Karnataka High Court 
ಸುದ್ದಿಗಳು

ದತ್ತು ಪುತ್ರನಿಗೆ ಅನುಕಂಪದ ಉದ್ಯೋಗ: ಎರಡು ತಿಂಗಳಲ್ಲಿ ನಿರ್ಧರಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಆದೇಶ

ಮನವಿ ಪತ್ರ ಸಲ್ಲಿಕೆಯಾದರೆ ಅದನ್ನು ಪರಿಗಣಿಸಿ ಸೂಕ್ತ ಆದೇಶ ಹೊರಡಿಸುವುದು ರಾಜ್ಯ ಸರ್ಕಾರದ ಕರ್ತವ್ಯ. ಸರ್ಕಾರಿ ವಕೀಲರು ಸಹ ಸೂಕ್ತ ಕಾಲಾವಕಾಶ ನೀಡಿದರೆ ಅರ್ಜಿದಾರರ ಮನವಿ ಪರಿಗಣಿಸಿ ಆದೇಶ ಹೊರಡಿಸಲಾಗುವುದು ಎಂದಿದ್ದಾರೆ ಎಂದ ಪೀಠ.

Bar & Bench

ಸೇವಾವಧಿಯಲ್ಲಿ ಮೃತಪಟ್ಟಿರುವ ಮಹಿಳಾ ಸರ್ಕಾರಿ ಉದ್ಯೋಗಿಯ ದತ್ತು ಪುತ್ರನಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ಕಲ್ಪಿಸುವ ಕುರಿತ ಮನವಿಯನ್ನು ಎಂಟು ವಾರದಲ್ಲಿ ಪರಿಗಣಿಸಿ ಸೂಕ್ತ ಆದೇಶ ಹೊರಡಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ಗೆ ನಿರ್ದೇಶಿಸಿದೆ.

ಸರ್ಕಾರಿ ಉದ್ಯೋಗಿಯಾಗಿದ್ದ ತನ್ನ ತಾಯಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಅನುಕಂಪದ ಆಧಾರದಲ್ಲಿ ಉದ್ಯೋಗ ಕಲ್ಪಿಸುವಂತೆ ಕೋರಿ ತಾನು ಎರಡು ಬಾರಿ ಸಲ್ಲಿಸಿದ್ದ ಮನವಿ ಪತ್ರವನ್ನು ಪರಿಗಣಿಸದ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಚಿತ್ರದುರ್ಗದ ಬೆಳಗೂರು ಗ್ರಾಮದ ನಿವಾಸಿ ಯೂನಿಸ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಅಶೋಕ್‌ ಎಸ್‌.ಕಿಣಗಿ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಮನವಿ ಪತ್ರ ಸಲ್ಲಿಕೆಯಾದರೆ ಅದನ್ನು ಪರಿಗಣಿಸಿ ಸೂಕ್ತ ಆದೇಶ ಹೊರಡಿಸುವುದು ರಾಜ್ಯ ಸರ್ಕಾರದ ಕರ್ತವ್ಯ. ಸರ್ಕಾರಿ ವಕೀಲರು ಸಹ ಸೂಕ್ತ ಕಾಲಾವಕಾಶ ನೀಡಿದರೆ ಅರ್ಜಿದಾರರ ಮನವಿ ಪರಿಗಣಿಸಿ ಆದೇಶ ಹೊರಡಿಸಲಾಗುವುದು ಎಂದಿದ್ದಾರೆ. ಇದರಿಂದ ಅರ್ಜಿ ಕುರಿತಂತೆ ನ್ಯಾಯಾಲಯ ಯಾವುದೇ ಅದೇಶ ಮಾಡುತ್ತಿಲ್ಲ. ಎಂಟು ವಾರಗಳಲ್ಲಿ ಅರ್ಜಿದಾರನ ಮನವಿ ಪತ್ರ ಪರಿಗಣಿಸಿ ಕಾನೂನು ಪ್ರಕಾರ ಸೂಕ್ತ ಆದೇಶ ಹೊರಡಿಸಬೇಕು ಎಂದು ಸರ್ಕಾರ ಹಾಗೂ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಿಸಿದೆ.

ಪ್ರಕರಣದ ಹಿನ್ನೆಲೆ: ಚಿತ್ರದುರ್ಗದ ಜಿಲ್ಲೆಯ ಶ್ರೀರಾಮಪುರ ಹೋಬಳಿಯ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೈಮುನ್ನೀಸಾ ಎಂಬಾಕೆ ಉದ್ಯೋಗ ಮಾಡುತ್ತಿದ್ದರು. ಆಕೆಯು ಸೇವೆಯಲ್ಲಿದ್ದಾಗಲೇ ಅರ್ಜಿದಾರರನ್ನು ದತ್ತು ಪಡೆದಿದ್ದರು. ಈ ಕುರಿತು 2022ರ ಸೆಪ್ಟೆಂಬರ್‌ ವಿಲ್‌ ಸಹ ನೋಂದಣಿ ಮಾಡಿಸಿ, ಅರ್ಜಿದಾರ ತನ್ನ ಏಕಮಾತ್ರ ಉತ್ತರಾಧಿಕಾರಿ ಎಂದು ಘೋಷಣೆ ಮಾಡಿದ್ದರು. 2023ರ ಜೂನ್‌ 3ರಂದು ಮೈಮುನ್ನೀಸಾ ನಿಧನ ಹೊಂದಿದ್ದರು.

ಇದರಿಂದ ಚಿತ್ರದುರ್ಗ ಜಿಲ್ಲೆಯ ಆರೋಗ್ಯ ಮತ್ತು ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 2023ರ ಡಿಸೆಂಬರ್‌ 2ರಂದು ಮನವಿ ಪತ್ರ ಸಲ್ಲಿಸಿದ್ದ ಅರ್ಜಿದಾರ, ತಾಯಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ತನಗೆ ಅನುಕಂಪದ ಉದ್ಯೋಗ ನೀಡುವಂತೆ ಕೋರಿದ್ದರು. ಆದರೆ, ಮೈಮುನ್ನೀಸಾ ಅವರ ಹಣಕಾಸು ಸೌಲಭ್ಯ ಪಡೆಯಲು ಅರ್ಜಿದಾರ ಅರ್ಹನಾಗಿಲ್ಲ ಎಂದು ತಿಳಿಸಿ ಆರೋಗ್ಯ ಮತ್ತು ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕರು ಹಿಂಬರಹ ನೀಡಿದ್ದರು. ಇದರಿಂದ ಅರ್ಜಿದಾರ 2024ರ ಸೆಪ್ಟೆಂಬರ್‌ 5ರಂದು ಮತ್ತೆ ಮನವಿ ಪತ್ರ ಸಲ್ಲಿಸಿ, ಅನುಕಂಪದ ಆಧಾರದಲ್ಲಿ ಉದ್ಯೋಗ ಕಲ್ಪಿಸಲು ಕೋರಿದ್ದರು. ಅದನ್ನು ಪರಿಗಣಿಸದೆ ಇದ್ದ ಕಾರಣ ಹೈಕೋರ್ಟ್‌ ಮೊರೆ ಹೋಗಿದ್ದರು. ತನ್ನ ಮನವಿ ಪತ್ರ ಪರಿಗಣಿಸಲು ಸರ್ಕಾರ ಮತ್ತು ಆರೋಗ್ಯ ಇಲಾಖೆಗೆ ನಿರ್ದೇಶಿಸುವಂತೆ ಕೋರಿದ್ದರು.