Chief Justice P B Varale and Justice M G S Kamal 
ಸುದ್ದಿಗಳು

ಹೈಕೋರ್ಟ್‌ ಕಚೇರಿ, ನ್ಯಾಯಮೂರ್ತಿಗಳ ಕೊಠಡಿಗೆ ಹೆಚ್ಚುವರಿ ಸ್ಥಳ: ಸಮಗ್ರ ಪ್ರಸ್ತಾವ ಸಲ್ಲಿಸಲು ಸರ್ಕಾರಕ್ಕೆ ನಿರ್ದೇಶನ

ನ್ಯಾಯಾಲಯದ ಸಿಬ್ಬಂದಿ ಮತ್ತು ಕಕ್ಷಿದಾರರನ್ನು ಸೌಲಭ್ಯಕ್ಕಾಗಿ ನ್ಯಾಯಾಲಯದ ಆವರಣದಿಂದ ಹೊರಕ್ಕೆ ಹೋಗುವಂತೆ ಸೂಚನೆ ನೀಡಲು ಸಾಧ್ಯವೇ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು.

Bar & Bench

ಕರ್ನಾಟಕ ಹೈಕೋರ್ಟ್‌ನ ಕಚೇರಿಗಳು, ನ್ಯಾಯಮೂರ್ತಿಗಳ ಕೊಠಡಿಗಳು ಮತ್ತು ನ್ಯಾಯಾಲಯದ ಸಭಾಂಗಣಗಳಿಗೆ ಹೆಚ್ಚುವರಿ ಸ್ಥಳಾವಕಾಶ ಒದಗಿಸುವ ಸಂಬಂಧ ಸಮಗ್ರವಾದ ಪ್ರಸ್ತಾವನೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಬುಧವಾರ ನಿರ್ದೇಶಿಸಿದೆ.

ಹೈಕೋರ್ಟ್ ಸಂಕೀರ್ಣದ ನೆಲ ಮಹಡಿಯಲ್ಲಿರುವ ಎಲ್ಲ ಕಚೇರಿ ಹಾಗೂ ಶಾಖೆಗಳನ್ನು ಸ್ಥಳಾಂತರಗೊಳಿಸುವಂತೆ ಕೋರಿ ತುಮಕೂರಿನ ವಕೀಲ ರಮೇಶ್ ನಾಯಕ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂ ಜಿ ಎಸ್ ಕಮಲ್ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.

ಹೈಕೋರ್ಟ್‌ಗೆ ಹೆಚ್ಚುವರಿ ಕಚೇರಿಗಳಿಗೆ ಸ್ಥಳಾವಕಾಶ ಒದಗಿಸುವುದಕ್ಕೆ ಸಂಬಂಧಿಸಿದಂತೆ ಸರ್ಕಾರ ಗಮನ ಹರಿಸಿದೆ. ಹೈಕೋರ್ಟ್‌ಗೆ ಸಲ್ಲಿಕೆಯಾಗುವ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ನ್ಯಾಯಮೂರ್ತಿಗಳ ನೇಮಕಾತಿ ಹಾಗೂ ಪದೋನ್ನತಿ ಪಡೆಯುತ್ತಿದ್ದು, ನ್ಯಾಯಮೂರ್ತಿಗಳ ಕೊಠಡಿಗಳನ್ನು ಒದಗಿಸುವುದು ಕಷ್ಟ ಸಾಧ್ಯವಾಗುತ್ತಿದೆ. ಹೀಗಾಗಿ, ನ್ಯಾಯಾಲಯದ ಸಭಾಂಗಣಗಳನ್ನು ಒದಗಿಸುವುದಕ್ಕೆ ಸಂಬಂಧಿಸಿಂತೆ ಸಮಗ್ರವಾದ ಪ್ರಸ್ತಾವನೆ ಸಿದ್ದಪಡಿಸಬೇಕು. ಈ ವಿಚಾರಕ್ಕೆ ಸಂಬಂಧಿಸಿದಂತೆ ವಿಳಂಬ ಧೋರಣೆ ಅನುಸರಿಸುವುದಲ್ಲ ಎಂದು ಪೀಠ ಹೇಳಿದೆ.

ಹೈಕೋರ್ಟ್‌ನ ವಿಭಾಗೀಯ ಪೀಠ ಮಾಡಿದ್ದ ಹಿಂದಿನ ಆದೇಶದಂತೆ ಕೆಲ ವಿಭಾಗಗಳನ್ನು ಸ್ಥಳಾಂತರಿಸಲು ತಾಂತ್ರಿಕ ಶಿಕ್ಷಣ ಇಲಾಖೆಯ ಕಟ್ಟಡವೊಂದರಲ್ಲಿ ಎರಡು ಕೊಠಡಿಗಳನ್ನು ಸರ್ಕಾರ ಹಸ್ತಾಂತರಿಸಿತ್ತು. ಅಲ್ಲದೇ, ಹೆಚ್ಚುವರಿ ಸ್ಥಳಾವಕಾಶ ಒದಗಿಸುವುದಾಗಿ ಭರವಸೆಯನ್ನು ನೀಡಿತ್ತು.  ಆದ್ದರಿಂದ, ಹೈಕೋರ್ಟ್‌ಗೆ ಸ್ಥಳಾವಕಾಶ ಒದಗಿಸುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಅಗತ್ಯವಾದ ಪ್ರಸ್ತಾವನೆಯೊಂದಿಗೆ ಬರಲು ಸೂಚಿಸಿತು.

ವಿಚಾರಣೆ ವೇಳೆ ಹಾಜರಿದ್ದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಪ್ರತಿಮಾ ಹೊನ್ನಾಪುರ ಅವರನ್ನು ಉದ್ದೇಶಿಸಿ, ಎರಡು ಕೊಠಡಿಗಳ ಸ್ಥಳವನ್ನು ನಾಲ್ಕು ನ್ಯಾಯಮೂರ್ತಿಗಳ ಚೇಂಬರ್‌ಗಳನ್ನಾಗಿ ರೂಪಿಸಲಾಗಿದೆ.  ಚೇಂಬರ್‌ಗಳಿಗೆ ಯಾರಾದರೂ ಸಂದರ್ಶಕರು ಬಂದಲ್ಲಿ ಸ್ವಾಗತಿಸಿ ಕೂರುವಂತೆ ಹೇಳುವುದಕ್ಕೂ ಸ್ಥಳದ ಕೊರತೆಯಾಗಿದ್ದು, ನ್ಯಾಯಮೂರ್ತಿಗಳು ಹೊಂದಾಣಿಕೆ ಮಾಡಿಕೊಂಡು ಸೇವೆ ಸಲ್ಲಿಸುತ್ತಿದ್ದಾರೆ ಎಂದು ಪೀಠ ಮೌಖಿಕವಾಗಿ ಹೇಳಿತು.

ಕಡತಗಳ ಸಂಗ್ರಹ ಸೇರಿದಂತೆ ಕಚೇರಿ ಸಿಬ್ಬಂದಿ, ಸ್ಥಳಾವಕಾಶ ಬೇಕಾಗಿದೆ. ವಕೀಲರಿಗೆ ಸೂಕ್ತ ರೀತಿಯ ಶೌಚಾಲಯ ವ್ಯವಸ್ಥೆ ಇಲ್ಲವಾಗಿದೆ. ಮೂಲಸೌಲಭ್ಯ ಕೊರತೆಯಾಗದಂತೆ ನೋಡಿಕೊಳ್ಳಬೇಕು. ನ್ಯಾಯಾಲಯದ ಸಿಬ್ಬಂದಿ ಮತ್ತು ಕಕ್ಷಿದಾರರನ್ನು ಸೌಲಭ್ಯಕ್ಕಾಗಿ ನ್ಯಾಯಾಲಯದ ಆವರಣದಿಂದ ಹೊರಕ್ಕೆ ಹೋಗುವಂತೆ ಸೂಚನೆ ನೀಡಲು ಸಾಧ್ಯವೇ ಎಂದು ಪೀಠ ಅಸಮಾಧಾನ ಹೊರಹಾಕಿತು.

ಇದಕ್ಕಾಗಿ ನಾವು ಐಶಾರಾಮಿ ಸ್ಥಳಾವಕಾಶ ನೀಡುವಂತೆ ಕೇಳುತ್ತಿಲ್ಲ. ಇದರ ಬದಲಾಗಿ ಕಕ್ಷಿದಾರರ ಅರ್ಜಿಗಳ ವಿಚಾರಣೆ, ವಕೀಲರೊಂದಿಗೆ ಚರ್ಚೆ ನಡೆಸುವುಕ್ಕಾಗಿ ಅಗತ್ಯ ಸ್ಥಳಾವಕಾಶ ಒದಗಿಸಬೇಕು ಎಂದು ಪೀಠ ಮೌಖಿಕವಾಗಿ ಅಭಿಪ್ರಾಯ ಪಟ್ಟಿತು.