ಬೆಂಗಳೂರಿನ ಜೆ ಪಿ ನಗರದ ಪುಟ್ಟೇನಹಳ್ಳಿ ಬಳಿಯ ಸಾರಕ್ಕಿ ಕೆರೆ ಬಫರ್ ವಲಯದ ಒತ್ತುವರಿ ಮತ್ತು ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಲು ಸಮಿತಿ ರಚನೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ನಿರ್ದೇಶಿಸಿದೆ.
ಸಾರಕ್ಕಿ ಕೆರೆ ಬಫರ್ ವಲಯದಲ್ಲಿನ ಒತ್ತುವರಿ ತೆರವುಗೊಳಿಸಲು ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗೆ ಆದೇಶಿಸುವಂತೆ ಕೊರಿ ಸಾರಕ್ಕಿ ಕೆರೆ ಪ್ರದೇಶ ಅಭಿವೃದ್ಧಿ ಟ್ರಸ್ಟ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ನೇತೃತ್ವದ ವಿಭಾಗೀಯ ಪೀಠವು ಇತ್ಯರ್ಥಪಡಿಸಿದೆ.
ಕೆರೆ ಪ್ರದೇಶ ಒತ್ತುವರಿ ತೆರವಿಗೆ ಅಗತ್ಯ ಕ್ರಮ ಕೈಗೊಳ್ಳಲು ಬೆಂಗಳೂರು ನಗರ ಜಿಲ್ಲಾಧಿಕಾರಿ, ಬಿಬಿಎಂಪಿ/ಜಿಬಿಎ ಮತ್ತು ಕೆರೆ ಅಭಿವೃದ್ಧಿ ಪ್ರಾಧಿಕಾರದ ಪ್ರತಿನಿಧಿಗಳು ಸೇರಿದಂತೆ ಸಂಬಂಧಪಟ್ಟ ಅಗತ್ಯವಿರುವ ಉಳಿದ ಪಾಲುದಾರರನ್ನು ಒಳಗೊಂಡ ಸಮಿತಿ ರಚಿಸಬೇಕು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶಿಸಿದೆ.
ಅಲ್ಲದೆ, ಮೂರು ವಾರದೊಳಗೆ ಈ ಸಮಿತಿ ರಚಿಸಿ ಆದೇಶ ಹೊರಡಿಸಬೇಕು. ಸಮಿತಿ ಸದಸ್ಯರು ಕೆರೆ ಪ್ರದೇಶಕ್ಕೆ ಸ್ಥಳಕ್ಕೆ ಭೇಟಿ ನೀಡಿ ಕೆರೆ ಬಫರ್ ವಲಯದಲ್ಲಿ ನಿರ್ಮಾಣ ಮಾಡಿರುವ ಕಟ್ಟಡ ಮತ್ತು ಒತ್ತುವರಿದಾರರನ್ನು ಗುರುತಿಸಿ ನೋಟಿಫೈ ಮಾಡಬೇಕು. ಕೆರೆ ಸಂರಕ್ಷಣೆ ನಿಟ್ಟಿನಲ್ಲಿ ಒತ್ತುವರಿ ತೆರವು ಸೇರಿದಂತೆ ಇನ್ನುಳಿದ ಕ್ರಮ ನಡೆಸಬೇಕು. ಸಮಿತಿಯು ನೋಡೆಲ್ ಅಧಿಕಾರಿಯ ಮೂಲಕ ಮೂರು ತಿಂಗಳಲ್ಲಿ ಈ ಆದೇಶದ ಅನುಪಾಲನಾ ವರದಿ ಸಲ್ಲಿಸಬೇಕು ಎಂದು ತಿಳಿಸಿದ ಪೀಠ ಅರ್ಜಿ ಇತ್ಯರ್ಥಪಡಿಸಿದೆ.
ಅಲ್ಲದೆ, ಈ ಆದೇಶದ ಅನುಪಾಲನಾ ವರದಿ ಸಲ್ಲಿಕೆಗಾಗಿ 2026ರ ಜೂನ್ 30ಕ್ಕೆ ಅರ್ಜಿಯನ್ನು ನ್ಯಾಯಾಲಯದ ಮುಂದೆ ಪಟ್ಟಿಮಾಡಬೇಕು ಎಂದು ಇದೇ ವೇಳೆ ರಿಜಿಸ್ಟ್ರಿಗೆ ನಿರ್ದೇಶಿಸಿದೆ.