Karnataka High Court and YouTube
Karnataka High Court and YouTube 
ಸುದ್ದಿಗಳು

[ಲೈವ್‌ ಸ್ಟ್ರೀಮಿಂಗ್‌] ಅಧೀನ ನ್ಯಾಯಾಲಯಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

Bar & Bench

ನ್ಯಾಯಾಲಯಗಳ ಕಲಾಪಗಳನ್ನು ಲೈವ್‌ ಸ್ಟ್ರೀಮಿಂಗ್‌ ಮಾಡುವುದಕ್ಕೆ ಸಂಬಂಧಿಸಿದ ನಿಯಮಗಳ ಅನುಷ್ಠಾನಕ್ಕಾಗಿ ಅಧೀನ ನ್ಯಾಯಾಲಯಗಳಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಲು ಸೋಮವಾರ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ನಿರ್ದೇಶಿಸಿದ್ದು, ಸಂಬಂಧಿತ ಎಲ್ಲಾ ಮನವಿಗಳನ್ನೂ ವಿಲೇವಾರಿ ಮಾಡಿದೆ.

ಕಲಾಪದ ಲೈವ್‌ ಸ್ಟ್ರೀಮಿಂಗ್‌ ಮತ್ತು ಇ-ಫೈಲಿಂಗ್‌ ವ್ಯವಸ್ಥೆ ಜಾರಿಗೆ ಸಂಬಂಧಿಸಿದಂತೆ ದಿಲ್‌ರಾಜ್‌ ಸೆಕ್ವೈರಾ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

“ಅಧೀನ ನ್ಯಾಯಾಲಯಗಳಲ್ಲಿ ಲೈವ್‌ ಸ್ಟ್ರೀಮಿಂಗ್‌ ವ್ಯವಸ್ಥೆಯನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸಬೇಕಿದೆ. ಇದಕ್ಕಾಗಿ ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ರಾಜ್ಯ ಸರ್ಕಾರವು ಲೈವ್‌ ಸ್ಟ್ರೀಮಿಂಗ್‌ ಜಾರಿಗೊಳಿಸಲು ಅಗತ್ಯವಾದ ಮೂಲ ಸೌಲಭ್ಯವನ್ನು ತುರ್ತಾಗಿ ಮತ್ತು ಕಾನೂನಿನ ಅನುಸಾರ ಕಲ್ಪಿಸಬೇಕು” ಎಂದು ಪೀಠವು ನಿರ್ದೇಶಿಸಿದೆ.

“ಹೈಕೋರ್ಟ್‌ನಲ್ಲಿ ಲೈವ್‌ ಸ್ಟ್ರೀಮಿಂಗ್‌ ವ್ಯವಸ್ಥೆ ಜಾರಿಗೊಳಿಸಲಾಗಿದ್ದು, ಈ ಸಂಬಂಧ ಕರ್ನಾಟಕ ನ್ಯಾಯಾಲಯ ಲೈವ್‌ ಸ್ಟ್ರೀಮಿಂಗ್‌ ಮತ್ತು ರೆಕಾರ್ಡಿಂಗ್‌ ನಿಯಮಗಳು 2021 ಅನ್ನು ಕಳೆದ ವರ್ಷದ ಡಿಸೆಂಬರ್‌ 30ರಂದು ಗೆಜೆಟ್‌ ಅಧಿಸೂಚನೆ ಪ್ರಕಟಿಸಲಾಗಿದೆ. ಇದೇ ಜನವರಿ 5ರಂದು ಕರ್ನಾಟಕ ಇ-ಫೈಲಿಂಗ್‌ ನಿಯಮಗಳ ಅಧಿಸೂಚನೆಯನ್ನೂ ಪ್ರಕಟಿಸಲಾಗಿದೆ” ಎಂದು ಪೀಠವು ಆದೇಶದಲ್ಲಿ ದಾಖಲಿಸಿದೆ.

“ಅಧಿಸೂಚನೆ ನಿಯಮಗಳ ಪ್ರಕಾರ ಲೈವ್‌ ಸ್ಟ್ರೀಮಿಂಗ್‌ನ ಭಾಷಾಂತರವನ್ನು ನೀಡಲಾಗಿದೆ. ಹೈಕೋರ್ಟ್‌ನಲ್ಲಿನ ಲೈವ್‌ ಸ್ಟ್ರೀಮಿಂಗ್‌ಗೆ ಸಂಬಂಧಿಸಿದಂತೆ ಅರ್ಜಿದಾರರ ಅಹವಾಲುಗಳನ್ನು ಪರಿಹರಿಸಲಾಗಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.