Justice R Devadas 
ಸುದ್ದಿಗಳು

ಸಾಂಪ್ರದಾಯಿಕ ಉಡುಗೆಯಲ್ಲಿ ದೇವಸ್ಥಾನ ಪ್ರವೇಶಕ್ಕೆ ನಿರ್ಬಂಧವಿಲ್ಲ: ಆಡಳಿತ ಮಂಡಳಿಗೆ ಹೈಕೋರ್ಟ್‌ ನಿರ್ದೇಶನ

ಕಟ್ಟೆಮಾಡು ಮಹಾಮೃತ್ಯುಂಜಯ ಮಹದೇಶ್ವರ ದೇವಸ್ಥಾನವನ್ನು ಸರ್ಕಾರದ ಜಾಗದಲ್ಲಿ ನಿರ್ಮಿಸಲಾಗಿದ್ದರೂ ಕೊಡವರು ಸಾಂಪ್ರದಾಯಿಕ ಉಡುಗೆಯಲ್ಲಿ ದೇವಸ್ಥಾನ ಪ್ರವೇಶಿಸುವುದಕ್ಕೆ ದೇವಸ್ಥಾನದ ಆಡಳಿತ ಮಂಡಳಿಯು ನಿರ್ಬಂಧಿಸಿದೆ ಎಂದು ಆಕ್ಷೇಪಿಸಲಾಗಿದೆ.

Bar & Bench

ಸಾಂಪ್ರದಾಯಿಕ ಉಡುಗೆಯಲ್ಲಿ ಬರುವವರಿಗೆ ದೇವಸ್ಥಾನ ಪ್ರವೇಶಕ್ಕೆ ನಿರ್ಬಂಧಿಸದಂತೆ ಮಡಿಕೇರಿಯ ಕಟ್ಟೆಮಾಡು ಮಹಾಮೃತ್ಯುಂಜಯ ಮಹದೇಶ್ವರ ಕೇತ್ರದ ಆಡಳಿತ ಮಂಡಳಿಗೆ ಕರ್ನಾಟಕ ಹೈಕೋರ್ಟ್‌ ಬುಧವಾರ ನಿರ್ದೇಶಿಸಿದೆ.

ವಸ್ತ್ರಸಂಹಿತೆಗೆ ಸಂಬಂಧಿಸಿದಂತೆ ದೇವಸ್ಥಾನದ ಬೈಲಾದಲ್ಲಿರುವ ವಿವಾದಾತ್ಮಕ ಅಂಶಗಳಿಗೆ ಆಕ್ಷೇಪಿಸಿ ಮಡಿಕೇರಿ ನಿವಾಸಿ ಸಿ ಎ ಸಂಜು ಹಾಗೂ ವಿರಾಜಪೇಟೆ ನಿವಾಸಿ ಅಮಿತ್ ಪಿ. ಭೀಮಯ್ಯ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಆರ್ ದೇವದಾಸ್ ಅವರ ಏಕಸದಸ್ಯ ಪೀಠ ನಡೆಸಿತು.

“ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ಬರುವ ಯಾವುದೇ ವ್ಯಕ್ತಿಯನ್ನು ದೇವಾಲಯದ ಆವರಣ ಪ್ರವೇಶಿಸುವುದಕ್ಕೆ ಮಹಾಮೃತ್ಯುಂಜಯ ಮಹದೇಶ್ವರ ಕೇತ್ರದ ಆಡಳಿತ ಮಂಡಳಿಯು ನಿರ್ಬಂಧ ವಿಧಿಸಬಾರದು” ಎಂದು ಮಧ್ಯಂತರ ಆದೇಶ ಮಾಡಿದೆ.

ಅಲ್ಲದೇ ಅರ್ಜಿ ಸಂಬಂಧ ಕೊಡಗು ಸಹಕಾರ ಸಂಘಗಳ ಉಪ ನೋಂದಣಾಧಿಕಾರಿ, ಕಟ್ಟೆಮಾಡು ಮಹಾಮೃತ್ಯುಂಜಯ ದೇವಸ್ಥಾನ ಆಡಳಿತ ಮಂಡಳಿ, ಕೊಡಗು ಜಿಲ್ಲಾಧಿಕಾರಿ ಹಾಗೂ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಫೆಬ್ರವರಿ 27ಕ್ಕೆ ಮುಂದೂಡಿತು.

ಅರ್ಜಿದಾರರ ಪರವಾಗಿ ವಕಲಾತ್ತು ಹಾಕಿರುವ ವಕೀಲ ಕೆ ಎಸ್ ಪೊನ್ನಪ್ಪ ಪರವಾಗಿ ವಾದಿಸಿದ ಹಿರಿಯ ಹಿರಿಯ ವಕೀಲ ಕೆ ಎನ್ ಫಣೀಂದ್ರ ಅವರು “ದೇವಸ್ಥಾನದ ಆಡಳಿತ ಮಂಡಳಿಯು ಕೊಡವರು ಸಾಂಪ್ರದಾಯಿಕ ಉಡುಗೆಯಲ್ಲಿ ದೇವಸ್ಥಾನ ಪ್ರವೇಶಿಸುವುದಕ್ಕೆ ನಿರ್ಬಂಧಿಸಿದೆ. ಡಿಸೆಂಬರ್‌ 2024ದಿಂದ ಈ ಸಮಸ್ಯೆ ಆರಂಭವಾಗಿದೆ. ಸರ್ಕಾರದ ಜಾಗದಲ್ಲಿ ದೇವಸ್ಥಾನ ನಿರ್ಮಿಸಲಾಗಿದ್ದು, 2024ರ ಅಕ್ಟೋಬರ್‌ನಲ್ಲಿ ಸೊಸೈಟಿ ಕಾಯಿದೆ ಅಡಿ ಮಹಾಮೃತ್ಯುಂಜಯ ಮಹದೇಶ್ವರ ಕೇತ್ರ ನೋಂದಣಿ ಮಾಡಿಸಲಾಗಿದೆ. ಆನಂತರ ಬೈಲಾ ರೂಪಿಸಿ, ವಸ್ತ್ರಸಂಹಿತೆ ಜಾರಿಗೊಳಿಸಲಾಗಿದೆ. ಇದಕ್ಕೆ ಆಕ್ಷೇಪಿಸಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ನಿಷೇಧಾಜ್ಞೆಯನ್ನೂ ಜಾರಿಗೊಳಿಸಲಾಗಿತ್ತು” ಎಂದು ಪೀಠಕ್ಕೆ ವಿವರಿಸಿದರು.

ದೇವಸ್ಥಾನದ ಹಾಲಿ ಆಡಳಿತ ಮಂಡಳಿಗೆ ಜಿಲ್ಲಾ ಉಪ ನೋಂದಣಾಧಿಕಾರಿಗಳು 2024ರ ಅಕ್ಟೋಬರ್‌ 10ರಂದು ನೀಡಿರುವ ನೋಂದಣಿ ಪ್ರಮಾಣ ಪತ್ರ ರದ್ದುಪಡಿಸಬೇಕು. ಆಡಳಿತ ಮಂಡಳಿ ರೂಪಿಸಿರುವ ಬೈಲಾದಲ್ಲಿ ವಸ್ತ್ರಸಂಹಿತೆಗೆ ಸಂಬಂಧಿಸಿದ ಸೆಕ್ಷನ್ 4(7) ಜಾರಿಗೆ ತಡೆ ನೀಡಬೇಕು.

ಸಾಂಪ್ರದಾಯಿಕ ಉಡುಪು ಧರಿಸಿ ಬರುವ ಕೊಡವ ಹಾಗೂ ಕೊಡವ ಭಾಷಿಕ ಜನರಿಗೆ ಮಹಾಮೃತ್ಯುಂಜಯ ದೇವಸ್ಥಾನ ಪ್ರವೇಶಿಸಲು ಮತ್ತು ಧಾರ್ಮಿಕ ಆಚರಣೆಗಳನ್ನು ಕೈಗೊಳ್ಳಲು ಅಡ್ಡಿಪಡಿಸದಂತೆ ದೇವಸ್ಥಾನ ಆಡಳಿತ ಮಂಡಳಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.