Karnataka High Court
Karnataka High Court 
ಸುದ್ದಿಗಳು

ಭಿಕ್ಷುಕರ ಆರೋಗ್ಯ ಸ್ಥಿತಿಗತಿ: ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರಕ್ಕೆ ವರದಿ ಸಲ್ಲಿಸಲು ಹೈಕೋರ್ಟ್‌ ನಿರ್ದೇಶನ

Bar & Bench

ಬೆಂಗಳೂರಿನ ಭಿಕ್ಷುಕರ ಕಾಲೊನಿಯಲ್ಲಿ ವಾಸಿಸುತ್ತಿರುವವರ ಮಾನಸಿಕ ಸ್ಥಿತಿ ಪರಿಶೀಲಿಸಿ ಒಂದು ತಿಂಗಳಲ್ಲಿ ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರಕ್ಕೆ ವರದಿ ಸಲ್ಲಿಸುವಂತೆ ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರಕ್ಕೆ ಬುಧವಾರ ಕರ್ನಾಟಕ ಹೈಕೋರ್ಟ್ ನಿರ್ದೇಶಿಸಿದೆ.

2010ರಲ್ಲಿ ಭಿಕ್ಷುಕರ ಕಾಲೊನಿಯಲ್ಲಿ ಅನಾರೋಗ್ಯದಿಂದ ಭಿಕ್ಷುಕರ ಸರಣಿ ಸಾವು ಸಂಭವಿಸಿದ ಪ್ರಕರಣದ ಕುರಿತು ಹೈಕೋರ್ಟ್‌ನ ಕಾನೂನು ಸೇವಾ ಸಮಿತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

“ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರವು ಭಿಕ್ಷುಕರ ಕಾಲೊನಿಗೆ ಭೇಟಿ ನೀಡಬೇಕು. ಅಲ್ಲಿರುವ ಭಿಕ್ಷುಕರ ಮಾನಸಿಕ ಸ್ಥಿತಿಗತಿಯನ್ನು ಪರಿಶೀಲಿಸಬೇಕು. ಅವರ ಮಾನಸಿಕ ಸ್ಥಿತಿಗತಿ ಸುಧಾರಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಒಂದು ತಿಂಗಳಲ್ಲಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ವರದಿ ಸಲ್ಲಿಸಬೇಕು” ಎಂದು ಪೀಠವು ನಿರ್ದೇಶಿಸಿತು.

ಹೈಕೋರ್ಟ್‌ ಕಾನೂನು ಸೇವಾ ಪ್ರಾಧಿಕಾರ ಪ್ರತಿನಿಧಿಸಿದ್ದ ವಕೀಲೆ ಬಿ ವಿ ವಿದ್ಯುಲ್ಲತಾ ಅವರು “2010ರಲ್ಲಿ ಭಿಕ್ಷುಕರ ಕಾಲೊನಿಯಲ್ಲಿ ಅನಾರೋಗ್ಯದಿಂದ ಭಿಕ್ಷುಕರ ಸರಣಿ ಸಾವು ಸಂಭವಿಸಿತ್ತು. ಆಗ ಪ್ರಾಧಿಕಾರವು ಕಾಲೊನಿಗೆ ಭೇಟಿ ನೀಡಿ ಅಲ್ಲಿನ ನ್ಯೂನತೆ ಪರಿಶೀಲಿಸಿ ಹಲವು ಶಿಫಾರಸು ಮಾಡಿತ್ತು. ಶೇ 30ರಷ್ಟು ಮಂದಿ ಅಲ್ಲಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ಇದರಿಂದ ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರವನ್ನು ಅರ್ಜಿಯಲ್ಲಿ ಪ್ರತಿವಾದಿ ಮಾಡಿದ್ದ ಹೈಕೋರ್ಟ್ ಹಲವು ನಿರ್ದೇಶನ ನೀಡಿತ್ತು. ಸದ್ಯ ಅಲ್ಲಿನ ಭಿಕ್ಷುಕರ ಮಾನಸಿಕ ಸ್ಥಿತಿಗತಿ ಪರಿಶೀಲಿಸಬೇಕಾಗಿದೆ. ಮಾನಸಿಕ ಆರೋಗ್ಯ ಕಾಯಿದೆಯ ಜಾರಿಗೆ ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಬೇಕಿದೆ” ಎಂದು ನ್ಯಾಯಾಲಯದ ಗಮನಸೆಳೆದರು.