ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಮೂಲಕ ನಡೆಯುವ ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಅಭ್ಯರ್ಥಿಗಳಿಗೆ ವೈದ್ಯಕೀಯ ಅಫಿಡವಿಟ್ ನೀಡುವ ವಿಚಾರದಲ್ಲಿ ಪಾದರ್ಶಕತೆ ಕಾಯ್ದುಕೊಳ್ಳಲು ಶಾಶ್ವತ ವೈದ್ಯಕೀಯ ಮಂಡಳಿ ನೇಮಿಸುವಂತೆ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಮಂಗಳವಾರ ನಿರ್ದೇಶಿಸಿದೆ.
ಹಾಸನದ ಬಿ ಎನ್ ಶಿವನಂಜೇಗೌಡ ಎಂಬುವವರು ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಬಿ ವೀರಪ್ಪ ನೇತೃತ್ವದ ಏಕ ಸದಸ್ಯ ಪೀಠವು ನಡೆಸಿತು.
ಅರ್ಜಿದಾರ ಶಿವನಂಜೇಗೌಡ ಅವರು ಮೋಟಾರು ವಾಹನ ಇನ್ಸ್‌ಪೆಕ್ಟರ್ ಹುದ್ದೆಗೆ 2019ರಲ್ಲಿ ಅರ್ಜಿ ಸಲ್ಲಿಸಿದ್ದರು. ಅವರ ದೇಹದಾರ್ಢ್ಯ ಪರೀಕ್ಷೆ ನಡೆಸಿದ್ದ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ ವೈದ್ಯ ಜಿ ನಂದಕುಮಾರ್ ಅವರು ಶಿವನಂಜೇಗೌಡರಿಗೆ ಬಣ್ಣ ಗುರುತಿಸುವುದಕ್ಕೆ ಸಂಬಂಧಿಸಿದಂತೆ ದೃಷ್ಟಿ ದೋಷವಿದೆ. ನಿಗದಿತ ಎತ್ತರಕ್ಕಿಂತ ಅರ್ಧ ಸೆಂಟಿ ಮೀಟರ್ ಕಡಿಮೆ ಇದ್ದಾರೆ ಎಂದು ತಿಳಿಸಿದ್ದರು.
ಇದನ್ನು ಆಧರಿಸಿ ಕೆಪಿಎಸ್‌ಸಿಯು ಶಿವನಂಜೇಗೌಡರ ಅರ್ಜಿ ತಿರಸ್ಕರಿಸಿತ್ತು. ಅದನ್ನು ಪ್ರಶ್ನಿಸಿ ಶಿವನಂಜೇಗೌಡ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ್ದ ಕೆಎಟಿಯು ಕೆಪಿಎಸ್‌ಸಿ ಕ್ರಮವನ್ನು ಒಪ್ಪಿತ್ತು. ಆದ್ದರಿಂದ ಶಿವನಂಜೇಗೌಡ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ್ದ ನ್ಯಾಯಾಲಯವು ಮಿಂಟೊ ಆಸ್ಪತ್ರೆಯಲ್ಲಿ ಶಿವನಂಜೇಗೌಡ ಅವರ ದೇಹದಾರ್ಢ್ಯ ಪರೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ 2022ರ ಏಪ್ರಿಲ್ 18ರಂದು ಆದೇಶಿಸಿತ್ತು. ಅದರಂತೆ ಮಿಂಟೊ ಆಸ್ಪತ್ರೆ ವೈದ್ಯರು ಅರ್ಜಿದಾರರ ದೇಹದಾರ್ಢ್ಯ ಪರೀಕ್ಷೆ ನಡೆಸಿ, ವರದಿ ಸಲ್ಲಿಸಿದ್ದರು. ಶಿವನಂಜೇಗೌಡ ಅವರಿಗೆ ಬಣ್ಣ ಗುರುತಿಸುವುದಕ್ಕೆ ಸಂಬಂಧಿಸಿದಂತೆ ದೃಷ್ಟಿದೋಷವಿಲ್ಲ. ಮೋಟಾರು ವಾಹನ ಇನ್ಸ್‌ಪೆಕ್ಟರ್ ಹುದ್ದೆಗೆ ಅರ್ಹರಾಗಿದ್ದಾರೆ ಎಂದು ವರದಿ ನೀಡಿತ್ತು.
ಇದನ್ನು ಒಪ್ಪಿರುವ ನ್ಯಾಯಾಲಯವು ಅರ್ಜಿದಾರರು ಅರ್ಹರಾಗಿದ್ದರೂ ಬೌರಿಂಗ್ ಆಸ್ಪತ್ರೆಯು ವೈದ್ಯರು ನೀಡಿದ ದೇಹದಾರ್ಢ್ಯ ಪರೀಕ್ಷೆಯ ತಪ್ಪು ಅಫಿಡವಿಟ್‌ನಿಂದ ಅರ್ಜಿದಾರರು ಹುದ್ದೆ ಕಳೆದುಕೊಂಡಿರುವುದು ದುರದೃಷ್ಟಕರ. ಆದ್ದರಿಂದ ಅರ್ಜಿದಾರರು ಅರ್ಜಿಯನ್ನು ತಿರಸ್ಕರಿಸಿರುವ ಕೆಎಪಿಎಸ್‌ಸಿ ಆದೇಶವನ್ನು ರದ್ದುಪಡಿಸಲಾಗಿದ್ದು, ಮೋಟಾರು ವಾಹನ ಇನ್ಸ್‌ಪೆಕ್ಟರ್ ಹುದ್ದೆಗೆ ಅರ್ಜಿದಾರರನ್ನು ಪುನರ್ ಪರಿಗಣಿಸಬೇಕು ಎಂದು ಆದೇಶಿಸಿದೆ.
ಅಲ್ಲದೆ, ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಸರ್ಕಾರಿ ಹುದ್ದೆ ಪಡೆಯುವುದರಿಂದ ವಂಚಿತರಾಗಬಾರದು. ಪ್ರತಿಯೊಬ್ಬರಿಗೂ ನ್ಯಾಯ ದೊರೆಯಬೇಕು. ಇದರಿಂದ ನೇಮಕಾತಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಶಾಶ್ವತವಾದ ವೈದ್ಯಕೀಯ ಮಂಡಳಿಯನ್ನು ರಾಜ್ಯ ಸರ್ಕಾರ ನೇಮಕ ಮಾಡಬೇಕು. ಆ ಮೂಲಕ ತನ್ನ ಇಚ್ಛೆಯಂತೆ ವೈದ್ಯಕೀಯ ಮಂಡಳಿ ಮತ್ತು ಪರಿಣಿತರನ್ನು ನೇಮಕ ಮಾಡಲು ಕೆಪಿಎಸ್‌ಸಿಗೆ ಮುಕ್ತ ಅವಕಾಶ ಕಲ್ಪಿಸಬಾರದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದೆ.