Ambulance Image for representative purposes
ಸುದ್ದಿಗಳು

[ಆರೋಗ್ಯ ಕವಚ] ಆ್ಯಂಬುಲೆನ್ಸ್‌ ಸೇವೆಯಲ್ಲಿರುವ ಸಿಬ್ಬಂದಿಯ ವಲಯ ಮಾಹಿತಿ ಸಲ್ಲಿಸಲು ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

ವೇತನ ಹಾಗೂ ನಿರ್ವಹಣಾ ವೆಚ್ಚ ಪ್ರತ್ಯೇಕಿಸಿದರೆ ವೇತನಕ್ಕೆ ಎಷ್ಟು ಬೇಕಾಗುತ್ತದೆ ಎಂಬ ಸ್ಪಷ್ಟ ಲೆಕ್ಕ ಸಿಗುತ್ತದೆ. ವೇತನಕ್ಕೆ ಎಷ್ಟು ಹಣ ಬೇಕು ಎಂದು ತಿಳಿಯಬೇಕಾದರೆ ಸಿಬ್ಬಂದಿಯ ನಿಖರ ಮಾಹಿತಿ ಬೇಕು ಎಂದಿರುವ ನ್ಯಾಯಾಲಯ.

Bar & Bench

ಆರೋಗ್ಯ ಕವಚ-108 ಆ್ಯಂಬುಲೆನ್ಸ್‌ ವಾಹನ ಚಾಲಕರು ಹಾಗೂ ಇತರ ಸಿಬ್ಬಂದಿಗೆ ವೇತನ ಪಾವತಿ ವಿಳಂಬದ ಹಿನ್ನೆಲೆಯಲ್ಲಿ ಆ್ಯಂಬುಲೆನ್ಸ್‌ ಸೇವೆಯಲ್ಲಿ ತೊಡಗಿಸಿಕೊಂಡಿರುವ ಎಲ್ಲಾ ಸಿಬ್ಬಂದಿಯ ವಲಯವಾರು ಮಾಹಿತಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ನಿರ್ದೇಶಿಸಿದೆ.

ವೇತನ ಪಾವತಿ ವಿಳಂಬ ಹಿನ್ನೆಲೆಯಲ್ಲಿ ಆರೋಗ್ಯ ಕವಚ-108 ನೌಕರರ ಪರವಾಗಿ ಅಖಿಲ ಕರ್ನಾಟಕ 108 ಆ್ಯಂಬುಲೆನ್ಸ್‌ ನೌಕರರ ಹಿತರಕ್ಷಣಾ ಸಂಘ, ಕರ್ನಾಟಕ ರಾಜ್ಯ ಆರೋಗ್ಯ ಕವಚ (108) ಆ್ಯಂಬುಲೆನ್ಸ್‌ ನೌಕರರ ಸಂಘ, ಸುವರ್ಣ ಕರ್ನಾಟಕ ಆರೋಗ್ಯ ಕವಚ (108) ಆ್ಯಂಬುಲೆನ್ಸ್‌ ನೌಕರರ ಸಂಘ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್‌ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

“ವೇತನ ಹಾಗೂ ನಿರ್ವಹಣಾ ವೆಚ್ಚ ಪ್ರತ್ಯೇಕಿಸಿದರೆ ವೇತನಕ್ಕೆ ಎಷ್ಟು ಬೇಕಾಗುತ್ತದೆ ಎಂಬ ಸ್ಪಷ್ಟ ಲೆಕ್ಕ ಸಿಗುತ್ತದೆ. ವೇತನಕ್ಕೆ ಎಷ್ಟು ಹಣ ಬೇಕು ಎಂದು ತಿಳಿಯಬೇಕಾದರೆ ಸಿಬ್ಬಂದಿಯ ನಿಖರ ಮಾಹಿತಿ ಬೇಕಿದೆ. ಅದಕ್ಕಾಗಿ ಆರೋಗ್ಯ ಕವಚ-108 ಆ್ಯಂಬುಲೆನ್ಸ್‌ ಸೇವೆಯಲ್ಲಿ ತೊಡಗಿರುವ ಎಲ್ಲಾ ಸಿಬ್ಬಂದಿಯ ವಲಯವಾರು ಮಾಹಿತಿ ಸಲ್ಲಿಸಬೇಕು” ಎಂದು ಸರ್ಕಾರಕ್ಕೆ ನಿರ್ದೇಶಿಸಿದೆ.

ವಿಚಾರಣೆಗೆ ಹಾಜರಾದ ಸರ್ಕಾರದ ಪರ ವಕೀಲರು, ಸಿಬ್ಬಂದಿಗೆ ನೀಡಲಾಗುತ್ತಿರುವ ವೇತನದ ವಿವರಗಳನ್ನು ಸರ್ಕಾರದ ಪರ ವಕೀಲರು ಪೀಠಕ್ಕೆ ಸಲ್ಲಿಸಿದರು. ಜೊತೆಗೆ ಸಿಬ್ಬಂದಿಯ ಕರ್ತವ್ಯ ನಿರ್ವಹಣೆಯ ಭೌಗೋಳಿಕ ವ್ಯಾಪ್ತಿಯನ್ನು ರಾಜ್ಯದಲ್ಲಿ ಮೂರು ವಲಯಗಳಲ್ಲಿ ವಿಂಗಡಿಸಲಾಗಿದೆ. ಸಿಬ್ಬಂದಿ ವೇತನ ಮತ್ತು ನಿರ್ವಹಣೆಗೆಂದು ಪ್ರತಿ ತ್ರೈಮಾಸಿಕದಲ್ಲಿ 40.60 ಕೋಟಿ ರೂಪಾಯಿ ಸರ್ಕಾರ ಖಾಸಗಿ ಏಜೆನ್ಸಿಗೆ ಬಿಡುಗಡೆ ಮಾಡುತ್ತದೆ ಎಂದು ತಿಳಿಸಿದರು.

ಇದನ್ನು ದಾಖಲಿಸಿದ ಪೀಠವು ವಿಚಾರಣೆಯನ್ನು ಗುರುವಾರಕ್ಕೆ (ಸೆ.12) ಮುಂದೂಡಿತು.