High Court of Karnataka
High Court of Karnataka 
ಸುದ್ದಿಗಳು

ವರ್ಗಾವಣೀಯ ಲಿಖಿತಗಳ ಕಾಯಿದೆ ಸೆಕ್ಷನ್‌ 143 ಎ: ಆರೋಪಿ ನಡತೆ ಪರಿಶೀಲಿಸಲು ಮ್ಯಾಜಿಸ್ಟ್ರೇಟ್‌ಗೆ ಹೈಕೋರ್ಟ್‌ ನಿರ್ದೇಶನ

Bar & Bench

ವರ್ಗಾವಣೀಯ ಲಿಖಿತಗಳ ಕಾಯಿದೆ ಸೆಕ್ಷನ್‌ 143ಎ (ಮಧ್ಯಂತರ ಪರಿಹಾರಕ್ಕೆ ನಿರ್ದೇಶಿಸುವ ಅಧಿಕಾರ) ಅಡಿ ಮನವಿ ಪರಿಗಣಿಸುವುದು ಮತ್ತು ಮಧ್ಯಂತರ ಪರಿಹಾರ ಕಲ್ಪಿಸುವಾಗ ಆರೋಪಿಯ ನಡತೆಯನ್ನು ಪರಿಶೀಲಿಸುವಂತೆ ಕರ್ನಾಟಕ ಹೈಕೋರ್ಟ್‌ ಈಚೆಗೆ ಮ್ಯಾಜಿಸ್ಟ್ರೇಟ್‌ಗೆ ಆದೇಶ ಮಾಡಿದೆ. ಸೆಕ್ಷನ್‌ 143 ಎ ಅಡಿ ಆರೋಪಿಯು ತಪ್ಪೊಪ್ಪಿಕೊಳ್ಳದಿದ್ದರೆ, ದೂರುದಾರ ಸ್ವಯಂಚಾಲಿತವಾಗಿ ಮಧ್ಯಂತರ ಪರಿಹಾರವಾಗಿ ಚೆಕ್ ಮೊತ್ತದ ಶೇ.20ರಷ್ಟು ಹಣಕ್ಕೆ ಅರ್ಹನಾಗುತ್ತಾನೆ.

ವಿಚಾರಣಾಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ತಮಿಳುನಾಡಿನ ಮೆಟ್ಟುಪಾಳ್ಯಂನ ವಿ ಕೃಷ್ಣಮೂರ್ತಿ ಅವರು ಸಲ್ಲಿಸಿದ್ದ ಕ್ರಿಮಿನಲ್‌ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.

ಆರೋಪಿಗಳು ಅನವಶ್ಯಕವಾಗಿ ಕಾಲಾವಕಾಶ ಕೋರಿ ವಿಚಾರಣೆಯಿಂದ ನುಣುಚಿಕೊಳ್ಳುತ್ತಿದ್ದರೆ ಅರ್ಜಿಯನ್ನು ಪರಿಗಣಿಸುವುದು ಅನಿವಾರ್ಯವಾಗುತ್ತದೆ. 2018ರಲ್ಲಿ ಸೆಕ್ಷನ್‌ 143 ಎ ಜಾರಿಗೆ ತರಲಾಗಿದ್ದು, ಚೆಕ್‌ ಮೊತ್ತದ ಶೇ. 20ರಷ್ಟು ಹಣವನ್ನು ಮಧ್ಯಂತರ ಪರಿಹಾರದ ರೂಪದಲ್ಲಿ ನೀಡಲು ಮ್ಯಾಜಿಸ್ಟ್ರೇಟ್‌ ಅಧಿಕಾರ ಹೊಂದಿದ್ದಾರೆ ಎಂದು ಪೀಠ ಹೇಳಿದೆ.

ಸುಲಭವಾಗಿ ಮೇಲ್ಮನವಿ ಸಲ್ಲಿಸಿ, ತಡೆಯಾಜ್ಞೆ ಪಡೆಯುವ ಪ್ರಕ್ರಿಯೆ ವಿಳಂಬಗೊಳಿಸುವುದಕ್ಕಾಗಿ ಕಾಯಿದೆಗೆ ತಿದ್ದುಪಡಿ ತರಲಾಗಿದ್ದು, ಸೆಕ್ಷನ್‌ 143 ಎ ಅಡಿ ಮನವಿಯನ್ನು ವಿಚಾರಣೆ ನಡೆಸುವಾಗ ಮ್ಯಾಜಿಸ್ಟ್ರೇಟ್‌ ಎರಡರಷ್ಟು ವಿವೇಚನೆಯನ್ನು ಬಳಸಬೇಕಾಗುತ್ತದೆ. “ವಿಚಾರಣೆಗೆ ಆರೋಪಿ ಪೂರ್ತಿ ಸಹಕರಿಸುತ್ತಿದ್ದರೆ ಮಧ್ಯಂತರ ಪರಿಹಾರ ನೀಡಬಹುದಾದ ವಿಚಾರವನ್ನು ನ್ಯಾಯಾಲಯ ಪರಿಗಣಿಸಬಹುದಾಗಿದೆ. ವಿಚಾರಣೆಗೆ ಆರೋಪಿಗಳು ಸಹಕರಿಸದಿದ್ದರೆ ನ್ಯಾಯಾಲಯವು ಸೆಕ್ಷನ್‌ 143 ಎ ಅಡಿ ಅರ್ಜಿ ಪರಿಗಣಿಸಬಹುದು” ಎಂದು ಪೀಠ ಹೇಳಿದೆ. ಪರಿಹಾರವು ಶೇ 20ರಷ್ಟು ಮೀರಬಾರದು ಎಂದು ಶಾಸನದಲ್ಲಿ ಉಲ್ಲೇಖಿಸಿರುವುದರಿಂದ ಮ್ಯಾಜಿಸ್ಟ್ರೇಟ್‌ ಅತ್ಯಂತ ಎಚ್ಚರಿಕೆಯಿಂದ ವಿವೇಚನೆ ಬಳಸಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

“ಕ್ರಿಮಿನಲ್‌ ಪ್ರಕರಣಗಳ ವಿಚಾರಣೆಗೆ ಇರುವ ನ್ಯಾಯಾಲಯಗಳು ಕಾಯಿದೆಯ ಸೆಕ್ಷನ್‌ 143 ಎ ಅಡಿ ಪರಿಹಾರ ನೀಡುವುದಕ್ಕೆ ಸಂಬಂಧಿಸಿದಂತೆ ಆದೇಶ ಮಾಡಿರುವುದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಸಾಕಷ್ಟು ದಾವೆ ಹೂಡಲಾಗಿದೆ. ಪರಿಹಾರ ನೀಡುವುದಕ್ಕೆ ಸಂಬಂಧಿಸಿದಂತೆ ಕೆಲ ಪ್ರಕರಣಗಳಲ್ಲಿ ವಿವೇಚನೆ ಬಳಸಲಾಗಿದ್ದು, ಮತ್ತೆ ಕೆಲವು ಪ್ರಕರಣಗಳಲ್ಲಿ ಅಂಥ ವಿವೇಚನೆ ಬಳಸದಿರುವುದಕ್ಕೆ ಯಾವುದೇ ಕಾರಣ ನೀಡಿಲ್ಲ. ಹೀಗಾಗಿ, ಕಾಯಿದೆಯ ಸೆಕ್ಷನ್‌ 143 ಎ ಅಡಿ ಅರ್ಜಿ ಸಲ್ಲಿಸಿರುವುದನ್ನು ಪರಿಗಣಿಸುವಾಗ ಆರೋಪಿಯ ನಡತೆ ಪರಿಶೀಲಿಸುವಂತೆ ಮ್ಯಾಜಿಸ್ಟ್ರೇಟ್‌ಗೆ ನಿರ್ದೇಶಿಸುವುದು ಅಗತ್ಯವಾಗಿದೆ” ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದ ಹಿನ್ನೆಲೆ: ಪ್ರಸ್ತುತ ಪ್ರಕರಣದಲ್ಲಿ ಅರ್ಜಿದಾರರು ಚಿಲ್ಲರೆ ವ್ಯಾಪಾರಿಯಾಗಿದ್ದು, ಪ್ರತಿವಾದಿ ದೂರುದಾರರು ಐಸ್‌ ಕ್ರೀಮ್‌ ಉತ್ಪನ್ನಗಳ ಉತ್ಪಾದಕರಾಗಿದ್ದಾರೆ. 2017ರಲ್ಲಿ ಉಭಯ ಪಕ್ಷಕಾರರು ಕೊಯಂಬತ್ತೂರು ನಗರದ ಸುತ್ತಮುತ್ತ ಐಸ್‌ ಕ್ರೀಮ್‌ ಪೂರೈಕೆ ಮತ್ತು ಸಿಹಿ ಉತ್ಪನ್ನಗಳ ಹಂಚಿಕೆಗೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಂಡಿದ್ದರು. ದೂರುದಾರರ ಆಗ್ರಹದ ಹಿನ್ನೆಲೆಯಲ್ಲಿ ಹಲವು ಖಾಲಿ ಚೆಕ್‌ಗಳನ್ನು ಭದ್ರತೆಯ ರೂಪದಲ್ಲಿ ಅವರಿಗೆ ನೀಡಿದ್ದಾಗಿ ಅರ್ಜಿದಾರರ ಅಹವಾಲಾಗಿದೆ.

ಅರ್ಜಿದಾರರ ಉದ್ಯಮದಲ್ಲಿ ನಷ್ಟಕ್ಕೆ ಸಿಲುಕಿದ್ದು, ದೂರುದಾರ ಆರಂಭದಲ್ಲಿ ಅರ್ಜಿದಾರರಿಂದ ಪಡೆದಿದ್ದ 5.56 ಲಕ್ಷ ರೂಪಾಯಿ ಮೌಲ್ಯದ ಚೆಕ್‌ವೊಂದನ್ನು ಹಾಕಿದ್ದು, ಅದು ಬೌನ್ಸ್‌ ಆಗಿತ್ತು. ಈ ಮಧ್ಯೆ, ಬೆಂಗಳೂರಿನ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆಯ ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇರುವಾಗ ದೂರುದಾರ ಮಧ್ಯಂತರ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದರು. ಇದನ್ನು ಪರಿಗಣಿಸಿದ್ದ ಮ್ಯಾಜಿಸ್ಟ್ರೇಟ್‌ 60 ದಿನಗಳ ಒಳಗೆ ಶೇ. 10ರಷ್ಟು ಪರಿಹಾರ ನೀಡುವಂತೆ ಆದೇಶಿಸಿದ್ದರು. ಈಗ ಹೈಕೋರ್ಟ್‌ ಬೆಂಗಳೂರಿನ 28ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ಗೆ ಪ್ರಕರಣ ಹಿಂತಿರುಗಿಸಿದ್ದು, ಮತ್ತೆ ಹೊಸದಾಗಿ ಪರಿಗಣಿಸುವಂತೆ ಆದೇಶ ಮಾಡಿದೆ.