ವಿದೇಶಿಗರ ಜೊತೆ ಯಾವೆಲ್ಲಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲಾಗಿದೆ ಎಂಬುದರ ಮಾಹಿತಿಯನ್ನು ವಿದೇಶಿಗರ ಪ್ರಾಂತೀಯ ನೋಂದಣಿ ಕಚೇರಿಗೆ (ಎಫ್‌ಆರ್‌ಆರ್‌ಒ) ಸೂಚಿತ ವಿಧಾನದಲ್ಲಿ ಸಲ್ಲಿಸಲು ವಿಶ್ವವಿದ್ಯಾಲಯಗಳು, ಖಾಸಗಿ ಕಾಲೇಜುಗಳು, ಭಾಷಾ ಶಾಲೆಗಳು ಸೇರಿ ಎಲ್ಲಾ ಶೈಕ್ಷಣಿಕ ಸಂಸ್ಥೆಗಳು, ವೈದ್ಯಕೀಯ ಸಂಸ್ಥೆಗಳು, ಉದ್ಯೋಗದಾತರು, ಸರ್ಕಾರೇತರ ಸಂಸ್ಥೆಗಳು, ಸಂಶೋಧನಾ ಸಂಸ್ಥೆ, ಸಾಂಸ್ಕೃತಿಕ ಸಂಘಟನೆ, ರಾಜ್ಯ ಪೊಲೀಸರು, ಸ್ಥಳೀಯ ಪ್ರಾಧಿಕಾರಗಳು, ಗುಪ್ತ ದಳ, ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಆಯುಕ್ತರಿಗೆ ನಿರ್ದೇಶಿಸಿ ಜೂನ್ 18ರ ಒಳಗೆ ಸುತ್ತೋಲೆ/ಅಧಿಸೂಚನೆ ಹೊರಡಿಸುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಈಚೆಗೆ ಆದೇಶಿಸಿದೆ.
ಸಿರಿಯಾದ ಐವರು ಪ್ರಜೆಗಳು ವೀಸಾ ಅವಧಿ ಮುಗಿದಿದ್ದರೂ ಭಾರತದಲ್ಲಿ ನೆಲೆಸಿದ್ದು, ಅದನ್ನು ವಿಸ್ತರಿಸುವಂತೆ ಕೋರಿ 2015ರಲ್ಲಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠವು ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುತ್ತೋಲೆ/ಅಧಿಸೂಚನೆ ಹೊರಡಿಸಬೇಕು ಎಂದು ನಿರ್ದೇಶಿಸಿದೆ. ವೀಸಾ ಅವಧಿ ಮುಗಿದ ಬಳಿಕವೂ ವಿದೇಶಿಗರು ಭಾರತದಲ್ಲಿ ಉಳಿಯುವುದು ಆತಂಕಕಾರಿ ಬೆಳವಣಿಗೆ ಎಂದು ನ್ಯಾಯಾಲಯ ಹೇಳಿದೆ.
ಸೂಚಿತ ವಿಧಾನದಲ್ಲಿ ವಿದೇಶಿಗರ ಜೊತೆ ಯಾವ ರೀತಿಯ ಚಟುವಟಿಕೆಯಲ್ಲಿ ತೊಡಗಲಾಗಿದೆ ಎಂಬುದನ್ನು ಎಫ್‌ಆರ್‌ರ್‌ಒಗೆ ತಕ್ಷಣ ತಿಳಿಸಬೇಕು ಎಂದು ಸುತ್ತೋಲೆ ತಿಳಿಸಬೇಕು. ಯಾವೆಲ್ಲಾ ಸಂಸ್ಥೆಗಳ ಜೊತೆ ವಿದೇಶಿಗರು ಇದ್ದಾರೆ ಎಂಬುದನ್ನು ಲೆಕ್ಕಹಾಕಬೇಕು ಮತ್ತು ಅದನ್ನು ಪರಿಶೀಲಿಸಬೇಕು. ಕಾಲಕಾಲಕ್ಕೆ ಸ್ಥಿತಿಗತಿ ವರದಿಯನ್ನು ಎಫ್‌ಆರ್‌ಆರ್‌ಒ ಮತ್ತು ರಾಜ್ಯ ಪೊಲೀಸರಿಗೆ ಸಲ್ಲಿಸಬೇಕು. ಹೀಗೆ ಮಾಡಲು ವಿಫಲರಾದರೆ ಸಿವಿಲ್, ಕ್ರಿಮಿನಲ್ ಮತ್ತು ದಂಡವನ್ನು ಹಾಲಿ ಕಾನೂನಿನ ಅನ್ವಯ ವಿಧಿಸಲಾಗುತ್ತದೆ ಎಂದು ನ್ಯಾಯಾಲಯ ಎಚ್ಚರಿಸಿದೆ.
ಎಫ್‌ಆರ್‌ಆರ್‌ಒ ಅಥವಾ ವಲಸೆ ಬ್ಯುರೊ ಜೊತೆ ನೋಂದಾಯಿಸಿಕೊಂಡಿರುವ ಸಂಸ್ಥೆಗಳ ಪಟ್ಟಿಯ ಮಾಹಿತಿಯನ್ನು ಒದಗಿಸಲು ನ್ಯಾಯಾಲಯ ಆದೇಶಿಸಿದೆ. ಯಾವ ವಿಧಾನದಲ್ಲಿ ವಿದೇಶಿಗರು ದೇಶಕ್ಕೆ ಬಂದಿದ್ದಾರೆ, ಏನೆಲ್ಲಾ ಚಟುವಟಿಕೆಯಲ್ಲಿ ತೊಡಗಿದ್ದಾರೆ ಮತ್ತು ವಾಪಸ್ ತೆರಳಿರುವ ಮಾಹಿತಿಯನ್ನು ನೀಡಬೇಕು. ಇದಕ್ಕೆ ಸಂಬಂಧಿಸಿದಂತೆ ಸಂಸ್ಥೆಗಳು ವಿದೇಶಿಗರ ಆಂತರಿಕ ನೋಂದಣಿ ಅಥವಾ ಡಿಜಿಟಲ್ ಮಾಹಿತಿಯನ್ನು ಹೊಂದಿವೆಯೇ ಮತ್ತು ಅದನ್ನು ಎಫ್‌ಆರ್‌ಆರ್‌ಒ ಜೊತೆ ನಿರಂತರವಾಗಿ ಅಪ್‌ಡೇಟ್ ಮಾಡಿವೆಯೇ ಎಂಬುದನ್ನು ನೀಡಬೇಕು.
ವಿದೇಶಿಗರ ವೀಸಾ ಅವಧಿ ಮುಗಿದ ಮೇಲೂ ಅವರ ಮಾಹಿತಿ ನೀಡಲು ವಿಫಲವಾಗಿ, ಇಂದಿಗೂ ಅವರ ಜೊತೆ ವ್ಯವಹರಿಸುತ್ತಿರುವ ಸಂಸ್ಥೆಗಳ ಮಾಹಿತಿ, ಅಂಥ ಸಂಸ್ಥೆಗಳ ವಿರುದ್ಧ ಏನೆಲ್ಲಾ ಕ್ರಮಕೈಗೊಳ್ಳಲಾಗಿದೆ. ದಂಡ ವಿಧಿಸುವುದು, ನೋಂದಣಿಯ ಅಮಾನತು ಅಥವಾ ಕ್ರಿಮಿನಲ್ ಕ್ರಮದ ಮಾಹಿತಿ ನೀಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ಸಹಾಯಕ ಸಾಲಿಸಿಟರ್ ಜನರಲ್ ಎಚ್ ಶಾಂತಿ ಭೂಷಣ್ ಅವರು “ನೋಂದಾಯಿತ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡಲು ಮತ್ತು ವೈದ್ಯಕೀಯ ಸಂಸ್ಥೆಗಳಲ್ಲಿ ಚಿಕಿತ್ಸೆ ಪಡೆಯಲು ಹಾಗೂ ಕಂಪನಿ ಅಥವಾ ಸಂಶೋಧನಾ ಸಂಸ್ಥೆಗಳಲ್ಲಿ ಉದ್ಯೋಗ ಅರಸಿ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿಗರು ಬರುತ್ತಾರೆ” ಎಂದರು.
ಇದನ್ನು ಆಲಿಸಿದ ಪೀಠವು ವಲಸೆ ಬ್ಯೂರೊ ಜೊತೆ ಸಮನ್ವಯ ಸಾಧಿಸಿ ಕೆಳಗಿನ ಮಾಹಿತಿಯನ್ನು ಒಳಗೊಂಡ ಅಫಿಡವಿಟ್ ಸಲ್ಲಿಸುವಂತೆ ಶಾಂತಿ ಭೂಷಣ್ ಅವರಿಗೆ ನಿರ್ದೇಶಿಸಿದೆ.
ಕಳೆದ ಐದು ವರ್ಷಗಳಲ್ಲಿ ಯಾವೆಲ್ಲಾ ದೇಶಗಳ ಪ್ರಜೆಗಳು ಭಾರತಕ್ಕೆ ಬಂದಿದ್ದಾರೆ. ಪ್ರವಾಸಿ, ವೈದ್ಯಕೀಯ, ಶಿಕ್ಷಣ, ಉದ್ಯಮ, ಉದ್ಯೋಗ, ರಾಜತಾಂತ್ರಿಕ ಇತ್ಯಾದಿ ಯಾವ ರೀತಿಯ ವೀಸಾದಲ್ಲಿ ಭಾರತಕ್ಕೆ ಬಂದಿದ್ದಾರೆ. ವೀಸಾ ಅರ್ಜಿಯಲ್ಲಿ ಭಾರತಕ್ಕೆ ಬರಲು ಅವರು ನೀಡಿರುವ ಮಾಹಿತಿ ಸೇರಿಸಬೇಕು.
ವೀಸಾ ಅವಧಿ ಮುಗಿದ ಮೇಲೆ ಭಾರತ ತೊರೆಯದ ವಿದೇಶಿಗರ ಹೆಸರು ಮತ್ತು ಗುರುತು, ಭಾರತಕ್ಕೆ ಬಂದಿರುವ ದಿನ, ವೀಸಾ ಮುಗಿದಿರುವ ದಿನಾ ಮತ್ತು ಭಾರತಕ್ಕೆ ಬಂದಿರುವ ವಿಧಾನದ ಮಾಹಿತಿ ನೀಡಬೇಕು.
ನೋಂದಣಿಗೆ ವಿಧಿಸಿರುವ ನಿಯಂತ್ರಣ ಕ್ರಮ, ಕಾಲಮಿತಿ, ದಾಖಲೆಗಳು, ವಿವಿಧ ಮಾದರಿಯ ವೀಸಾ ಪಡೆಯಲು ನೀಡಲಾಗುವ ಫಾರ್ಮ್ಯಾಟ್.
ಎಫ್‌ಆರ್‌ರ್‌ಒ ಅಥವಾ ಇನ್ನಾವುದೇ ಸೂಚಿತ ಅಧಿಕಾರಿಯಲ್ಲಿ ನೋಂದಣಿ ಮಾಡಿಸಬೇಕು ಎಂಬುದರ ಸಂಬಂಧಿತ ಪ್ರಾಧಿಕಾರದ ಗುರುತು.
ವಿಮಾನ, ಹಡಗುದಾಣ, ಗಡಿ ಅಥವಾ ಬೇರಾವುದೇ ವಲಸೆ ಪರಿಶೀಲನಾ ಸ್ಥಳದಲ್ಲಿ ವಿದೇಶಿಗರು ದೇಶಕ್ಕೆ ಬರುವಾಗ ನೋಂದಣಿ ಕಡ್ಡಾಯ ಕುರಿತಾದ ಸ್ಪಷ್ಟನೆ ಮತ್ತು ಡಿಜಿಟಲ್ ಪರಿಶೀಲನಾ ಅಳವಡಿಕೆ ಮಾಡಿರುವ ಮಾಹಿತಿ ನೀಡಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.
ಅವಧಿ ಮುಗಿದ ಬಳಿಕವೂ ರಾಜ್ಯದಲ್ಲಿ ನೆಲೆಸಿರುವ ವಿದೇಶಿಗರು ಸ್ಥಳೀಯ ಅಥವಾ ಕೇಂದ್ರೀಯ ಪ್ರಾಧಿಕಾರದಲ್ಲಿ ಸ್ಥಾಪಿತ ಕಾನೂನಿನ ಅಡಿ ನೋಂದಾಯಿಸಿದ್ದಾರೆಯೇ?
ಅವಧಿ ಮುಗಿದ ಬಳಿಕವೂ ರಾಜ್ಯದಲ್ಲಿ ನೆಲೆಸಿರುವ ವಿದೇಶಿಗರ ಹಾಲಿ ವಿಳಾಸ, ಉದ್ಯೋಗ ಸ್ಥಳ ಅಥವಾ ಯಾವ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಮೊಬೈಲ್, ಈಮೇಲ್, ಅವಲಂಬಿತರು ಅಥವಾ ಕುಟುಂಬದ ಮಾಹಿತಿ.
ಈ ಮಾಹಿತಿಯನ್ನು ಯಾವ ವಿಧಾನದಲ್ಲಿ ಸಂಗ್ರಹಿಸಲಾಗಿದೆ, ಅದರ ಮೇಲೆ ನಿಗಾ ಮತ್ತು ಅದನ್ನು ರಾಜ್ಯ ಸರ್ಕಾರ ಅಪ್‌ಡೇಟ್ ಮಾಡಿರುವ ವಿಧಾನ. ಇದನ್ನು ರಾಷ್ಟ್ರೀಯ ವಲಸೆ ದತ್ತಾಂಶದ ಜೊತೆ ಲಿಂಕ್ ಮಾಡಲಾಗಿದೆಯೇ?
ಅವಧಿ ಮುಗಿದ ಬಳಿಕವೂ ಒಂದು ಅಥವಾ ಹೆಚ್ಚಿನ ವಿದೇಶಿಗರಿಗೆ ಸಂಬಂಧಿಸಿದ ಮಾಹಿತಿ ಲಭ್ಯವಾಗದಿದ್ದರೆ, ಅದಕ್ಕೆ ಸಂಬಂಧಿಸಿದಂತೆ ಅಫಿಡವಿಟ್ ಸಲ್ಲಿಸಬೇಕು. ಈ ವಿಫಲತೆ ಕಾರಣ ಅಥವಾ ದತ್ತಾಂಶ ಸಂಗ್ರಹಿಸಿರುವುದಕ್ಕೆ ಕಾರಣ, ಎಫ್‌ಆರ್‌ಆರ್‌ಒ, ಪೊಲೀಸ್, ಗುಪ್ತ ದಳ ಅಥವಾ ಸ್ಥಳೀಯ ಸಂಸ್ಥೆಗಳಿಂದ ಸಮಸ್ಯೆಯಾಗಿದೆಯೇ? ಇಂಥ ವಿದೇಶಿಗರನ್ನು ಪತ್ತೆ ಹಚ್ಚಲು ರಾಜ್ಯ ಅಥವಾ ಕೇಂದ್ರ ಸರ್ಕಾರಗಳು ತಕ್ಷಣ ಮತ್ತು ದೀರ್ಘಾವಧಿಯಲ್ಲಿ ಏನೆಲ್ಲಾ ಕ್ರಮಕೈಗೊಳ್ಳಲಿವೆ? ಲುಕ್‌ಔಟ್ ಸುತ್ತೋಲೆ, ವೀಸಾ ರದ್ದತಿ ಮತ್ತಿತರ ಕ್ರಮಕೈಗೊಳ್ಳಲಾಗಿದೆಯೇ ಅಥವಾ ಅವು ಪರಿಗಣನೆಯಲ್ಲಿವೆಯೇ?
ವಿದೇಶಿಗರು ಕ್ರಿಮಿನಲ್ ಅಪರಾಧದಲ್ಲಿ ಭಾಗಿಯಾಗಿದ್ದರೆ ಅಂಥ ವಿದೇಶಿಗರು ವೀಸಾ ಅವಧಿ ಮುಗಿದ ಮೇಲೂ ನೆಲೆಸಿರುವುದು, ಆರೋಪಗಳು, ಸಂತ್ರಸ್ತರಾಗಿದ್ದಾರೆಯೇ, ಐಪಿಸಿ, ಬಿಎನ್‌ಎಸ್, ವಿದೇಶಿಗರ ಕಾಯಿದೆ, ಎನ್‌ಡಿಪಿಎಸ್ ಅಥವಾ ಬೇರೆ ಆರೋಪಗಳ ವಿವರ.
ಅಪರಾಧದ ವಿಧಾನ, ಆ ಪ್ರಕರಣದ ಸದ್ಯದ ಸ್ಥಿತಿಗತಿ ಅಥವಾ ವಿಚಾರಣೆ, ಅವರಿಗೆ ಜಾಮೀನು ದೊರೆತಿದೆಯೇ, ಕಸ್ಟಡಿಯಲ್ಲಿದ್ದಾರೆಯೇ ಅಥವಾ ನಾಪತ್ತೆಯಾಗಿದ್ದಾರೆಯೇ ಎಂಬ ಮಾಹಿತಿ ನೀಡಬೇಕು. ಅಂಥ ವಿದೇಶಿಗರನ್ನು ಅವರ ದೇಶಕ್ಕೆ ಕಳುಹಿಸಲು ಯತ್ನಿಸಲಾಗಿದೆಯೇ, ಏನೆಲ್ಲಾ ಪ್ರಕ್ರಿಯೆ ನಡೆಯುತ್ತಿದೆ ಎಂಬುದರ ವಿವರ ನೀಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ಪ್ರಕರಣದ ವಿಚಾರಣೆಯನ್ನು ಜುಲೈ 27ಕ್ಕೆ ಮುಂದೂಡಲಾಗಿದೆ.