INC MLA K Y Nanje Gowda and Karnataka HC 
ಸುದ್ದಿಗಳು

ಮಾಲೂರು ಕ್ಷೇತ್ರದ ಮತ ಎಣಿಕೆ ದೃಶ್ಯಾವಳಿ ಸಲ್ಲಿಸಲು ಚುನಾವಣಾ ಆಯೋಗಕ್ಕೆ ಹೈಕೋರ್ಟ್‌ ನಿರ್ದೇಶನ

ಮತ ಎಣಿಕೆ ಸಿ ಡಿ ಹಾಗೂ ಫಾರ್ಮ್‌ ನಂ.17(ಸಿ) ನಕಲು ಪ್ರತಿಯನ್ನು ಆಗಸ್ಟ್‌ 19ರಂದು ಸಲ್ಲಿಸುವಂತೆ ಚುನಾವಣಾ ಆಯೋಗದ ಪರ ವಕೀಲರಿಗೆ ನಿರ್ದೇಶಿಸಿ, ವಿಚಾರಣೆ ಮುಂದೂಡಿದ ಹೈಕೋರ್ಟ್‌.

Bar & Bench

ರಾಜ್ಯ ವಿಧಾನಸಭೆ ಚುನಾವಣೆ - 2024ರ ವೇಳೆ ಕೋಲಾರದ ಮಾಲೂರು ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆಗೆ ಸಂಬಂಧಿಸಿದ ವಿವಿ ಪ್ಯಾಟ್‌ ಎಣಿಕೆ ಹಾಗೂ ಹೊಂದಾಣಿಕೆ ಕಾರ್ಯದ ಚಿತ್ರೀಕರಣದ ದೃಶ್ಯಾವಳಿಯನ್ನು ಆಗಸ್ಟ್‌ 19ರಂದು ಸಲ್ಲಿಸುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಕರ್ನಾಟಕ ಹೈಕೋರ್ಟ್‌ ಇತ್ತೀಚೆಗೆ ನಿರ್ದೇಶಿಸಿದೆ.

ವಿಧಾನಸಭೆ ಚುನಾವಣೆಯಲ್ಲಿ ಕೋಲಾರದ ಮಾಲೂರು ಕ್ಷೇತ್ರದಿಂದ ಶಾಸಕರಾಗಿ ಕಾಂಗ್ರೆಸ್‌ ಪಕ್ಷದ ಕೆ ವೈ ನಂಜೇಗೌಡ ಆಯ್ಕೆಯಾಗಿರುವುದನ್ನು ಅನೂರ್ಜಿತಗೊಳಿಸಬೇಕು ಎಂದು ಕೋರಿ ಬಿಜೆಪಿ ಪರಾಜಿತ ಅಭ್ಯರ್ಥಿ ಕೆ ಎಸ್ ಮಂಜುನಾಥ್ ಗೌಡ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಆರ್ ದೇವದಾಸ್ ಅವರ ಏಕಸದಸ್ಯ ಪೀಠ ನಡೆಸಿತು.

ಕೇಂದ್ರ ಚುನಾವಣಾ ಆಯೋಗದ ಪರ ವಕೀಲ ಶರತ್‌ ದೊಡ್ಡವಾಡ ಅವರು, ಮತ ಎಣಿಕೆ ವೇಳೆ ವಿವಿ ಪ್ಯಾಟ್‌ ಎಣಿಕೆ ಮತ್ತು ಹೊಂದಾಣಿಕೆ ಕಾರ್ಯದ ಚಿತ್ರೀಕರಣ ಮಾಡಲಾಗಿತ್ತು. ಆ ದೃಶ್ಯಾವಳಿ ಒಳಗೊಂಡ ಒಂದು ಸಿ ಡಿ ಈಗಾಗಲೇ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದೆ. ನ್ಯಾಯಾಲಯದ ಅನುಮತಿ ಮೇರೆಗೆ ಇವಿಎಂ ಇರಿಸಲಾಗಿದ್ದ ಸ್ಟ್ರಾಂಗ್‌ ರೂಂ ತೆರೆದು ಪರಿಶೀಲನೆ ನಡೆಸಲಾಗಿದೆ. ಅಲ್ಲಿ ವಿವಿ ಪ್ಯಾಟ್‌ ಎಣಿಕೆ ಮತ್ತು ಹೊಂದಾಣಿಕ ಕಾರ್ಯದ ಚಿತ್ರೀಕರಣದ ದೃಶ್ಯಾವಳಿಗಳನ್ನು ಒಳಗೊಂಡ ಮೂರು ಸಿ ಡಿ ಲಭ್ಯವಾಗಿವೆ. ಮತ ಎಣಿಕೆ ವೇಳೆ ಅಭ್ಯರ್ಥಿಗಳ ಏಜೆಂಟರಿಗೆ ನೀಡಲಾಗಿದ್ದ ಫಾರ್ಮ್‌ ನಂ.17(ಸಿ) ನಕಲು ಪ್ರತಿ ಸಹ ಲಭ್ಯವಾಗಿದೆ. ಅವುಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಕಾಲಾವಕಾಶ ನೀಡಬೇಕು” ಎಂದು ಕೋರಿದರು.

ಸಂಬಂಧಿತ ಸಿ ಡಿ ಹಾಗೂ ಫಾರ್ಮ್‌ ನಂ.17(ಸಿ)ಯ ನಕಲು ಪ್ರತಿಯನ್ನು ಆಗಸ್ಟ್‌ 19ರಂದು ಸಲ್ಲಿಸುವಂತೆ ಚುನಾವಣಾ ಆಯೋಗದ ಪರ ವಕೀಲರಿಗೆ ನಿರ್ದೇಶಿಸಿ, ವಿಚಾರಣೆ ಮುಂದೂಡಿದೆ.

ಮಾಲೂರು ವಿಧಾನಸಭೆ ಕ್ಷೇತ್ರ ಮತ ಎಣಿಕೆ ಪ್ರಕ್ರಿಯೆಯಲ್ಲಿ ಹಲವು ಲೋಪ ದೋಷಗಳಾಗಿವೆ. ಇದರಿಂದ ಆ ಕ್ಷೇತ್ರದಿಂದ ಶಾಸಕರಾಗಿ ಕೆ ವೈ ನಂಜೇಗೌಡ ಆಯ್ಕೆಯಾಗಿರುವುದನ್ನು ಅನೂರ್ಜಿತಗೊಳಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ. ಮಾಲೂರು ಕ್ಷೇತ್ರದ ಫಾರ್ಮ್‌ ನಂ.17(ಸಿ)ನ ನಕಲು ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಆಯೋಗಕ್ಕೆ ಅರ್ಜಿಯ ಹಿಂದಿನ ವಿಚಾರಣೆ ವೇಳೆ ಹೈಕೋರ್ಟ್‌ ನಿರ್ದೇಶಿಸಿತ್ತು.