Congress MLA B Nagendra, ED & Karnataka HC 
ಸುದ್ದಿಗಳು

ಅಕ್ರಮ ಹಣ ವರ್ಗಾವಣೆ ಪ್ರಕರಣ: ಮಾಜಿ ಸಚಿವ ನಾಗೇಂದ್ರ ವಿರುದ್ಧದ ವಿಚಾರಣಾ ಪ್ರಕ್ರಿಯೆ ಮುಂದೂಡಿದ ಹೈಕೋರ್ಟ್‌

ವಿಶೇಷ ನ್ಯಾಯಾಲಯವು ನಾಗೇಂದ್ರ ವಿರುದ್ಧ ಸಂಜ್ಞೇಯ ತೆಗೆದುಕೊಳ್ಳುವ ಮುನ್ನ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿಯನ್ನೂ ಪಡೆದಿಲ್ಲ ಮತ್ತು ಅರ್ಜಿದಾರರ ವಾದವನ್ನೂ ಆಲಿಸಿಲ್ಲ ಎಂದು ಆಕ್ಷೇಪಿಸಿದ ಸಿ ವಿ ನಾಗೇಶ್‌.

Bar & Bench

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣವನ್ನು ಅಕ್ರಮವಾಗಿ ವರ್ಗಾಯಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ ನಾಗೇಂದ್ರ ವಿರುದ್ಧ ಹಣ ಅಕ್ರಮ ವರ್ಗಾವಣೆ ಕಾಯಿದೆ ಅಡಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಡೆಸುತ್ತಿರುವ ವಿಚಾರಣಾ ಪ್ರಕ್ರಿಯೆಯನ್ನು ಫೆಬ್ರವರಿ 27ರವರೆಗೆ ಕರ್ನಾಟಕ ಹೈಕೋರ್ಟ್‌ ಮುಂದೂಡಿದೆ.

ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ ದಾಖಲಿಸಿರುವ ಪ್ರಕರಣ (ಇಸಿಐಆರ್‌) ಮತ್ತು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಂಜ್ಞೇ ಪರಿಗಣಿಸಿರುವುದನ್ನು ರದ್ದುಪಡಿಸಬೇಕು ಎಂದು ಕೋರಿ ಮಾಜಿ ಸಚಿವ ಬಿ ನಾಗೇಂದ್ರ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಈಚೆಗೆ ನಡೆಸಿತು.

ವಾದ-ಪ್ರತಿವಾದ ಆಲಿಸಿದ ಪೀಠವು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಅರ್ಜಿದಾರ ನಾಗೇಂದ್ರ ವಿರುದ್ಧ ನಡೆಸುತ್ತಿರುವ ವಿಚಾರಣಾ ಪ್ರಕ್ರಿಯೆಯನ್ನು ಫೆಬ್ರವರಿ 27ರವರೆಗೆ ಮುಂದೂಡಿತು.

ವಿಚಾರಣೆ ವೇಳೆ ನಾಗೇಂದ್ರ ಪರ ಹಿರಿಯ ವಕೀಲ ಸಿ ವಿ ನಾಗೇಶ್‌ ಅವರು “ಪ್ರಕರಣ ಸಂಬಂಧ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್‌) ಅನುಸಾರ ವಿಶೇಷ ನ್ಯಾಯಾಲಯವು ಸಂಜ್ಞೇ ತೆಗೆದುಕೊಂಡಿದೆ. ಆದರೆ, ಬಿಎನ್‌ಎಸ್‌ಎಸ್‌ ಸೆಕ್ಷನ್‌ 223 ಪ್ರಕಾರ, ಬಿಎನ್‌ಎಸ್‌ಎಸ್‌ ಅಡಿಯಲ್ಲಿ ಸಂಜ್ಞೇಯ ತೆಗೆದುಕೊಳ್ಳುವ ಮುನ್ನ ಆರೋಪಿಗೆ ನೋಟಿಸ್‌ ಜಾರಿಗೊಳಿಸಿ, ಅವರ ವಾದ ಆಲಿಸಬೇಕಾಗುತ್ತದೆ. ಇನ್ನೂ ಅರ್ಜಿದಾರರು ಸಾರ್ವಜನಿಕ ಸೇವಕರಾಗಿದ್ದಾರೆ. ಅವರ ವಿರುದ್ಧ ಸಂಜ್ಞೇ ತೆಗೆದುಕೊಳ್ಳಬೇಕಾದರೆ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯಬೇಕಾಗುತ್ತದೆ. ಆದರೆ, ಈ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯವು ಸಂಜ್ಞೇ ತೆಗೆದುಕೊಳ್ಳುವ ಮುನ್ನ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿಯನ್ನೂ ಪಡೆದಿಲ್ಲ ಮತ್ತು ಅರ್ಜಿದಾರರ ವಾದವನ್ನೂ ಆಲಿಸಿಲ್ಲ. ಹೀಗಾಗಿ, ಪ್ರಕರಣ ಸಂಬಂಧ ವಿಚಾರಣಾ ನ್ಯಾಯಾಲಯ ವಿಚಾರಣೆಯನ್ನು ಮುಂದುವರಿಸಲು ಅನುಮತಿಸಬಾರದು” ಎಂದರು.

ಇದಕ್ಕೆ ಆಕ್ಷೇಪಿಸಿದ ಜಾರಿ ನಿರ್ದೇಶನಾಲಯದ ಪರ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌ ವಿ ರಾಜು ಅವರು “ಬಿಎನ್‌ಎಸ್‌ಎಸ್‌ ಜಾರಿಗೆ ಬರುವ ಮುನ್ನ 2024ರ ಜೂನ್‌ 6ರಂದು ಜಾರಿ ನಿರ್ದೇಶನಾಲಯವು ಇಸಿಐಆರ್‌ ದಾಖಲಿಸಿದೆ. ಬಿಎನ್‌ಎಸ್‌ಎಸ್‌ 2024ರ ಜುಲೈ 1ರಿಂದ ಜಾರಿಗೆ ಬಂದಿದೆ. ಅಂದರೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಕಾರ್ಯಗಳನ್ನು ಬಿಎನ್‌ಎಸ್‌ಎಸ್‌ ಜಾರಿಗೆ ಮುನ್ನ ಜಾರಿ ನಿರ್ದೇಶನಾಲಯ ಕೈಗೊಂಡಿದೆ. ಇದರಿಂದ ವಿಶೇಷ ನ್ಯಾಯಾಲಯವು ಅಪರಾಧ ಪ್ರಕ್ರಿಯಾ ಸಂಹಿತೆಯನ್ನು (ಸಿಆರ್‌ಪಿಸಿ) ಅನ್ವಯಿಸಿ ಸಂಜ್ಞೇ ತೆಗೆದುಕೊಂಡಿದೆ. ಹೀಗಾಗಿ, ಸಂಜ್ಞೇ ಸ್ವೀಕರಿಸಿರುವ ಪ್ರಕ್ರಿಯೆಯಲ್ಲಿ ಯಾವುದೇ ಲೋಪವಿಲ್ಲ ಮತ್ತು  ಬಿಎನ್‌ಎಸ್‌ಎಸ್‌ ಸೆಕ್ಷನ್‌ 223ರ ಉಲ್ಲಂಘನೆಯಾಗಿಲ್ಲ. ಆದ ಕಾರಣ ವಿಚಾರಣಾ ನ್ಯಾಯಾಲಯದ ವಿಚಾರಣೆ ಮುಂದುವರಿಸಲು ಅನುಮತಿ ನೀಡಬೇಕು” ಎಂದು ಕೋರಿದರು.

ಇದಕ್ಕೆ ಆಕ್ಷೇಪಿಸಿದ ಸಿ ವಿ ನಾಗೇಶ್‌ ಅವರು “ಅರ್ಜಿಯಲ್ಲಿ ಜಾರಿ ನಿರ್ದೇಶನಾಲಯದ ತನಿಖೆ ಅಥವಾ ವಿಚಾರಣಾ ನ್ಯಾಯಾಲಯದ ವಿಚಾರಣೆಯನ್ನು ಪ್ರಶ್ನಿಸಿಲ್ಲ. ವಿಚಾರಣಾ ನ್ಯಾಯಾಲಯವು ತೆಗೆದಕೊಂಡಿರುವ ಸಂಜ್ಞೇಯವನ್ನು ಪ್ರಶ್ನಿಸಲಾಗಿದೆ. ಹೀಗಾಗಿ, ಬಿಎನ್‌ಎಸ್‌ಎಸ್‌ 223 ಅನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕಿದೆ” ಎಂದು ಪೀಠದ ಗಮನಸೆಳೆದರು.

ವಾಲ್ಮೀಕಿ ನಿಗಮದ ಬ್ಯಾಂಕ್ ಖಾತೆಯಿಂದ ಅಕ್ರಮವಾಗಿ 95 ಕೋಟಿ ಹಣ ವರ್ಗಾಯಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಮಾಜಿ ಸಚಿವ ಬಿ ನಾಗೇಂದ್ರ ಹಾಗೂ ಮತ್ತಿತರರು ವಿರುದ್ಧ ಇಸಿಐಆರ್‌ ದಾಖಲಿಸಿ ತನಿಖೆ ನಡೆಸಿ, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಆರೊಪ ಪಟ್ಟಿ ಸಲ್ಲಿಸಿತ್ತು. ವಿಶೇಷ ನ್ಯಾಯಾಲಯವು ಸಂಜ್ಞೇಯ ತೆಗೆದುಕೊಂಡು 2024ರ ಅಕ್ಟೋಬರ್‌ 5ರಂದು ಆದೇಶಿಸಿತ್ತು.