High Court of Karnataka
High Court of Karnataka 
ಸುದ್ದಿಗಳು

ತನಿಖಾ ವರದಿಯ ಅನುಸಾರ ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕ ತಳವಾರ ವಿರುದ್ಧ ಕ್ರಮಕ್ಕೆ ಆದೇಶಿಸಿದ ಹೈಕೋರ್ಟ್‌

Bar & Bench

ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕ ಎಚ್ ಯು ತಳವಾರ ವಿರುದ್ಧ ಲೋಕಾಯುಕ್ತ ಸಂಸ್ಥೆ, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಬಿ ವಿ ಕೃಷ್ಣ ರಾವ್ ಮತ್ತು ಐಎಎಸ್ ಅಧಿಕಾರಿ ವಿಕಾಸ್ ಕಿಶೋರ್ ಸುರಾಳ್ಕರ್‌ ಅವರ ತನಿಖಾ ವರದಿ ಆಧರಿಸಿ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಮಂಗಳವಾರ ನಿರ್ದೇಶಿಸಿದೆ.

ತಳವಾರ ವಿರುದ್ಧ ಕ್ರಮ ಜರುಗಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ನಿವೃತ್ತ ಉಪನ್ಯಾಸಕ ಆರ್ ನಾರಾಯಣ ಸ್ವಾಮಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸ್ವಯಂ ಪ್ರೇರಿತ ಅರ್ಜಿಯಾಗಿ ಪರಿವರ್ತಿಸಿಕೊಂಡು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ವಿಚಾರಣೆ ನಡೆಸಿತು.

ತಳವಾರ ವಿರುದ್ಧ ಸಲ್ಲಿಕೆಯಾದ ಮೂರು ತನಿಖಾ ವರದಿ ಆಧರಿಸಿ ಸರ್ಕಾರ ತನ್ನ ವಿವೇಚನೆಯಂತೆ ಕ್ರಮ ಕೈಗೊಳ್ಳಬಹುದು. ಈ ಕುರಿತ ಅನುಪಾಲನಾ ವರದಿಯನ್ನು ರಿಜಿಸ್ಟ್ರಿಗೆ ಸಲ್ಲಿಸಬೇಕು ಎಂದು ನಿರ್ದೇಶಿಸಿ ಮನವಿಯನ್ನು ಇತ್ಯರ್ಥಪಡಿಸಿತು.

ತಳವಾರ ಅವರ ನೇಮಕಾತಿ ಮತ್ತವರ ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ನಡೆಸಿದ್ದಾರೆ ಎನ್ನಲಾದ ಭ್ರಷ್ಟಾಚಾರ, ಅಧಿಕಾರ ದುರ್ಬಳಕೆ ಕುರಿತು ಲೋಕಾಯಕ್ತ ಸಂಸ್ಥೆ, ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ಬಿ ವಿ ಕೃಷ್ಣ ರಾವ್ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ನಂತರ ತಳವಾರ ವಿರುದ್ಧ ವೈಯಕ್ತಿಕವಾಗಿ ಆರೋಪ ಮಾಡಿ 56 ದೂರು ಸಲ್ಲಿಕೆಯಾಗಿದ್ದವು. ಅವುಗಳ ತನಿಖೆ ನಡೆಸಿದ್ದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಾರ್ಯ ನಿರ್ವಾಹಕ ನಿರ್ದೇಶಕ ವಿಕಾಸ್ ಕಿಶೋರ್ ಸುರಾಳ್ಕರ್‌, 56 ದೂರುಗಳ ಪೈಕಿ ಒಟ್ಟು 11 ದೂರುಗಳಲ್ಲಿ ತಳವಾರ ಅವರ ಕರ್ತವ್ಯ ನಿರ್ಲಕ್ಷತೆ ಮೇಲ್ನೋಟಕ್ಕೆ ಸಾಬೀತಾಗಿದೆ. ಅವರ ಕಾರ್ಯ ವೈಖರಿ ತೃಪ್ತಿಕರವಾಗಿರುವುದಿಲ್ಲ ಎಂದು ತಿಳಿಸಿದ್ದರು.

ಸರ್ಕಾರವು ಈ ಮೂರು ವರದಿಯನ್ನು ಪರಿಗಣಿಸಿ ತಳವಾರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ಷೇಪಿಸಿ ನಾರಾಯಣ ಸ್ವಾಮಿ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸಿದ್ದರು. ತಳವಾರ ನೀಡಿದ್ದ ದೂರಿನ ಮೇಲೆ ಪೊಲೀಸರು ಅರ್ಜಿದಾರರನ್ನು ಬಂಧಿಸಿದ್ದ ಅಂಶ ವಿಚಾರಣೆ ವೇಳೆ ಬಯಲಾಗಿತ್ತು. ಇದರಿಂದ ಅವರನ್ನು ಪ್ರಕರಣದಿಂದ ಕೈಬಿಟ್ಟಿದ್ದ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ವಿಚಾರಣೆ ನಡೆಸುತ್ತಿತ್ತು.