ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಮುಂದೂಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ಕುರಿತು ಕರ್ನಾಟಕ ಹೈಕೋರ್ಟ್ ಈಚೆಗೆ ರಾಜ್ಯ ಸರ್ಕಾರ ಮತ್ತು ವಾರ್ತಾ ಇಲಾಖೆ ಆಯುಕ್ತರಿಗೆ ಮಂಗಳವಾರ ನೋಟಿಸ್ ಜಾರಿಗೊಳಿಸಿದೆ.
ಚಿತ್ರ ನಿರ್ಮಾಪಕರಾದ ಸಂವಿಧಾನ ಸಿನಿ ಕಂಬೈನ್ಸ್‌ನ ಎ ವಿ ನಾಗರಾಜು ಮತ್ತು ಎ ಆರ್ ಪ್ರೊಡಕ್ಷನ್ಸ್‌ನ ಅರುಣ್ ರೈ ತೋಡರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಕೆಲ ಕಾಲ ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಲಯವು “ಚಿತ್ರೋತ್ಸವ ಆರಂಭವಾಗುವ ಕೊನೆ ಕ್ಷಣದಲ್ಲಿ ನ್ಯಾಯಾಲಯದಲ್ಲಿಅರ್ಜಿ ಸಲ್ಲಿಸಿರುವುದರಿಂದ ಈ ಹಂತದಲ್ಲಿ ತಡೆ ನೀಡಲಾಗದು” ಎಂದು ಹೇಳಿ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಫೆಬ್ರವರಿ 5ಕ್ಕೆ ನಿಗದಿಪಡಿಸಿತು.
ಅರ್ಜಿದಾರರ ಪರ ವಕೀಲ ಜಿ ಆರ್ ಮೋಹನ್ ಅವರು “ಚಲನಚಿತ್ರೋತ್ಸವಕ್ಕೆ ಚಲನಚಿತ್ರಗಳನ್ನು ಆಯ್ಕೆ ಮಾಡಲು ರಚಿಸಿದ್ದ ಸಮಿತಿಯ ವಿರುದ್ಧವೇ ಆಕ್ಷೇಪ ಎತ್ತಿ ದೂರು ನೀಡಲಾಗಿದೆ. ಅದನ್ನು ಪರಿಹರಿಸಿಲ್ಲ. ಸಮಿತಿ ಪಾರದರ್ಶಕ ರೀತಿಯಲ್ಲಿ ಚಿತ್ರಗಳನ್ನು ಆಯ್ಕೆ ಮಾಡಿಲ್ಲ. ಹೀಗಾಗಿ, ಹೊಸ ಸಮಿತಿ ರಚಿಸುವಂತೆ ನಿರ್ದೇಶನ ನೀಡಬೇಕು” ಎಂದು ಕೋರಿದರು.
ಹೆಚ್ಚುವರಿ ಅಡ್ವೊಕೇಟ್ ಜನರಲ್ ರೊಬೆನ್ ಜಾಕಬ್ ಅವರು “ಗುರುವಾರದಿಂದಲೇ ಚಿತ್ರೋತ್ಸವ ಆರಂಭವಾಗುತ್ತಿದ್ದು, ಈ ಹಂತದಲ್ಲಿ ಯಾವುದೇ ತಡೆ ನೀಡಬಾರದು” ಎಂದು ಮನವಿ ಮಾಡಿದರು