JDS former MLA K S Lingesh and Karnataka HC 
ಸುದ್ದಿಗಳು

ಬಗರ್‌ಹುಕುಂ ಭೂ ಮಂಜೂರಾತಿ ಅಕ್ರಮ: ಮಾಜಿ ಶಾಸಕ ಲಿಂಗೇಶ್‌ ವಿರುದ್ಧದ ಎಫ್‌ಐಆರ್‌ ರದ್ದತಿಗೆ ಹೈಕೋರ್ಟ್‌ ನಕಾರ

ಬೇಲೂರು ತಾಲ್ಲೂಕಿನಲ್ಲಿ 2,750 ಎಕರೆ ಭೂಮಿಯನ್ನು 1,430 ಮಂದಿ ನಕಲಿ ಮತ್ತು ಅಕ್ರಮ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಮಾಜಿ ಶಾಸಕ ಲಿಂಗೇಶ್‌ ಮತ್ತು ಇತರರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.

Siddesh M S

ಬಗರ್‌ಹುಕುಂ ಸಾಗುವಳಿ ಭೂ ಮಂಜೂರಾತಿ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಜೆಡಿಎಸ್‌ ಮಾಜಿ ಶಾಸಕ ಕೆ ಎಸ್‌ ಲಿಂಗೇಶ್‌ ಸೇರಿ 9 ಮಂದಿಯ ವಿರುದ್ಧ ಹಾಸನ ಜಿಲ್ಲೆಯ ಬೇಲೂರು ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದುಪಡಿಸಲು ಕರ್ನಾಟಕ ಹೈಕೋರ್ಟ್‌ ಈಚೆಗೆ ನಿರಾಕರಿಸಿದೆ.

ಬಗರ್‌ಹುಕುಂ ಸಾಗುವಳಿ ಸಮಿತಿಯ ಮಾಜಿ ಅಧ್ಯಕ್ಷ ಕೆ ಎಸ್‌ ಲಿಂಗೇಶ್‌, ಸಮಿತಿಯ‌ ಮಾಜಿ ಸದಸ್ಯರಾದ ಜಿ ಕೆ ಕುಮಾರ್‌, ಶೈಲಾ ಮೋಹನ್‌, ಟಿ ಆರ್‌ ರಮೇಶ್‌, ಪರ್ವತಗೌಡ, ಎಂ ಆರ್‌ ಚೇತನಾ, ಈಶ್ವರ್‌ ಪ್ರಸಾದ್‌, ಎಸ್‌ ಎನ್‌ ಲಿಂಗೇಶ್‌ ಮತ್ತು ರಂಗನಾಥ್‌ ಅವರು ತಮ್ಮ ವಿರುದ್ಧದ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಜಾ ಮಾಡಿದೆ. ವಿಸ್ತೃತ ಆದೇಶ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.

ಬೇಲೂರು ತಾಲ್ಲೂಕಿನಲ್ಲಿ 2,750 ಎಕರೆ ಭೂಮಿಯನ್ನು 1,430 ಮಂದಿ ನಕಲಿ ಮತ್ತು ಅಕ್ರಮ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ. ಬೇಲೂರು ತಾಲ್ಲೂಕು ಬಗರ್‌ ಹುಕುಂ ಸಾಗುವಳಿ ಸಮಿತಿ ಅಧ್ಯಕ್ಷರಾಗಿದ್ದ ಮೊದಲ ಆರೋಪಿ ಮಾಜಿ ಶಾಸಕ ಲಿಂಗೇಶ್‌ ಅವರು 750 ಎಕರೆಗಿಂತ ಹೆಚ್ಚಿನ ಪ್ರಮಾಣದ ಸರ್ಕಾರಿ ಜಮೀನುಗಳ ಅನುದಾನವನ್ನು ಅನುಮೋದಿಸಿದ್ದಾರೆ. ಆರೋಪಿಗಳೆಲ್ಲರೂ ಅಧಿಕಾರಿಗಳ ಜೊತೆ ಶಾಮೀಲಾಗಿ ತಮ್ಮ ಅಧಿಕಾರ ಮತ್ತು ಸ್ಥಾನ ದುರ್ಬಳಕೆ ಮಾಡಿಕೊಂಡಿದ್ದಾರೆ. ನಕಲಿ ದಾಖಲೆ ದೃಷ್ಟಿಸಲು ಸಹರಿಸುವ ಮೂಲಕ ಅಧಿಕಾರಿಗಳು ಭಾಗಿಯಾಗಿದ್ದು, ಸರ್ಕಾರಕ್ಕೆ ವಂಚಿಸುವ ಉದ್ದೇಶದಿಂದ ಅಪರಾಧಿಕ ಒಳಸಂಚು ನಡೆಸಿದ್ದಾರೆ. ಮಾಜಿ ಶಾಸಕ ವೈ ಎನ್‌ ರುದ್ರೇಶ್‌ ಗೌಡ ಅವರೂ ಅಕ್ರಮ ವಹಿವಾಟಿನ ಭಾಗವಾಗಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಸಾಮಾಜಿಕ ಕಾರ್ಯಕರ್ತ ಕೆ ಸಿ ರಾಜಣ್ಣ ದೂರು ಆಧರಿಸಿ ಶಾಸಕ ಹಾಗೂ ತಾಲ್ಲೂಕಿನ ಬಗರ್‌ಹುಕುಂ ಸಾಗುವಳಿ ಸಮಿತಿಯ (ಭೂ ಮಂಜೂರಾತಿ) ಮಾಜಿ ಅಧ್ಯಕ್ಷ ಕೆ ಎಸ್‌ ಲಿಂಗೇಶ್‌, ಸಮಿತಿಯ ಮಾಜಿ ಸದಸ್ಯರಾದ ಕುಮಾರ್‌ ಜಿ ಕೆ ಅಲಿಯಾಸ್‌ ಕೆಂಚೇಗೌಡ, ಶೈಲಾ ಮೋಹನ್‌, ಟಿ ಆರ್‌ ರಮೇಶ್‌ ಅಲಿಯಾಸ್‌ ರುದ್ರಯ್ಯ, ಪರ್ವತಗೌಡ ಅಲಿಯಾಸ್‌ ಕಾಳೇಗೌಡ, ಚೇತನಾ, ಈಶ್ವರ ಪ್ರಸಾದ್‌, ಎಸ್‌ ಎನ್‌ ಲಿಂಗೇಶ್‌, ರಂಗತ್‌, ಭಾಗ್ಯಮ್ಮ, ಸಮಿತಿಯ ಕಾರ್ಯದರ್ಶಿಗಳು ಹಾಗೂ ತಹಶೀಲ್ದಾರ್‌ಗಳಾದ ಬಿ ಎ ಜಗದೀಶ್‌, ಎಚ್‌ ಎಸ್‌ ಪರಮೇಶ್‌, ಜೆ ಉಮೇಶ್‌, ಬಿ ಎಸ್‌ ಪುಟ್ಟಶೆಟ್ಟಿ, ಯು ಮೋಹನ್‌ ಕುಮಾರ್‌ ಅವರು ಕ್ರಮವಾಗಿ 1-15 ಆರೋಪಿಗಳಾಗಿದ್ದಾರೆ. ಹಾಸನದ ಅನಾಮಧೇಯ ವ್ಯಕ್ತಿಯನ್ನು 16ನೇ ಆರೋಪಿಯನ್ನಾಗಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್‌ಗಳಾದ 468, 464, 465, 471, 409, 420, 120ಬಿ ಅಡಿ ಪ್ರಕರಣ ದಾಖಲಿಸಲಾಗಿದೆ.

ಕೋಲಾರದ ರಾಜಣ್ಣ ಅವರ ಖಾಸಗಿ ದೂರನ್ನು ಪರಿಗಣಿಸಿದ್ದ ವಿಚಾರಣಾಧೀನ ನ್ಯಾಯಾಲಯವು ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲು ಮಾಡಲು ಆದೇಶಿಸಿತ್ತು. ಇದರ ಅನುಸಾರ ಎಫ್‌ಐಆರ್‌ ದಾಖಲಾಗಿದೆ. ಇದರ ರದ್ದತಿ ಕೋರಿ ಲಿಂಗೇಶ್‌ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾ ಮಾಡಿದೆ.

ಅರ್ಜಿದಾರರ ಪರವಾಗಿ ಹಿರಿಯ ವಕೀಲ ಅಶೋಕ ಹಾರನಹಳ್ಳಿ, ದೂರುದಾರ ರಾಜಣ್ಣ ಪರವಾಗಿ ವಕೀಲ ಎಸ್‌ ಉಮಾಪತಿ ವಾದಿಸಿದ್ದರು.