Karnataka HC and H D Kumaraswamy 
ಸುದ್ದಿಗಳು

[ಎಚ್‌ಡಿಕೆ ಪ್ರಕರಣ] ನಿರೀಕ್ಷಣಾ ಜಾಮೀನು ರದ್ದತಿ ನಿರ್ಧರಿಸುವಾಗ ಬೆದರಿಕೆ ಪ್ರಕರಣ ಪರಿಗಣಿಸಕೂಡದು: ಹೈಕೋರ್ಟ್‌

ಬೆದರಿಕೆ ಪ್ರಕರಣ ಹೊರತುಪಡಿಸಿ ಇತರೆ ಆಧಾರಗಳನ್ನು ಒಳಗೊಂಡ ಅರ್ಜಿಯನ್ನು ಲೋಕಾಯುಕ್ತ ಎಸ್‌ಐಟಿ ಸಲ್ಲಿಸಿದ್ದರೆ ಅದನ್ನು ವಿಶೇಷ ನ್ಯಾಯಾಲಯ ಕಾನೂನಿನ ಅನ್ವಯ ಪರಿಗಣಿಸಬಹುದಾಗಿದೆ ಎಂದಿರುವ ನ್ಯಾಯಾಲಯ.

Bar & Bench

ಬಳ್ಳಾರಿಯ ಸಂಡೂರು ತಾಲ್ಲೂಕಿನಲ್ಲಿ ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್‌ಗೆ 550 ಎಕರೆ ಭೂಮಿಯನ್ನು ಗಣಿ ಗುತ್ತಿಗೆ ನೀಡಿರುವ ಪ್ರಕರಣದಲ್ಲಿ ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ಅವರ ನಿರೀಕ್ಷಣಾ ಜಾಮೀನು ರದ್ದುಪಡಿಸುವಾಗ ಬೆಂಗಳೂರಿನ ಸಂಜಯನಗರ ಠಾಣೆಯಲ್ಲಿ ದಾಖಲಾಗಿರುವ ಬೆದರಿಕೆ ಆರೋಪದ ಸಂಬಂಧಿತ ಎಫ್‌ಐಆರ್‌ ಅಂಶಗಳನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಪರಿಗಣಿಸಬಾರದು ಎಂದು ಕರ್ನಾಟಕ ಹೈಕೋರ್ಟ್‌ ಗುರುವಾರ ಆದೇಶಿಸಿದೆ. ಇದರಿಂದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನಿರಾಳರಾಗಿದ್ದಾರೆ.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಂಜೂರು ಮಾಡಿರುವ ನಿರೀಕ್ಷಣಾ ಜಾಮೀನು ಪ್ರಶ್ನಿಸಿ ಲೋಕಾಯುಕ್ತ ವಿಶೇಷ ತನಿಖಾ ದಳವು ಸಲ್ಲಿಸಿರುವ ಅರ್ಜಿಯನ್ನು ಅಮಾನತುಗೊಳಿಸಬೇಕು ಎಂದು ಕೋರಿ ಕುಮಾರಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ವಿ ಶ್ರೀಶಾನಂದ ಅವರ ಏಕಸದಸ್ಯ ಪೀಠವು ಇತ್ಯರ್ಥಪಡಿಸಿದೆ.

“ಹೈಕೋರ್ಟ್‌ನ ಸಮನ್ವಯ ಪೀಠವು ಸಂಜಯ ನಗರ ಠಾಣೆಯಲ್ಲಿ ಕುಮಾರಸ್ವಾಮಿ ಅವರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ತಡೆ ನೀಡಿದೆ. ಹೀಗಾಗಿ, ನಿರೀಕ್ಷಣಾ ಜಾಮೀನು ರದ್ದತಿ ಕೋರಿ ಲೋಕಾಯುಕ್ತ ಎಸ್‌ಐಟಿ ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸುವಾಗ ತಡೆ ನೀಡಿರುವ ಸಂಜಯ ನಗರ ಠಾಣೆಯ ಪ್ರಕರಣವನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಪರಿಗಣಿಸಕೂಡದು. ಇತರೆ ಆಧಾರಗಳನ್ನು ಒಳಗೊಂಡ ಅರ್ಜಿಯನ್ನು ಲೋಕಾಯುಕ್ತ ಎಸ್‌ಐಟಿ ಸಲ್ಲಿಸಿದ್ದರೆ ಅದನ್ನು ವಿಶೇಷ ನ್ಯಾಯಾಲಯ ಕಾನೂನಿನ ಅನ್ವಯ ಪರಿಗಣಿಸಬಹುದಾಗಿದೆ. ಈ ನೆಲೆಯಲ್ಲಿ ಲೋಕಾಯುಕ್ತ ಅರ್ಜಿಯ ಕುರಿತು ಮುಂದುವರಿಯಲು ವಿಶೇಷ ನ್ಯಾಯಾಲಯವು ಸ್ವಾತಂತ್ರ್ಯ ಹೊಂದಿದ್ದು, ಅರ್ಜಿ ಇತ್ಯರ್ಥಪಡಿಸಲಾಗಿದೆ” ಎಂದು ನ್ಯಾಯಾಲಯ ಆದೇಶಿಸಿದೆ.

ಇದಕ್ಕೂ ಮುನ್ನ, ಕುಮಾರಸ್ವಾಮಿ ಪರ ಹಿರಿಯ ವಕೀಲ ಹಷ್ಮತ್‌ ಪಾಷಾ ಅವರು “ಸಂಜಯನಗರ ಠಾಣೆಯಲ್ಲಿ ದಾಖಲಾಗಿರುವ ಬೆದರಿಕೆ ಆರೋಪದ ಸಂಬಂಧಿತ ಎಫ್‌ಐಆರ್‌ಗೆ ಹೈಕೋರ್ಟ್‌ ತಡೆ ನೀಡಿದೆ. ಮಾರ್ಚ್‌ 28ರ ಆದೇಶದಲ್ಲಿ ಹೈಕೋರ್ಟ್‌ ಮತ್ತೆ ಅದನ್ನು ಸ್ಪಷ್ಟಪಡಿಸಿದೆ. ನಿರೀಕ್ಷಣಾ ಜಾಮೀನು ರದ್ದತಿ ಕೋರಿರುವ ಲೋಕಾಯುಕ್ತ ಎಸ್‌ಐಟಿ ಅರ್ಜಿಯಲ್ಲಿ ಸಂಜಯನಗರ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ಅಂಶಗಳು ಇವೆ ಎಂದು ಅಗತ್ಯ ನಿರ್ದೇಶನವನ್ನು ವಿಶೇಷ ನ್ಯಾಯಾಧೀಶರು ಬಯಸಿದ್ದಾರೆ. ಬೆದರಿಕೆ ಪ್ರಕರಣ ನಿರ್ಧಾರವಾಗುವವರೆಗೆ ನಿರೀಕ್ಷಣಾ ಜಾಮೀನು ಅರ್ಜಿ ಪರಿಗಣಿಸದಂತೆ ಆದೇಶಿಸಬೇಕು” ಎಂದರು.

ಲೋಕಾಯುಕ್ತ ಎಸ್‌ಐಟಿ ವಿಶೇಷ ಸರ್ಕಾರಿ ಅಭಿಯೋಜಕ ವೆಂಟಕೇಶ್‌ ಅರಬಟ್ಟಿ ಅವರು “ಮಾರ್ಚ್‌ 28ರಂದು ಹೈಕೋರ್ಟ್‌ನ ಸಮನ್ವಯ ಪೀಠವು ಆದೇಶದಲ್ಲಿ ಸ್ಪಷ್ಟನೆ ನೀಡಿರುವುದರಿಂದ ಕುಮಾರಸ್ವಾಮಿ ಅವರು ಮತ್ತೊಮ್ಮೆ ಸ್ಪಷ್ಟನೆ ಕೋರಲಾಗದು. ನಿರೀಕ್ಷಣಾ ಜಾಮೀನು ಅರ್ಜಿ ನಿರ್ಧರಿಸಲು ವಿಶೇಷ ನ್ಯಾಯಾಧೀಶರು ಸ್ವಾತಂತ್ರ್ಯ ಹೊಂದಿದ್ದಾರೆ. ಆದ್ದರಿಂದ, ಕುಮಾರಸ್ವಾಮಿ ಅರ್ಜಿ ವಜಾ ಮಾಡಬೇಕು” ಎಂದು ಕೋರಿದರು.

“ಕುಮಾರಸ್ವಾಮಿ ಅವರಿಗೆ ಸಮನ್ವಯ ಪೀಠವು ಯಾವುದೇ ರೀತಿಯ ವಿನಾಯಿತಿ ನೀಡಲು ನಿರಾಕರಿಸಿತ್ತು. 2024ರ ಸೆಪ್ಟೆಂಬರ್‌ 28, 29 ಮತ್ತು ಅಕ್ಟೋಬರ್‌ 1ರಂದು ಮಾಧ್ಯಮಗೋಷ್ಠಿ ನಡೆಸಿ, ಅದರಲ್ಲಿ ಲೋಕಾಯುಕ್ತ ಎಸ್‌ಐಟಿ ಮುಖ್ಯಸ್ಥರಿಗೆ ಬೆದರಿಕೆ ಹಾಕಿದ್ದರು. ಚಂದ್ರಶೇಖರ್‌ ಅವರನ್ನೇ ತನಿಖೆ ನಡೆಸಲಾಗುವುದು ಎಂದು ಕುಮಾರಸ್ವಾಮಿ ಬೆದರಿಕೆ ಹಾಕಿದ್ದರು. ಈ ಸಂಬಂಧ ಎಸ್‌ಐಟಿ ಮುಖ್ಯಸ್ಥ ಚಂದ್ರಶೇಖರ್‌ ದೂರು ಆಧರಿಸಿ ಸಂಜಯನಗರ ಪೊಲೀಸರು ಕುಮಾರಸ್ವಾಮಿ ವಿರುದ್ಧ ಬೆದರಿಕೆ ಪ್ರಕರಣ ದಾಖಲಿಸಿದ್ದಾರೆ. ಇದನ್ನು ಆಧರಿಸಿ, ಕುಮಾರಸ್ವಾಮಿ ಅವರ ನಿರೀಕ್ಷಣಾ ಜಾಮೀನು ರದ್ದುಪಡಿಸುವಂತೆ ಕೋರಲಾಗಿದೆ” ಎಂದರು.

ವಿಚಾರಣೆಯ ಸಂದರ್ಭದಲ್ಲಿ ಪೀಠವು “ತನಿಖಾಧಿಕಾರಿಯನ್ನು ತನಿಖೆಗೆ ಒಳಪಡಿಸಲು ಕುಮಾರಸ್ವಾಮಿ ಯಾರು? ಕುಮಾರಸ್ವಾಮಿ ಅವರು ಆರೋಪಿ ಮಾತ್ರ, ಸಮಾಜದಲ್ಲಿ ಅವರ ಸ್ಥಾನಮಾನ ಏನು ಎಂಬುದರ ಬಗ್ಗೆ ಮಾತನಾಡಕೂಡದು” ಎಂದಿತು.

ಅಲ್ಲದೇ, ಒಂದೊಮ್ಮೆ ವಿಚಾರಣಾಧೀನ ನ್ಯಾಯಾಲಯವು “ತಡೆಯಾಜ್ಞೆಯಾಗಿರುವ ಎಫ್‌ಐಆರ್‌ ಆಧರಿಸಿ, ನಿರೀಕ್ಷಣಾ ಜಾಮೀನು ರದ್ದು ಆದೇಶ ಮಾಡಿದರೆ ಅದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಬಂದರೆ ತಕ್ಷಣವೇ ಅದಕ್ಕೆ ತಡೆ ವಿಧಿಸಲಾಗುವುದು” ಎಂದಿತು.

ಲೋಕಾಯುಕ್ತ ಆರೋಪ ಪಟ್ಟಿ ಏಕೆ ಸಲ್ಲಿಸಿಲ್ಲ?

ವಿಚಾರಣೆಯ ಒಂದು ಹಂತದಲ್ಲಿ ಪೀಠವು ವೆಂಕಟೇಶ್‌ ಅರಬಟ್ಟಿ ಅವರನ್ನು ಕುರಿತು “ಇಷ್ಟು ವರ್ಷವಾದರೂ ಲೋಕಾಯುಕ್ತ ಎಸ್‌ಐಟಿಯು ಏಕೆ ಆರೋಪ ಪಟ್ಟಿ ಸಲ್ಲಿಸಿಲ್ಲ? ಎಲ್ಲದಕ್ಕೂ ರಾಜ್ಯಪಾಲರ ಮೇಲೆ ನಿರ್ದೇಶನ ಪಡೆಯುತ್ತೀರಿ? ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿರುವ ಈ ವಿಚಾರದಲ್ಲಿ ನಿರ್ದೇಶನ ತೆಗೆದುಕೊಳ್ಳಬೇಕಲ್ಲವೇ?” ಎಂದಿತು.

“ದಶಕದ ಹಿಂದಿನ ಪ್ರಕರಣ, ಆರೋಪ ಪಟ್ಟಿ ಸಲ್ಲಿಸಲಾಗಿಲ್ಲ. ತನಿಖಾ ಸಂಸ್ಥೆಯ ಕ್ಷಮತೆ ಏನಾಗಬಹುದು? ಕಾನೂನಿನ ಪ್ರಕಾರ ರಾಜ್ಯಪಾಲರ ಅನುಮತಿ ದೊರೆಯದಿದ್ದರೆ ಅದು ಆರೋಪ ಪಟ್ಟಿ ಎನಿಸಿಕೊಳ್ಳುವುದಿಲ್ಲ. ಅದರ ಒಳಗೆ ಇಷ್ಟೆಲ್ಲ ಪುರಾಣನಾ..?  ಎಲ್ಲರೂ ತಮ್ಮ ಮಿತಿ ಅರ್ಥ ಮಾಡಿಕೊಳ್ಳಬೇಕು ಎಂದಷ್ಟೇ ಈ ಸಂದರ್ಭದಲ್ಲಿ ನ್ಯಾಯಾಲಯ ಹೇಳಬಯಸುವುದು. ಒಂದು ಪದ ಹೆಚ್ಚಿಗೆ ಮಾತನಾಡಿದರೆ ಮಾಧ್ಯಮದಲ್ಲಿ ನಾಳೆ ಅದು ಬೇರೆಯದೇ ರೀತಿಯಲ್ಲಿ ಬಿಂಬಿತವಾಗುತ್ತದೆ” ಎಂದಿತು.

“ರಾಜ್ಯಪಾಲರ ಅನುಮತಿ ಸಿಕ್ಕಿಲ್ಲ ಎಂದಾದರೆ ನಿರೀಕ್ಷಣಾ ಜಾಮೀನು ರದ್ದತಿ ಕೋರಿರುವ ಅರ್ಜಿಗೆ ಬೆಲೆಯೇ ಇರುವುದಿಲ್ಲ” ಎಂದು ನ್ಯಾಯಾಲಯ ಮೌಖಿಕವಾಗಿ ಹೇಳಿತು.