Karnataka High Court
Karnataka High Court 
ಸುದ್ದಿಗಳು

ಶಸ್ತ್ರಚಿಕಿತ್ಸಾ ಗ್ಯಾಸ್ಟ್ರೋಎಂಟರಾಲಜಿ, ಯಕೃತ್‌ ಕಸಿ ವಿಭಾಗ ಕಾರ್ಯಗತಗೊಳಿಸಲು ವಿಳಂಬ: ಹೈಕೋರ್ಟ್‌ ಅಸಮಾಧಾನ

Bar & Bench

ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿರುವ (ಬಿಎಂಸಿಆರ್‌ಐ) ಶಸ್ತ್ರಚಿಕಿತ್ಸಾ ಗ್ಯಾಸ್ಟ್ರೋಎಂಟರಾಲಜಿ ಮತ್ತು ಯಕೃತ್‌ ಕಸಿ ವಿಭಾಗವನ್ನು ಕಾರ್ಯಗತಗೊಳಿಸಲು ಉದ್ದೇಶಪೂರ್ವಕ ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ನಡೆಗೆ ಬುಧವಾರ ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಜುಲೈ 5ರ ಒಳಗೆ ಔಪಚಾರಿಕವಾಗಿ ಆ ವಿಭಾಗವು ಕಾರ್ಯಾರಂಭ ಮಾಡಬೇಕಿತ್ತು.

ಬೆಂಗಳೂರಿನ ವಕೀಲ ಎಂ ಎನ್‌ ಉಮೇಶ್‌ ಸಲ್ಲಿಸಿದ್ದ ಸಿವಿಲ್‌ ನ್ಯಾಯಾಂಗ ನಿಂದನಾ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ರಾಜ್ಯ ಸರ್ಕಾರವು ಸಂಸ್ಥೆಯನ್ನು ಕಾರ್ಯಾರಂಭ ಮಾಡುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಸದರಿ ಪಿಐಎಲ್‌ ಅನ್ನು ಫೆಬ್ರವರಿಯಲ್ಲಿ ನ್ಯಾಯಾಲಯವು ವಿಲೇವಾರಿ ಮಾಡಿತ್ತು. ಹೊರ ರೋಗಿಗಳ ವಿಭಾಗವನ್ನೂ ಕಾರ್ಯಾರಂಭ ಮಾಡಲಾಗುವುದು ಎಂದು ಸರ್ಕಾರವು ಭರವಸೆ ನೀಡಿತ್ತು.

ಸಂಸ್ಥೆಯ ನಿರ್ದೇಶಕ ಡಾ. ನಾಗೇಶ್‌ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಎಂ ಜ್ಯೋತಿ ಪ್ರಕಾಶ್‌ ಅವರು ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ಹಾಜರಿದ್ದರು. ನಾಗೇಶ್‌ ಅವರು “ನಿಯಮಗಳ ಪ್ರಕಾರ ಸಂಸ್ಥೆಯನ್ನು ಸ್ಯಾನಿಟೈಸ್‌ ಮಾಡದೇ ಕಾರ್ಯಾರಂಭ ಮಾಡಲಾಗದು. ಸ್ಯಾನಿಟೈಸ್‌ ಮಾಡಲು ಎರಡು ತಿಂಗಳು ಅಗತ್ಯವಿದ್ದು, ಬಳಿಕ ಕಾರ್ಯಾರಂಭ ಮಾಡಬಹುದಾಗಿದೆ” ಎಂದರು. ಇಷ್ಟು ತಡಮಾಡುವುದೆಂದರೆ ಸಂಸ್ಥೆಗೆ ಭೇಟಿ ನೀಡುವ ಬಡವರ ಜೀವವನ್ನು ಅಪಾಯಕ್ಕೆ ಸಿಲುಕಿಸುವುದಲ್ಲದೆ ಮತ್ತೇನು ಅಲ್ಲ ಎಂದು ನ್ಯಾಯಾಲಯವು ಮೌಖಿಕವಾಗಿ ಹೇಳಿತು.

“ಇಲ್ಲಿಯವರೆಗೆ ಏಕೆ ಸ್ಯಾನಿಟೈಸ್‌ ಮಾಡಲಾಗಿಲ್ಲ ಎಂಬುದು ನಮಗೆ ಅರ್ಥವಾಗುತ್ತಿಲ್ಲ. ಸಂಸ್ಥೆಯನ್ನು ಸ್ಯಾನಿಟೈಸ್‌ ಮಾಡಲು ನ್ಯಾಯಾಲಯ ಸಮಯ ನೀಡುವವರೆಗೆ ಏಕೆ ಕಾಯುತ್ತಿದ್ದರು. ಸಂಬಂಧಿತ ಸಂಸ್ಥೆಗಳ ನಡತೆಯು ನಿರಾಸಾದಾಯಕವಾಗಿದೆ. ಸಂಸ್ಥೆ ಕಾರ್ಯಾರಂಭ ಮಾಡಿಸಲು ಉದ್ದೇಶಪೂರ್ವಕವಾಗಿ ತಡ ಮಾಡುತ್ತಿರುವುದನ್ನು ನಾವು ಪರಿಗಣಿಸುತ್ತೇವೆ” ಎಂದು ಪೀಠ ಹೇಳಿದೆ.

ಮುಂದಿನ ವಿಚಾರಣೆಯಲ್ಲಿ ಖುದ್ದು ಹಾಜರಾಗುವಂತೆ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ನ್ಯಾಯಾಲಯವು ನಿರ್ದೇಶಿಸಿದೆ. ಸಂಸ್ಥೆ ಕಾರ್ಯಾರಂಭ ಮಾಡುವುದಕ್ಕೆ ಸಂಬಂಧಿಸಿದಂತೆ ಹೊಣೆಗಾರಿಕೆ ನಿಗದಿಪಡಿಸುವುದರ ಕುರಿತು ವಿಸ್ತೃತ ವರದಿ ಸಲ್ಲಿಸುವಂತೆ ನ್ಯಾಯಾಲಯವು ಹೆಚ್ಚುವರಿ ಸರ್ಕಾರಿ ವಕೀಲರಿಗೆ ಆದೇಶಿಸಿತು.