Ranya Rao and Karnataka High Court 
ಸುದ್ದಿಗಳು

ಚಿನ್ನ ಕಳ್ಳ ಸಾಗಣೆ ಪ್ರಕರಣ: ನಟಿ ರನ್ಯಾ ರಾವ್‌, ತರುಣ್‌ ರಾಜುಗೆ ಜಾಮೀನು ನಿರಾಕರಿಸಿದ ಹೈಕೋರ್ಟ್‌

ಮಾರ್ಚ್‌ 14ರಂದು ಮ್ಯಾಜಿಸ್ಟ್ರೇಟ್‌ ಮತ್ತು ಮಾರ್ಚ್‌ 26ರಂದು ಬೆಂಗಳೂರಿನ ಸತ್ರ ನ್ಯಾಯಾಲಯವು ರನ್ಯಾಗೆ ಜಾಮೀನು ನಿರಾಕರಿಸಿದ್ದವು. ಜೂನ್‌ 3ರಂದು ರನ್ಯಾ ಬಂಧಿಸಲಾಗಿತ್ತು.

Bar & Bench

ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಆರೋಪಿಗಳಾಗಿರುವ ನಟಿ ರನ್ಯಾ ರಾವ್‌ ಅಲಿಯಾಸ್‌ ಹರ್ಷವರ್ಧಿನಿ ರನ್ಯಾ ಮತ್ತು ತರುಣ್‌ ಕುಂಡೂರು ರಾಜು ಅವರ ಜಾಮೀನು ಅರ್ಜಿಗಳನ್ನು ಕರ್ನಾಟಕ ಹೈಕೋರ್ಟ್‌ ಶನಿವಾರ ವಜಾಗೊಳಿಸಿದೆ.

ಮೊದಲ ಆರೋಪಿ ರನ್ಯಾ ಮತ್ತು ಎರಡನೇ ಆರೋಪಿ ತರುಣ್‌ ರಾಜು ಅವರಿಗೆ ಜಾಮೀನು ನೀಡಲು ನ್ಯಾಯಮೂರ್ತಿ ಎಸ್‌ ವಿಶ್ವಜಿತ್‌ ಶೆಟ್ಟಿ ಅವರ ಏಕಸದಸ್ಯ ಪೀಠವು ನಿರಾಕರಿಸಿದೆ. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.

ಕಂದಾಯ ಗುಪ್ತಚರ ನಿರ್ದೇಶನಾಲಯ ಪ್ರತಿನಿಧಿಸಿದ್ದ ವಕೀಲ ಮಧು ಎನ್.ರಾವ್‌ ಅವರು “ರನ್ಯಾ ಅವರು ಚಿನ್ನ ಕಳ್ಳ ಸಾಗಣೆ ಮಾಡಿ ಅದನ್ನು ಮೂರನೇ ಆರೋಪಿ ಬೆಂಗಳೂರಿನ ನಿವಾಸಿ ಸಾಹಿಲ್‌ ಜೈನ್‌ಗೆ ತಲುಪಿಸುತ್ತಿದ್ದರು. ಸಾಹಿಲ್‌ ಈ ಹಿಂದೆ ಚಿನ್ನ ಕಳ್ಳ ಸಾಗಣೆ ವ್ಯವಹಾರದಲ್ಲಿದ್ದ. ರಾಜು ಚಿನ್ನ ಖರೀದಿಸಿ ರನ್ಯಾಗೆ ನೀಡಿದ್ದು, ಆಕೆ ಜೈನ್‌ಗೆ ಚಿನ್ನ ತಲುಪಿಸಿರುವುದಕ್ಕೆ ಲಿಂಕ್‌ ಇದೆ. ಎಲ್ಲಾ ಆರೋಪಿಗಳು ಸೇರಿ 100 ಕೆಜಿ ಸಂಗ್ರಹಿಸಿರುವುದಾಗಿ ಘೋಷಿಸಿದ್ದಾರೆ. ಇದರ ತನಿಖೆ ನಡೆಯುತ್ತಿದ್ದು, ಈ ಸಂಬಂಧ ರನ್ಯಾ ಹಾಗೂ ರಾಜು ಅವರ ಹೆಚ್ಚುವರಿ ಹೇಳಿಕೆ ಪಡೆಯಲು ವಿಚಾರಣಾಧೀನ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ” ಎಂದಿದ್ದರು.

“ರಾಜು ಅಮೆರಿಕಾದ ಪ್ರಜೆಯಾಗಿದ್ದು, ದುಬೈನಲ್ಲಿ ಚಿನ್ನ ಖರೀದಿಸಿ, ಜಿನೆವಾ ಅಥವಾ ಥಾಯ್ಲೆಂಡ್‌ಗೆ ಹೋಗುವುದಾಗಿ ಘೋಷಿಸಿ, ಚಿನ್ನವನ್ನು ಬೆಂಗಳೂರಿಗೆ ರವಾನಿಸಲು ರನ್ಯಾಗೆ ತಲುಪಿಸಿದ್ದಾನೆ. ರನ್ಯಾ ಮತ್ತು ರಾಜು ಒಟ್ಟಿಗೆ ದುಬೈಗೆ 31 ಬಾರಿ ಭೇಟಿ ನೀಡಿದ್ದು, 11 ಭೇಟಿ ಬಹಿರಂಗಪಡಿಸಲಾಗಿದೆ. ರನ್ಯಾ ಮತ್ತು ರಾಜು ಒಟ್ಟಿಗೆ ದುಬೈಗೆ ಪ್ರವಾಸ ಮಾಡಿ ಅಂದೇ ಬೆಂಗಳೂರಿಗೆ ವಾಪಸಾಗಿದ್ದಾರೆ. ಜಿನೆವಾಗೆ ಕಾಯ್ದಿರಿಸಿದ್ದ ವಿಮಾನದ ಟಿಕೆಟ್‌ ಅನ್ನು ರದ್ದುಪಡಿಸಲ್ಲ” ಎಂದು ವಾದಿಸಿದ್ದರು.

ರನ್ಯಾ ಪ್ರತಿನಿಧಿಸಿದ್ದ ಹಿರಿಯ ವಕೀಲ ಸಂದೇಶ್‌ ಚೌಟ ಅವರು “ಕಸ್ಟಮ್ಸ್‌ ಕಾಯಿದೆಗೆ ವಿರುದ್ದವಾಗಿ ರನ್ಯಾ ಮನೆಯಲ್ಲಿ ನಡೆಸಿರುವ ಶೋಧ ಮತ್ತು ಜಫ್ತಿಯು ಕಾನೂನುಬಾಹಿರವಾಗಿದೆ. ಕಸ್ಟಮ್ಸ್‌ ಕಾಯಿದೆ ಸೆಕ್ಷನ್‌ 102 ಅನ್ನು ಅನುಪಾಲಿಸಿಲ್ಲ. ಇದನ್ನು ಉಲ್ಲಂಘಿಸಿರುವುದರಿಂದ ಇಡೀ ಜಫ್ತಿ ಪ್ರಕ್ರಿಯೆಯೇ ತಪ್ಪಾಗಲಿದೆ. ಆಗ ಎಲ್ಲವೂ ರದ್ಧಾಗಲಿದೆ. ಸೆಕ್ಷನ್‌ 102ರ ಅಡಿ ವ್ಯಕ್ತಿಯನ್ನು ಶೋಧಕ್ಕೆ ಒಳಪಡಿಸಬೇಕಾದರೆ ಅವರನ್ನು ಮೊದಲಿಗೆ ಕಸ್ಟಮ್ಸ್‌ನ ಗೆಜೆಟೆಡ್‌ ಅಧಿಕಾರಿ ಅಥವಾ ಮ್ಯಾಜಿಸ್ಟ್ರೇಟ್‌ ಬಳಿ ಕರೆದೊಯ್ಯಬೇಕು” ಎಂದು ವಾದಿಸಿದ್ದರು.

ಎರಡನೇ ಆರೋಪಿ ತರುಣ್‌ ರಾಜು ಪ್ರತಿನಿಧಿಸಿದ್ದ ವಕೀಲ ಬಿಪಿನ್‌ ಹೆಗ್ಡೆ ಅವರು “ತರುಣ್‌ ಅವರು ರನ್ಯಾಗೆ ಚಿನ್ನ ತಲುಪಿಸಬೇಕಿಲ್ಲ. ದುಬೈನಲ್ಲಿ ಆಕೆ ಸ್ವಂತವಾಗಿ ಚಿನ್ನ ಖರೀದಿಸಬಹುದು. ಆಕೆಯೊಂದಿಗೆ ಇದ್ದೆ ಎಂಬ ಕಾರಣಕ್ಕೆ ಪ್ರಕರಣದಲ್ಲಿ ರಾಜು ಸಿಲುಕಿಸಲಾಗಿದೆ” ಎಂದು ವಾದಿಸಿದ್ದರು.

ಮಾರ್ಚ್‌ 14ರಂದು ಮ್ಯಾಜಿಸ್ಟ್ರೇಟ್‌ ಮತ್ತು ಮಾರ್ಚ್‌ 26ರಂದು ಬೆಂಗಳೂರಿನ ಸತ್ರ ನ್ಯಾಯಾಲಯವು ರನ್ಯಾಗೆ ಜಾಮೀನು ನಿರಾಕರಿಸಿದ್ದವು. ಜೂನ್‌ 3ರಂದು ರನ್ಯಾ ಬಂಧಿಸಲಾಗಿತ್ತು.

ಪ್ರಕರಣದ ಹಿನ್ನೆಲೆ: ಮಾರ್ಚ್‌ 3ರ ಸಂಜೆ 6.30ಕ್ಕೆ ದುಬೈನಿಂದ ಬೆಂಗಳೂರಿಗೆ ಎಮಿರೇಟ್ಸ್‌ ವಿಮಾನದಲ್ಲಿ ಬಂದಿಳಿದಿದ್ದ ರನ್ಯಾರನ್ನು ಡಿಆರ್‌ಐ ಅಧಿಕಾರಿಗಳು ಪರಿಶೀಲಿಸಿದ್ದರು. ಮೊದಲಿಗೆ ರನ್ಯಾ ಅವರ ಕೈ ಚೀಲವನ್ನು (ಹ್ಯಾಂಡ್‌ ಬ್ಯಾಗ್)‌ ಪರಿಶೀಲಿಸಲಾಗಿ, ಅದರಲ್ಲಿ ಏನೂ ಪತ್ತೆಯಾಗಿರಲಿಲ್ಲ. ಹೀಗಾಗಿ, ಮಹಿಳಾ ಡಿಆರ್‌ಐ ತನಿಖಾಧಿಕಾರಿಯು ರನ್ಯಾರನ್ನು ಪರಿಶೀಲಿಸುವ ಉದ್ದೇಶದಿಂದ ಲಿಖಿತವಾಗಿ ಒಪ್ಪಿಗೆ ಪಡೆದಿದ್ದರು. ಈ ಸಂದರ್ಭದಲ್ಲಿ ಆಕೆಯ ನಡುವಿನ ಭಾಗ, ಮಂಡಿಯ ಕೆಳಭಾಗದಲ್ಲಿ ತೊಡೆಗೆ ಚಿನ್ನದ ಬಾರ್‌ಗಳನ್ನು ಮೆಡಿಕಲ್‌ ಅಡ್ಹೆಸಿವ್ ಬ್ಯಾಂಡೇಜ್‌ ಬಳಸಿ ಅಂಟಿಸಲಾಗಿತ್ತು. ತಪಾಸಣೆಯ ಸಂದರ್ಭದಲ್ಲಿ ರನ್ಯಾ ಬಳಿ ₹12,56,43,362 ಮೌಲ್ಯದ 14213.05 ಗ್ರಾಂ ತೂಕದ ಚಿನ್ನ ಪತ್ತೆಯಾಗಿತ್ತು. ಇದನ್ನು ಆಧರಿಸಿ ಕಸ್ಟಮ್ಸ್‌ ಕಾಯಿದೆ 1962ರ ಸೆಕ್ಷನ್‌ 135 (1)(a) ಮತ್ತು 135(1)(b) ಅಡಿ ಪ್ರಕರಣ ದಾಖಲಿಸಲಾಗಿದೆ.