high Court of Karnataka
high Court of Karnataka 
ಸುದ್ದಿಗಳು

ವಕ್ಫ್‌ ಆಸ್ತಿ ಕಬಳಿಕೆ ಪ್ರಕರಣ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಾರ್ಯದರ್ಶಿಯ ಖುದ್ದು ಹಾಜರಾತಿಗೆ ಹೈಕೋರ್ಟ್‌ ಆದೇಶ

Bar & Bench

ರಾಜ್ಯದಲ್ಲಿ ವಕ್ಫ್‌ ಆಸ್ತಿಯನ್ನು ಒತ್ತುವರಿ ಮಾಡಿಕೊಂಡಿರುವುದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಕೋರಿ ಸಾರ್ವಜನಿಕ ಹಿತಾಸಕ್ತಿ ಮನವಿ (ಪಿಐಎಲ್‌) ಸಲ್ಲಿಸಿರುವುದರ ಕುರಿತು ಪ್ರತಿಕ್ರಿಯೆ ಸಲ್ಲಿಸದಿದ್ದರೆ ನವೆಂಬರ್‌ 12ರಂದು ನ್ಯಾಯಾಲಯದ ಮುಂದೆ ಖುದ್ದು ಹಾಜರಾಗುವಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಬುಧವಾರ ಕರ್ನಾಟಕ ಹೈಕೋರ್ಟ್‌ ನಿರ್ದೇಶಿಸಿದೆ.

ಹಿಂದಿನ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮುಖ್ಯಸ್ಥರಾಗಿದ್ದ ಅನ್ವರ್‌ ಮಣಿಪ್ಪಾಡಿ ಸಲ್ಲಿಸಿರುವ ವರದಿಗೆ ಸಂಬಂಧಿಸಿದಂತೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಮಾಜಿ ಸಚಿವ ಎಸ್‌ ಕೆ ಕಾಂತಾ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ಅವರಿದ್ದ ವಿಭಾಗೀಯ ಪೀಠ ನಡೆಸಿತು.

ಅನ್ವರ್‌ ಮಣಿಪ್ಪಾಡಿ ಅವರು 2012ರ ಮಾರ್ಚ್‌ 26ರಂದು ರಾಜ್ಯ ಸರ್ಕಾರಕ್ಕೆ ವಕ್ಫ್‌ ಆಸ್ತಿ ಒತ್ತುವರಿಯಾಗಿರುವುದರ ಕುರಿತು ವರದಿ ಸಲ್ಲಿಸಿದ್ದಾರೆ. ಸಾಕಷ್ಟು ಕಾಲಾವಕಾಶ ನೀಡಿದರೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಯಾವುದೇ ತೆರನಾದ ಹೇಳಿಕೆ ಸಲ್ಲಿಸಲಾಗಿಲ್ಲ ಎಂದು ಪೀಠ ಹೇಳಿದೆ.

“ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಕೊನೆಯ ಅವಕಾಶ ಕಲ್ಪಿಸಲಾಗಿತ್ತು. ಅದಾಗ್ಯೂ, ಆಕ್ಷೇಪಣೆ ಸಲ್ಲಿಸಿಲ್ಲ. ಮುಂದಿನ ವಿಚಾರಣೆಯ ಸಂದರ್ಭದಲ್ಲಿ ಇಲಾಖೆಯ ಪ್ರಧಾನ ಕಾರ್ಯದರ್ಶಿಯ ಖುದ್ದಾಗಿ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಹೇಳುವುದನ್ನು ಬಿಟ್ಟು ಬೇರೆ ದಾರಿ ನ್ಯಾಯಾಲಯಕ್ಕೆ ಉಳಿದಿಲ್ಲ. ಒಂದೊಮ್ಮೆ ಮುಂದಿನ ವಿಚಾರಣೆಯ ವೇಳೆಗೆ ಆಕ್ಷೇಪಣೆ ಸಲ್ಲಿಸಿದರೆ ಖುದ್ದು ಹಾಜರಾತಿಯಿಂದ ಪ್ರಧಾನ ಕಾರ್ಯದರ್ಶಿಗೆ ವಿನಾಯಿತಿ ನೀಡಲಾಗುವುದು” ಎಂದು ಪೀಠ ಹೇಳಿದೆ.

ಅರ್ಜಿದಾರರ ಪರ ವಕೀಲರು “2012ರ ವರದಿಯ ಬೆನ್ನಲ್ಲೇ ಉಪಲೋಕಾಯುಕ್ತರು ನಡೆಸಿದ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಪಕ್ಷಾತೀತವಾಗಿ ರಾಜಕಾರಣಿಗಳು ಇಡೀ ರಾಜ್ಯದಲ್ಲಿ ವಕ್ಫ್‌ ಆಸ್ತಿಯಯನ್ನು ಕಬಳಿಸಿದ್ದಾರೆ” ಎಂದು ಹೇಳಿದ್ದಾರೆ.