Karnataka HC and BDA 
ಸುದ್ದಿಗಳು

ಬಿಡಿಎ ಲೇಔಟ್‌ಗಳ ಮಾಹಿತಿ ವೆಬ್‌ಸೈಟ್‌ನಲ್ಲಿ ಪ್ರಕಟ: ಸ್ವಯಂಪ್ರೇರಿತ ಪಿಐಎಲ್ ದಾಖಲಿಸಲು ಆದೇಶಿಸಿದ ಕರ್ನಾಟಕ ಹೈಕೋರ್ಟ್

ಬಿಡಿಎ ಆರ್‌ಟಿಐ ಕಾಯಿದೆ ಅಡಿ ಬರುತ್ತದೆ. ಹೀಗಾಗಿ, ತನ್ನ ಕಾರ್ಯನಿರ್ವಹಣೆಯಲ್ಲಿ ಬಿಡಿಎ ಪಾರದರ್ಶಕತೆ ಕಾಪಾಡಬೇಕು. ತಾನು ಅಭಿವೃದ್ಧಿಪಡಿಸಿರುವ ಎಲ್ಲಾ ಲೇಔಟ್‌ಗಳ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸುವುದು ಅಗತ್ಯ ಎಂದಿರುವ ಪೀಠ.

Bar & Bench

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ತನ್ನ ಎಲ್ಲಾ ಲೇಔಟ್‌ಗಳ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ (ವೆಬ್‌ ಹೋಸ್ಟ್‌) ಹಂತಹಂತವಾಗಿ ಪ್ರಕಟಿಸಲು ಕರ್ನಾಟಕ ಹೈಕೋರ್ಟ್‌ ಈಚೆಗೆ ಆದೇಶಿಸಿದೆ. ಅಲ್ಲದೇ, ಈ ಸಂಬಂಧ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಳ್ಳುವಂತೆ ರಿಜಿಸ್ಟ್ರಿಗೆ ನಿರ್ದೇಶಿಸಿದೆ.

ಲೇಔಟ್‌ಗಳ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸುವಂತೆ ನಿರ್ದೇಶಿಸುವ ಮೂಲಕ ಏಕಸದಸ್ಯ ಪೀಠವು ರಿಟ್‌ ಅರ್ಜಿಯ ವ್ಯಾಪ್ತಿ ಮೀರಿದೆ ಎಂದು ಆಕ್ಷೇಪಿಸಿ ಬಿಡಿಎ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್‌ ಅರಾಧೆ ಮತ್ತು ನ್ಯಾಯಮೂರ್ತಿ ಎಸ್‌ ವಿಶ್ವಜಿತ್‌ ಶೆಟ್ಟಿ ಅವರ ನೇತೃತ್ವದ ವಿಭಾಗೀಯ ಪೀಠವು ಮೇಲಿನ ಆದೇಶ ಮಾಡಿದೆ.

“ಮಾಹಿತಿ ಹಕ್ಕು ಕಾಯಿದೆ ಅಡಿ ಬಿಡಿಎ ಬರುತ್ತದೆ. ಹೀಗಾಗಿ, ತನ್ನ ಕಾರ್ಯನಿರ್ವಹಣೆಯಲ್ಲಿ ಬಿಡಿಎ ಪಾರದರ್ಶಕತೆ ಕಾಯ್ದುಕೊಳ್ಳುವುದು ಅಗತ್ಯವಾಗಿದ್ದು, ತಾನು ಅಭಿವೃದ್ಧಿಪಡಿಸಿರುವ ಎಲ್ಲಾ ಲೇಔಟ್‌ಗಳ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸುವುದು ಅಗತ್ಯ. ಏಕಸದಸ್ಯ ಪೀಠ ಮಾಡಿರುವ ಆದೇಶದಲ್ಲಿ ವಿವಿಧ ಲೇಔಟ್‌ಗಳನ್ನು ಅಭಿವೃದ್ಧಿಪಡಿಸಿರುವುದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಬಿಡಿಎ ಹಂತಹಂತವಾಗಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು” ಎಂದು ಪೀಠವು ಆದೇಶದಲ್ಲಿ ಹೇಳಿದೆ.

“ಅರ್ಕಾವತಿ ಲೇಔಟ್‌ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸುವುದಕ್ಕೆ ಸಂಬಂಧಿಸಿದಂತೆ ಬಿಡಿಎ, ಇ-ಆಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಇತರೆ ಇಲಾಖೆಗಳ ಸಹಕಾರ ಪಡೆಯಬಹುದು” ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ.

ಪ್ರಾಥಮಿಕ ಮತ್ತು ಅಂತಿಮ ಅಧಿಸೂಚನೆಯಲ್ಲಿ ಒಟ್ಟು ನೋಟಿಫೈ ಮಾಡಿದ ಭೂಮಿ (ಗ್ರಾಮದ ನಕ್ಷೆ/ಗೂಗಲ್‌ ಮ್ಯಾಪ್‌/ಆರ್‌ಎಂಪಿ), ವಶಕ್ಕೆ ಪಡೆದಿರುವುದು, ಡಿನೋಟಿಫೈ ಮಾಡಲಾದ ಭೂಮಿ, ಎಂಜಿನಿಯರಿಂಗ್‌ ಇಲಾಖೆಗೆ ಭೂಮಿ ವರ್ಗಾಯಿಸಲಾಗಿರುವುದು, ಒಟ್ಟು ಸೃಷ್ಟಿಸಲಾದ ನಿವೇಶನಗಳ ವಿವರ, ಒಟ್ಟು ಮೂಲ ನಿವೇಶನಗಳ ವಿವರ, ಭೂಮಾಲೀಕರಿಗೆ ವಿತರಿಸಲಾದ ಪರಿಹಾರ, ದಾವೆ ವಿವರ, ಬಿಡಿ (ಸ್ಟ್ರೇ) ನಿವೇಶನಗಳ ಹರಾಜು, ಹಂಚಿಕೆ/ಪುನರ್‌ ನಿವೇಶನ ಹಂಚಿಕೆ, ಅರ್ಜಿದಾರರ ಹಿರಿತನ ಇತ್ಯಾದಿ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂದು ಹೇಳಲಾಗಿದೆ.

ಮೂಲ ನಿವೇಶನಗಳ ಹರಾಜಿಗೆ ಸಂಬಂಧಿಸಿದಂತೆ 2022ರ ಮೇ 31ರಂದು ಏಕಸದಸ್ಯ ಪೀಠವು ನೀಡಿದ್ದ ನಿರ್ದೇಶನಗಳ ಪೈಕಿ ಒಂದು ನಿರ್ದೇಶನವನ್ನು ವಿಭಾಗೀಯ ಪೀಠವು ಮಾರ್ಪಾಡು ಮಾಡಿದೆ. ಅರ್ಕಾವತಿ ಬಡಾವಣೆಯಲ್ಲಿ ಮೂಲ ನಿವೇಶನ ಸೇರಿದಂತೆ ಯಾವುದೇ ನಿವೇಶನವನ್ನು ಹರಾಜು ಮಾಡಲು ಬಿಡಿಎಗೆ ಪೀಠವು ಅನುಮತಿಸಿದೆ.