ಕೇಂದ್ರ ಸರ್ಕಾರಿ ಕೈಗಾರಿಕಾ ನ್ಯಾಯ ಮಂಡಳಿ ಮತ್ತು ಕಾರ್ಮಿಕ ನ್ಯಾಯಾಲಯದ ಬೆಂಗಳೂರು ಕೇಂದ್ರದಲ್ಲಿ ಖಾಲಿಯಿರುವ ಮುಖ್ಯಸ್ಥರ ಹುದ್ದೆಗೆ ಸೂಕ್ತವಾದವರನ್ನು ನೇಮಿಸಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ತಿಳಿಸುವಂತೆ ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಮಂಗಳವಾರ ನಿರ್ದೇಶಿಸಿದೆ.
ಇಂಡಸ್ಟ್ರಿಯಲ್ ಲಾ ಪ್ರಾಕ್ಟ್ರೀಷನರ್ಸ್ ಫೋರಂ ಕಾರ್ಯದರ್ಶಿ ಕೆ ಬಿ ನಾರಾಯಣ ಸ್ವಾಮಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ಅಶೋಕ್ ಎಸ್.ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಕೀಲರು “ಕೇಂದ್ರ ಸರ್ಕಾರಿ ಕೈಗಾರಿಕಾ ನ್ಯಾಯ ಮಂಡಳಿ ಮತ್ತು ಕಾರ್ಮಿಕ ನ್ಯಾಯಾಲಯದ ಬೆಂಗಳೂರು ಕೇಂದ್ರದ ಮುಖ್ಯಸ್ಥರ ಹುದ್ದೆಯು 2021ರ ಜನವರಿಯಿಂದ ಖಾಲಿ ಇದ್ದು, ಇಲ್ಲಿಯವರೆಗೂ ಅದನ್ನು ತುಂಬುವ ಪ್ರಯತ್ನವಾಗಿಲ್ಲ” ಎಂದು ಪೀಠದ ಗಮನಸೆಳೆದರು.
ಈ ವೇಳೆ ನ್ಯಾಯಾಲಯಕ್ಕೆ ಮಾಹಿತಿ ನೀಡಿದ ಕೇಂದ್ರ ಸರ್ಕಾರದ ಪರ ವಕೀಲ ಎ ವಿ ನಿಶಾಂತ್ ಅವರು, “ಕೇಂದ್ರ ಸರ್ಕಾರಿ ಕೈಗಾರಿಕಾ ನ್ಯಾಯ ಮಂಡಳಿ ಮತ್ತು ಕಾರ್ಮಿಕ ನ್ಯಾಯಾಲಯ ಬೆಂಗಳೂರು ಕೇಂದ್ರದ ಉಸ್ತುವಾರಿಯನ್ನು ತಾತ್ಕಾಲಿಕವಾಗಿ ಚೆನ್ನೈ ಕೇಂದ್ರದ ಮುಖ್ಯಸ್ಥರಿಗೆ ನೀಡಲಾಗಿದೆ. ಎಷ್ಟು ದಿನಗಳ ಒಳಗೆ ನೇಮಕಾತಿ ಮಾಡಲಾಗುತ್ತದೆ ಎಂಬುದಕ್ಕೆ ಸಂಬಂಧಿಸಿದಂತೆ ಸರ್ಕಾರದ ಸಲಹೆ ಪಡೆದು ಎರಡು ವಾರದಲ್ಲಿ ತಿಳಿಸಲಾಗುವುದು” ಎಂದರು.
ಕೇಂದ್ರ ಸರ್ಕಾರಿ ಕೈಗಾರಿಕಾ ನ್ಯಾಯ ಮಂಡಳಿ ಮತ್ತು ಕಾರ್ಮಿಕ ನ್ಯಾಯಾಲಯದ ಮುಖ್ಯಸ್ಥರ ಹುದ್ದೆ ನೇಮಕಕ್ಕೂ ಮುನ್ನ ಪರಿಶೀಲನೆ ಮತ್ತು ಆಯ್ಕೆ ಸಮಿತಿಯ ಅಧ್ಯಕ್ಷರಾದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಸಭೆ ಸೇರಿ ತೀರ್ಮಾನ ಕೈಗೊಳ್ಳಬೇಕಿರುತ್ತದೆ. ಈ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಅವರು ಪೀಠಕ್ಕೆ ತಿಳಿಸಿದರು.
ಇದಕ್ಕೆ ನ್ಯಾಯಾಲಯವು ಎರಡು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಸೂಚಿಸಿದ್ದು, ವಿಚಾರಣೆ ಮುಂದೂಡಿದೆ.
ಪ್ರಕರಣದ ಹಿನ್ನೆಲೆ: ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರತ್ನಕಲಾ ಅವರು ಕೇಂದ್ರ ಸರ್ಕಾರಿ ಕೈಗಾರಿಕಾ ನ್ಯಾಯ ಮಂಡಳಿ ಮತ್ತು ಕಾರ್ಮಿಕ ನ್ಯಾಯಾಲಯದ ಬೆಂಗಳೂರು ಕೇಂದ್ರದ ಜವಾಬ್ದಾರಿ ನಿರ್ವಹಿಸಿದ್ದರು. 2021ರ ಜನವರಿ 27ರಂದು ಅವರ ಅವಧಿ ಪೂರೈಸಿದ್ದು, ಅಲ್ಲಿಂದ ಈವರೆಗೆ ಹುದ್ದೆ ಖಾಲಿ ಇದೆ. ಪ್ರಸಕ್ತ ಚೆನ್ನೈ ಕೇಂದ್ರದ ಜವಾಬ್ದಾರಿ ಹೊತ್ತಿರುವ ನ್ಯಾಯಾಧೀಶರಿಗೆ ಈ ಕೇಂದ್ರದ ಹೆಚ್ಚುವರಿ ಜವಾಬ್ದಾರಿ ಹೊರಿಸಲಾಗಿದೆ. ಖಾಲಿ ಇರುವ ಹುದ್ದೆಯನ್ನು ಕೂಡಲೇ ಭರ್ತಿ ಮಾಡಲು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯಕ್ಕೆ ನಿರ್ದೇಶಿಸಬೇಕು ಎನ್ನುವುದು ಅರ್ಜಿದಾರರು ಮನವಿಯಾಗಿದೆ.