ್ತು ಕೆ ಎಸ್‌ ಹೇಮಲೇಖಾ ಅವರ ನೇತೃತ್ವದ ರಜಾಕಾಲೀನ ವಿಭಾಗೀಯ ಪೀಠ ನಡೆಸಿತು.

ಹೊಸ ತಿರುಮಕೂಡಲು ಗ್ರಾಮದ ವಾರ್ಡ್ ಸಂಖ್ಯೆ 2ರಲ್ಲಿ ಡಾ.ಬಾಬು ಜಗಜೀವನ್ ರಾಮ್ ಅವರ ಪ್ರತಿಮೆ ಸ್ಥಾಪಿಸಲಾಗಿದೆ. ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ಏಪ್ರಿಲ್‌ 30ರಂದು (ಶನಿವಾರ) ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಹಂಚಲಾಗಿದೆ. ಕಾರ್ಯಕ್ರಮಕ್ಕೆ ನವದೆಹಲಿ ಮತ್ತು ರಾಜ್ಯದ ವಿವಿಧ ರಾಜಕೀಯ ಪಕ್ಷಗಳ ನಾಯಕರನ್ನು ಆಹ್ವಾನಿಸಲಾಗಿದೆ. ಈ ಹಂತದಲ್ಲಿ ಪ್ರತಿಮೆ ಸ್ಥಾಪಿಸಿರುವ ಬೈರಾಪುರ ಗ್ರಾಮದ ಹಸಿರು ಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನ್ ರಾಮ್ ಯುವಕರ ಸಂಘದ ವಾದ ಆಲಿಸದೆ ಪ್ರತಿಮೆ ಅನಾವರಣಗೊಳಿಸದಂತೆ ನ್ಯಾಯಾಲಯ ಆದೇಶ ಮಾಡಿದರೆ ಅದು ಅಡ್ಡ ಪರಿಣಾಮಗಳಿಗೆ ದಾರಿ ಮಾಡಿಕೊಡುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಅನುಮತಿ ಪಡೆಯದೇ ಪ್ರತಿಮೆ ಸ್ಥಾಪನೆ ಮಾಡಲು ಸಾಧ್ಯವಿಲ್ಲ ಎಂಬುದಾಗಿ ನ್ಯಾಯಾಲಯಕ್ಕೆ ಮನವರಿಕೆಯಾದರೆ ಆ ಸಂದರ್ಭದಲ್ಲಿ ಪ್ರತಿಮೆ ತೆರವುಗೊಳಿಸುವಂತೆ ಸಂಘಕ್ಕೆ ನಿರ್ದೇಶಿಸಬಹುದು. ಹಾಗಾಗಿ, ಪ್ರತಿಮೆ ಅನಾವರಣಕ್ಕೆ ಈ ಹಂತದಲ್ಲಿ ತಡೆಯಾಜ್ಞೆ ನೀಡಲಾಗದು ಎಂದು ಪೀಠವು ಮಧ್ಯಂತರ ಆದೇಶ ಮಾಡಿದೆ. ಪ್ರತಿಮೆ ಅನಾವರಣಗೊಳಿಸಿದರೂ ಅದು ಅರ್ಜಿ ಕುರಿತು ಹೈಕೋರ್ಟ್ ಹೊರಡಿಸುವ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ನ್ಯಾಯಾಲಯ ಆದೇಶದಲ್ಲಿ ಸ್ಪಷ್ಟಪಡಿಸಿದೆ.