Justice Siddaiah Rachaiah, Karnataka High Court 
ಸುದ್ದಿಗಳು

"ಯತ್ರ ನಾರ್ಯಸ್ತು ಪೂಜ್ಯಂತೇ...": ಲೈಂಗಿಕ ದೌರ್ಜನ್ಯ ಎಸಗಿದಾತನಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್‌

"ಮಧ್ಯರಾತ್ರಿಯ ವೇಳೆ ರಸ್ತೆಯಲ್ಲಿ ಮಹಿಳೆಯರು ನಿರ್ಭಯವಾಗಿ ನಡೆದು ಹೋಗುವ ದಿನ ಭಾರತ ಸ್ವಾತಂತ್ರ್ಯ ಪಡೆದಂತೆ" ಎಂಬ ಮಹಾತ್ಮಾ ಗಾಂಧಿ ಅವರ ಹೇಳಿಕೆಗಳನ್ನು ಉಲ್ಲೇಖಿಸಿ, ಆರೋಪಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್.‌

Bar & Bench

"ಎಲ್ಲಿ ಸ್ತ್ರೀಯರು ಗೌರವಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ. ಎಲ್ಲಿ ಸ್ತ್ರೀಯರನ್ನು ಅಪಮಾನಿಸಲಾಗುವುದೋ ಅಲ್ಲಿ ಮಾಡುವ ಎಲ್ಲ ಕಾರ್ಯಗಳೂ ವ್ಯರ್ಥ" ಎಂಬ ಮನುಸ್ಮೃತಿಯ ಶ್ಲೋಕವನ್ನು ಉಲ್ಲೇಖಿಸಿ, ಯುವತಿಯೊಬ್ಬಳ‌ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ವ್ಯಕ್ತಿಗೆ ಕರ್ನಾಟಕ ಹೈಕೋರ್ಟ್ ಈಚೆಗೆ ಜಾಮೀನು ನಿರಾಕರಿಸಿದೆ.

ಮಧ್ಯರಾತ್ರಿ ವೇಳೆ ಸಹೋದರ ಸಂಬಂಧಿಯ ಜತೆ ನಡೆದು ಹೋಗುತ್ತಿದ್ದ ಬಿಹಾರ ಮೂಲದ 19 ವರ್ಷದ ಯುವತಿಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಜಾಮೀನು ಕೋರಿ ಕೋಲಾರ ಜಿಲ್ಲೆಯ ಮುಳಬಾಗಿಲು ಮೂಲದ ಸೈಯದ್‌ ಪರ್ವೀಜ್‌ ಮುಷರಫ್ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಯನ್ನು ನ್ಯಾಯಮೂರ್ತಿ ಎಸ್‌ ರಾಚಯ್ಯ ಅವರ ಏಕಸದಸ್ಯ ಪೀಠ ವಜಾಗೊಳಿಸಿದೆ.

ಮೇಲ್ಮನವಿದಾರ ಆರೋಪಿಯು ಭವಿಷ್ಯದ ಬಗ್ಗೆ ಕನಸು ಕಂಡಿದ್ದ ಹಾಗೂ ಬದುಕಿನ ಗುರಿಯತ್ತ ಗಮನ ಹರಿಸಬೇಕಿದ್ದ ಹದಿಹರೆಯದ ಯುವತಿಯ ಮೇಲೆ ಅತ್ಯಂತ ಹೀನ ಕೃತ್ಯವೆಸಗಿದ್ದಾನೆ. ಮತ್ತೊಬ್ಬ ಆರೋಪಿಯೊಂದಿಗೆ ಸೇರಿ ಮೇಲ್ಮನವಿದಾರ ಎಸಗಿರುವ ಕೃತ್ಯವು ಆಕೆಯ ಬಾಳಿನಲ್ಲಿ ಮಾಯಲಾಗದ ಗಾಯವಾಗಿ ಉಳಿದುಕೊಳ್ಳಲಿದೆ. ಇಂಥ ಸಂಕಟದಿಂದ ಹೊರಬರಲು ಸಂತ್ರಸ್ತೆಗೆ ಬಹಳ ಕಷ್ಟವಾಗಲಿದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯವು "ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ..." ಎಂಬ ಮನುಸ್ಮೃತಿಯ ಶ್ಲೋಕ ಹಾಗೂ "ಮಧ್ಯರಾತ್ರಿಯ ವೇಳೆ ರಸ್ತೆಯಲ್ಲಿ ಮಹಿಳೆಯರು ನಿರ್ಭಯವಾಗಿ ನಡೆದು ಹೋಗುವ ದಿನ ಭಾರತ ಸ್ವಾತಂತ್ರ್ಯ ಪಡೆದಂತೆ" ಎಂಬ ಮಹಾತ್ಮಾ ಗಾಂಧಿ ಅವರ ಹೇಳಿಕೆಗಳನ್ನು ಉಲ್ಲೇಖಿಸಿ, ಆರೋಪಿಗೆ ಜಾಮೀನು ಮಂಜೂರು ಮಾಡಲು ನಿರಾಕರಿಸಿದೆ.

ಮೇಲ್ಮನವಿದಾರನ ಪರ ವಕೀಲ ನೌಷಾದ್ ಪಾಷಾ ಅವರು “ಪ್ರಕರಣದ ಮೊದಲ ಆರೋಪಿಯ ವಿರುದ್ಧ ಯುವತಿಯ ಮೇಲೆ ಅರ್ಜಿದಾರ ಅತ್ಯಾಚಾರ ಎಸಗಿದ ಆರೋಪವಿದ್ದು, ಮೇಲ್ಮನವಿದಾರ ಅತ್ಯಾಚಾರವೆಸಗಿಲ್ಲ. ಸಂತ್ರಸ್ತೆಯ ಸೋದರ ಸಂಬಂಧಿಯನ್ನು ಹಿಡಿದುಕೊಂಡಿದ್ದ ಆರೋಪವಷ್ಟೇ ಆತನ ಮೇಲಿದ್ದು, ತಪ್ಪಾಗಿ ಪ್ರಕರಣ ದಾಖಲಿಸಲಾಗಿದೆ. ಆದ್ದರಿಂದ, ಆತನನ್ನು ಜಾಮೀನಿನ ಮೇಲೆ‌ ಬಿಡುಗಡೆ ಮಾಡಬೇಕು” ಎಂದು ಕೋರಿದ್ದರು.

ಇದಕ್ಕೆ ಆಕ್ಷೇಪಿಸಿದ್ದ ಹೆಚ್ಚುವರಿ ಸರ್ಕಾರಿ ಅಭಿಯೋಜಕಿ ಪುಷ್ಪಲತಾ ಅವರು “ಮೇಲ್ಮನವಿದಾರ ಸಂತ್ರಸ್ತೆಯ ಸಹೋದರ ಸಂಬಂಧಿಯನ್ನು ಹಿಡಿದುಕೊಂಡು ಆತನನ್ನು ನಿರಂತರವಾಗಿ ಬೆದರಿಸುವ ಮೂಲಕ ಅತ್ಯಾಚಾರವೆಸಗಲು ಮೊದಲನೇ ಆರೋಪಿಗೆ ಸಹಕರಿಸಿದ್ದಾನೆ. ಸಂತ್ರಸ್ತ ಯುವತಿಗೆ ಆತ್ಮಸ್ಥೈರ್ಯ ತುಂಬುವ ಉದ್ದೇಶದಿಂದ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಆರೋಪಿಗೆ ಜಾಮೀನು ಮಂಜೂರು ಮಾಡಬಾರದು” ಎಂದು ಮನವಿ ಮಾಡಿದ್ದರು.

ಪ್ರಕರಣದ ಹಿನ್ನೆಲೆ: ಬಿಹಾರದ ಬಂಕಾ ಜಿಲ್ಲೆಯ ಗೊರಗಮ್ಮ ಗ್ರಾಮ ಮೂಲದ 19 ವರ್ಷದ ಸಂತ್ರಸ್ತೆ ಕೇರಳದ ಕಟ್ಟಪ್ಪನ್‌ ಗ್ರಾಮದಲ್ಲಿ ಏಲಕ್ಕಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ತನ್ನ ಸಹೋದರಿ ಹಾಗೂ ಬಾವನ ಜತೆ ನೆಲಸಿದ್ದಳು. ಅಲ್ಲಿ ಕೆಲಸ ಮಾಡಲು ಇಚ್ಛಿಸದ ಆಕೆ ತನ್ನ ಊರಿಗೆ ತೆರಳಲು ನಿರ್ಧರಿಸಿದ್ದಳು. 2025ರ ಏಪ್ರಿಲ್‌ 1ರಂದು ಎರ್ನಾಕುಲಂ ರೈಲು ನಿಲ್ದಾಣಕ್ಕೆ ತೆರಳಿದ್ದ ಆಕೆಗೆ ಬೆಂಗಳೂರಿಗೆ ಹೋಗುವ ರೈಲು ಹತ್ತಿ ಕೆ ಆರ್ ಪುರ ‌ನಿಲ್ದಾಣದಲ್ಲಿ ಇಳಿದು, ಅಲ್ಲಿಂದ ಬಿಹಾರಕ್ಕೆ ಹೊರಡುವಂತೆ ತಿಳಿಸಲಾಗಿತ್ತು. ಅದರಂತೆ, ಬೆಂಗಳೂರಿನ ರೈಲು ಹತ್ತಿದ್ದ ಯುವತಿ ಏಪ್ರಿಲ್ 2ರ ಮಧ್ಯರಾತ್ರಿ 1.30ರ ಸಂದರ್ಭದಲ್ಲಿ ಕೆ ಆರ್‌ ಪುರ ರೈಲು ನಿಲ್ದಾಣಕ್ಕೆ ಬಂದಿಳಿದಿದ್ದಳು.

ಅಲ್ಲಿ ತನ್ಮ ಸಹೋದರ ಸಂಬಂಧಿಯನ್ನು ಭೇಟಿಯಾಗಿದ್ದ ಯುವತಿ, ಊಟ ಮಾಡಲು ಆತನೊಂದಿಗೆ ಕೆ ಆರ್‌ ಪುರದಿಂದ ಮಹದೇವಪುರದ ಕಡೆಗೆ ನಡೆದು ಹೋಗುತ್ತಿದ್ದಳು. ಈ ವೇಳೆ, ಮೊದಲ ಆರೋಪಿ ಹಾಗೂ ಮೇಲ್ಮನವಿದಾರ ಯುವತಿ ಹಾಗೂ ಆಕೆಯ ಸೋದರ ಸಂಬಂಧಿಯನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದರು. ಬಳಿಕ ಮೊದಲ ಆರೋಪಿ ಸಂತ್ರಸ್ತೆಯ ಮೇಲೆ ಅತ್ಯಾಚಾರವೆಸಗಿದರೆ, ಎರಡನೇ ಆರೋಪಿಯಾದ ಮೇಲ್ಮನವಿದಾರ ಸೋದರ ಸಂಬಂಧಿಯನ್ನು ಹಿಡಿದಿಟ್ಟುಕೊಂಡಿದ್ದ. ಸಂತ್ರಸ್ತೆಯ ಕಿರುಚಾಟ ಕೇಳಿ ಸ್ಥಳದಲ್ಲಿ ಜನ ಸೇರುತ್ತಿದ್ದಂತೆ ಮೊದಲ ಆರೋಪಿ ಪರಾರಿಯಾಗಿದ್ದರೆ, ಮೇಲ್ಮನವಿದಾರನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು.

ಘಟನೆ ಸಂಬಂಧ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಯ ಜಾಮೀನು ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ವಜಾಗೊಳಿಸಿದ್ದರಿಂದ, ಆತ ಜಾಮೀನು ಕೋರಿ ಹೈಕೋರ್ಟ್​‌ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದನು.

Syed Parveez Musharaff Vs State of Karnataka.pdf
Preview