Sharan Pumpwell & Karnataka HC 
ಸುದ್ದಿಗಳು

ದ್ವೇಷ ಭಾಷಣ ಪ್ರಕರಣ: ಶರಣ್‌ ಪಂಪ್‌ವೆಲ್‌ ಬಂಧಿಸದಂತೆ ಹೈಕೋರ್ಟ್‌ ನಿರ್ದೇಶನ

“ಇಸ್ಲಾಮಿಕ್‌ ಮತೀಯವಾದಿಗಳು ಹಿಂದೂ ವಿರೋಧಿ, ದೇಶ ವಿರೋಧಿ ಚಟುವಟಿಕೆಗಳಿಗೆ ಹಿಂದೂಗಳನ್ನು ಬಳಸುವಂತಹ ಹೊಸ ದಾರಿ ಹುಡುಕಿದ್ದಾರೆ. ಇದು ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ವ್ಯಕ್ತವಾಗಿದೆ” ಎಂದು ಹೇಳಿಕೆ ನೀಡಿದ ಆರೋಪ ಶರಣ್ ಮೇಲಿದೆ.

Bar & Bench

ದ್ವೇಷ ಭಾಷಣ ಮಾಡಿದ ಆರೋಪದಡಿ ವಿಶ್ವಹಿಂದೂ ಪರಿಷತ್‌ ನಾಯಕ ಶರಣ್‌ ಕುಮಾರ್ ಅಲಿಯಾಸ್ ಶರಣ್‌ ಪಂಪ್‌ವೆಲ್‌ ಬಂಧಿಸಬಾರದು ಮತ್ತು ಹೈಕೋರ್ಟ್‌ ಅನುಮತಿ ನೀಡದ ಹೊರತು ವಿಚಾರಣಾ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಬಾರದು ಎಂದು ಕರ್ನಾಟಕ ಹೈಕೋರ್ಟ್‌ ಬುಧವಾರ ಆದೇಶಿಸಿದೆ.

ಉಡುಪಿ ಟೌನ್‌ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದುಪಡಿಸಬೇಕು ಎಂದು ಕೋರಿ ಶರಣ್‌ ಪಂಪ್‌ವೆಲ್‌ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಸ್ ಆರ್ ಕೃಷ್ಣಕುಮಾರ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ವಕೀಲ ಸುಯೋಗ್‌ ಹೇರಳೆ ವಾದ ಆಲಿಸಿದ ಪೀಠವು “ಶರಣ್‌ ಪಂಪ್‌ವೆಲ್‌ ಅವರನ್ನು ಪೊಲೀಸರು ಬಂಧಿಸಬಾರದು. ಅವರ ವಿರುದ್ಧ ಬಲವಂತದ ಕ್ರಮಕ್ಕೆ ಮುಂದಾಗಬಾರದು ಮತ್ತು ಈ ನ್ಯಾಯಾಲಯದ ಅನುಮತಿ ಇಲ್ಲದೆ ವಿಚಾರಣಾ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಬಾರದು. ಶರಣ್‌ ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡಬೇಕು” ಎಂದು ಆದೇಶಿಸಿತು. ಪ್ರತಿವಾದಿ ಉಡುಪಿ ಪೊಲೀಸ್ ಠಾಣೆ ಅಧಿಕಾರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮುಂದೂಡಿತು.

ಕುಂಜಾಲುವಿನಲ್ಲಿ ನಡೆದ ಗೋಹತ್ಯೆ ಉದ್ದೇಶಿಸಿ ಪತ್ರಿಕಾಗೋಷ್ಠಿಯಲ್ಲಿ ಶರಣ್‌ ಪಂಪ್‌ವೆಲ್‌ ಅವರು “ಇಸ್ಲಾಮಿಕ್‌ ಮತೀಯವಾದಿಗಳು ಹಿಂದೂ ವಿರೋಧಿ, ದೇಶ ವಿರೋಧಿ ಚಟುವಟಿಕೆಗಳಿಗೆ ಹಿಂದೂಗಳನ್ನು ಬಳಸುವಂತಹ ಹೊಸ ದಾರಿಯನ್ನು ಹುಡುಕಿದ್ದಾರೆ. ಇದು ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ವ್ಯಕ್ತವಾಗಿದೆ” ಎಂದು ಮಾತನಾಡಿರುವ ಆರೋಪದ ಮೇಲೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ–2023ರ ಸೆಕ್ಷನ್ 353 (2) ಅಡಿಯಲ್ಲಿ ಜುಲೈ 3ರಂದು ಉಡುಪಿ ಪೊಲೀಸರು ಸ್ವಯಂ ಪ್ರೇರಿತ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ.

ನವೀನ್‌ ನೆರಿಯ ವಿರುದ್ಧದ ಪ್ರಕರಣಕ್ಕೆ ತಡೆ

“ಹಿಂದೂ ಮುಖಂಡರ ‌ಮನೆಗಳ ಮೇಲಷ್ಟೇ ದಾಳಿ ನಡೆಸಿ ಶೋಧ ಕಾರ್ಯ ನಡೆಸುತ್ತಿರುವುದು ಯಾಕೆ” ಎಂದು ಪೊಲೀಸ್ ‌ಠಾಣೆಗೆ ತೆರಳಿ‌ ಪ್ರಶ್ನಿಸಿದ್ದಕ್ಕಾಗಿ ವಿಶ್ವ ಹಿಂದೂ ಪರಿಷತ್‌ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಜಿ ನವೀನ್ ಕುಮಾರ್ (ನವೀನ್ ನೆರಿಯ) ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

ಕಡಬ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಬೇಕು ಎಂದು ಕೋರಿ ಜಿ ನವೀನ್‌ ಕುಮಾರ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌ ಆರ್ ಕೃಷ್ಣಕುಮಾರ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ನವೀನ್‌ ಪರ ಹಿರಿಯ ವಕೀಲ ಎಂ ಅರುಣ್‌ ಶ್ಯಾಮ್‌ ಅವರು “ಪೊಲೀಸರು ಅರ್ಜಿದಾರರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿಯುವ ದುರುದ್ದೇಶದಿಂದ ಅವರ ಮಾತುಗಳಿಗೆ ಕೋಮು ಬಣ್ಣ ಬಳಿಯುವ ಪ್ರಯತ್ನ ಮಾಡಿದ್ದಾರೆ. ಹೀಗಾಗಿ, ದುರುದ್ದೇಶಪೂರಿತವಾದ ಈ ದೂರನ್ನು ವಜಾಗೊಳಿಸಬೇಕು” ಎಂದು ಪೀಠಕ್ಕೆ ಮನವಿ ಮಾಡಿದರು.

ಇದನ್ನು ಆಲಿಸಿದ ಪೀಠವು ಪ್ರಕರಣದ ಮುಂದಿನ ನ್ಯಾಯಿಕ ವಿಚಾರಣಾ ಪ್ರಕ್ರಿಯೆಗೆ ತಡೆ ನೀಡಿತು. ಅಂತೆಯೇ, ಪ್ರತಿವಾದಿ ಪ್ರಾಸಿಕ್ಯೂಷನ್‌ಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮುಂದೂಡಿತು. ಭಾರತೀಯ ನ್ಯಾಯ ಸಂಹಿತೆ–2023ರ ಸೆಕ್ಷನ್‌ 353(2)ರ ಅಡಿಯಲ್ಲಿ ನವೀನ್‌ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ.