H D Revanna and Karnataka HC 
ಸುದ್ದಿಗಳು

ಅತ್ಯಾಚಾರ ಸಂತ್ರಸ್ತೆ ಅಪಹರಣ ಪ್ರಕರಣ: ಶಾಸಕ ರೇವಣ್ಣ ವಿರುದ್ಧದ ವಿಚಾರಣಾ ಪ್ರಕ್ರಿಯೆ ಮುಂದುವರಿಸಲು ಹೈಕೋರ್ಟ್‌ ಸೂಚನೆ

ಪ್ರಕರಣ ಸಂಬಂಧ ಮೈಸೂರು ಜಿಲ್ಲೆಯ ಕೆ ಆರ್‌ ಪೇಟೆ ಠಾಣೆಗೆ ಸಂತ್ರಸ್ತೆಯ ಪುತ್ರ ನೀಡಿದ್ದ ದೂರಿನ ತನಿಖೆ ನಡೆಸಿದ್ದ ಸಿಐಡಿ ಪೊಲೀಸರು ರೇವಣ್ಣ ವಿರುದ್ಧ ವಿಚಾರಣಾ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.

Bar & Bench

ಹಾಸನದ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರಿಂದ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯನ್ನು ಅಪಹರಿಸಿದ ಆರೋಪ ಸಂಬಂಧ ಶಾಸಕ ಎಚ್‌ ಡಿ ರೇವಣ್ಣ ವಿರುದ್ಧದ ವಿಚಾರಣಾ ಪ್ರಕ್ರಿಯೆಯನ್ನು ಮುಂದುವರಿಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹೈಕೋರ್ಟ್‌ ಗುರುವಾರ ಸೂಚಿಸಿದೆ.

ಪ್ರಕರಣ ಸಂಬಂಧ ಮೈಸೂರು ಜಿಲ್ಲೆಯ ಕೆ ಆರ್‌ ಪೇಟೆ ಠಾಣೆಗೆ ಸಂತ್ರಸ್ತೆಯ ಪುತ್ರ ನೀಡಿದ್ದ ದೂರಿನ ತನಿಖೆ ನಡೆಸಿದ್ದ ಸಿಐಡಿ ಪೊಲೀಸರು ತಮ್ಮ ವಿರುದ್ಧ ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪಪಟ್ಟಿ ರದ್ದುಪಡಿಸಬೇಕು ಎಂದು ಕೋರಿ ಎಚ್‌ ಡಿ ರೇವಣ್ಣ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಬುಧವಾರ ಅರ್ಜಿ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ಹಾಜರಾಗಿ, ವಾದ ಮಂಡನೆಗೆ ಸ್ವಲ್ಪ ಕಾಲಾವಕಾಶ ನೀಡಬೇಕು ಎಂದು ಕೋರಿದರು.

ಈ ವೇಳೆ ಸರ್ಕಾರಿ ಅಭಿಯೋಜಕರು, ಪ್ರಕರಣದಲ್ಲಿ ದೋಷಾರೋಪ ಹೊರಿಸುವ ಪ್ರಕ್ರಿಯೆಗೆ ಈ ಹಿಂದೆ ನೀಡಲಾಗಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಿ ಹೈಕೋರ್ಟ್‌ 2026ರ ಫೆ.5ರಂದು ಆದೇಶಿಸಿದೆ. ಈಗಾಗಲೇ ಜನಪ್ರತಿನಿಧಿಗಳವಿಶೇಷ ನ್ಯಾಯಾಲಯವು ವಿಚಾರಣೆ ಆರಂಭಿಸಿದೆ ಎಂದು ಪೀಠಕ್ಕೆ ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಸುನೀಲ್‌ ದತ್‌ ಯಾದವ್‌ ಅವರು, ದೋಷಾರೋಪ ನಿಗದಿ ಪ್ರಕ್ರಿಯೆ ನಡೆಸುವುದಕ್ಕೆ ನೀಡಲಾಗಿದ್ದ ತಡೆಯಾಜ್ಞೆ ತೆರವುಗೊಳಿಸಲಾಗಿದೆ. ಇದರಿಂದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಕಾನೂನು ಪ್ರಕಾರ ವಿಚಾರಣೆ ಮುಂದುವರಿಸಲಿ ಎಂದು ಸೂಚಿಸಿ, ಅರ್ಜಿ ವಿಚಾರಣೆಯನ್ನು ಮುಂದೂಡಿತು.

ಹಿನ್ನೆಲೆ: ಪ್ರಜ್ವಲ್‌ ರೇವಣ್ಣ ಅವರಿಂದ ಅತ್ಯಾಚಾರಕ್ಕೆ ಒಳಗಾಗಿರುವ ಆರೋಪ ಮಾಡಿದ್ದ ಮನೆಕೆಲಸದ ಮಹಿಳೆಯನ್ನು ಎಚ್‌ ಡಿ ರೇವಣ್ಣ, ಅವರ ಪತ್ನಿ ಭವಾನಿ ಸೇರಿದಂತೆ ಒಂಭತ್ತು ಆರೋಪಿಗಳು ಅಪಹರಿಸಿದ್ದಾರೆ ಎಂದು ಸಂತ್ರಸ್ತೆಯ ಪುತ್ರ ನೀಡಿದ್ದ ದೂರಿನ ಅನ್ವಯ ಮೈಸೂರಿನ ಕೆ ಆರ್‌ ಪೇಟೆ ಠಾಣೆಯಲ್ಲಿ 2025ರ ಮೇ 2ರಂದು ಎಫ್‌ಐಆರ್‌ ದಾಖಲಿಸಿದ್ದರು. ಪ್ರಕರಣ ಸಂಬಂಧ ತನಿಖೆ ನಡೆಸಿದ್ದ ಪೊಲೀಸರು ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

2024ರ ಆ.17ರಂದು ಪ್ರಕರಣ ಸಂಜ್ಞೇಯ ಪರಿಗಣಿಸಿದ್ದ ಜನಪ್ರತಿನಿಧಿಗಳ ವಿಶೇಷ ವಿಶೇಷ ನ್ಯಾಲಯ ಆರೋಪಿಗಳ ವಿರುದ್ಧ ದೋಷಾರೋಪ ನಿಗದಿ ಮಾಡಲು ನಿರ್ಧರಿಸಿತ್ತು. ಈ ಪ್ರಕ್ರಿಯೆ ಮುಂದೂಡುವಂತೆ ವಿಶೇಷ ನ್ಯಾಯಾಲಯಕ್ಕೆ ಹೈಕೋರ್ಟ್‌ ಸೂಚಿಸಿ 2025ರ ಜ.17ರಂದು ಮಧ್ಯಂತರ ಆದೇಶ ಮಾಡಿತ್ತು. ಅದನ್ನು 2026ರ ಫೆ.5ರಂದು ಹೈಕೋರ್ಟ್‌ ತೆರವುಗೊಳಿಸಿತ್ತು.