Aadhaar 
ಸುದ್ದಿಗಳು

ನಾಪತ್ತೆ ಪ್ರಕರಣ: ತನಿಖೆಗೆ ಆಧಾರ್‌ ಕಾರ್ಡ್‌ ಬಳಕೆ ವಿವರ ಒದಗಿಸಲು ಯುಐಡಿಎಐಗೆ ಹೈಕೋರ್ಟ್‌ ನಿರ್ದೇಶನ

ತನಿಖೆಯ ವೇಳೆ ಪೊಲೀಸರಾಗಲಿ ಅಥವಾ ಬೇರಾವುದೇ ಸಂಸ್ಥೆಯಾಗಲಿ ದೃಢೀಕರಣ ಸೇರಿದಂತೆ ಆಧಾರ್‌ ಬಳಕೆ ಮಾಡಬೇಕಾಗಿ ಬಂದರೆ ಅಂತಹ ಸಂದರ್ಭಗಳಲ್ಲಿ ಆಧಾರ್‌ ಕಾಯಿದೆ 2016ರ ಸೆಕ್ಷನ್‌ 33ರ ಅನ್ವಯ ಹೈಕೋರ್ಟ್ ಮುಂದೆ ಅರ್ಜಿ ಸಲ್ಲಿಸಬೇಕು ಎಂದಿರುವ ನ್ಯಾಯಾಲಯ.

Bar & Bench

ನಾಪತ್ತೆಯಾಗಿರುವ ವ್ಯಕ್ತಿಯ ಸಂಬಂಧಿತ ದೂರಿನ ತನಿಖೆಗಾಗಿ ಆತ ಕೊನೆಯ ಬಾರಿ ಆಧಾರ್‌ ಕಾರ್ಡ್‌ ಬಳಕೆ ಮಾಡಿದ್ದ ಸ್ಥಳದ ವಿವರಗಳನ್ನು ಒದಗಿಸುವಂತೆ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರಕ್ಕೆ (ಯುಐಡಿಎಐ) ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠ​ ಈಚೆಗೆ ನಿರ್ದೇಶಿಸಿದೆ.

ಹುಬ್ಬಳ್ಳಿಯ ರಾಮಲಿಂಗೇಶ್ವರ ನಗರದ ಕೃಷ್ಣಮೂರ್ತಿ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್ ಅವರ ಏಕಸದಸ್ಯ ಈ ಆದೇಶ ಮಾಡಿದೆ.

Justice Suraj Govindraj

ತನಿಖೆಯ ವೇಳೆ ಪೊಲೀಸರಾಗಲಿ ಅಥವಾ ಬೇರಾವುದೇ ಸಂಸ್ಥೆಯಾಗಲಿ ದೃಢೀಕರಣ ಸೇರಿದಂತೆ ಆಧಾರ್‌ ಬಳಕೆ ಮಾಡಬೇಕಾಗಿ ಬಂದರೆ ಅಂತಹ ಸಂದರ್ಭಗಳಲ್ಲಿ ಆಧಾರ್‌ ಕಾಯಿದೆ 2016ರ ಸೆಕ್ಷನ್‌ 33ರ ಅನ್ವಯ ಹೈಕೋರ್ಟ್ ಮುಂದೆ ಅರ್ಜಿ ಸಲ್ಲಿಸಬೇಕು.

ನ್ಯಾಯಾಲಯವು ಈ ಸಂಬಂಧ ಸಲ್ಲಿಕೆಯಾದ ಅರ್ಜಿಯ ವಿಚಾರಣೆ ನಡೆಸಿದ ಬಳಿಕ “ಆಧಾರ್‌ ಕಾಯಿದೆಯ ಸೆಕ್ಷನ್‌ 33 ರ ಅಡಿ ಯುಐಡಿಎಐಗೆ ಸೂಕ್ತ ಕಾಲಾವಕಾಶ ನೀಡಬೇಕು, ತದನಂತರ, ಆಧಾರ್‌ ಕಾರ್ಡ್‌ ಬಳಕೆಗೆ ಸಂಬಂಧಿಸಿದ ಮಾಹಿತಿ, ಅದನ್ನು ಎಲ್ಲಿ ಬಳಕೆ ಮಾಡಲಾಗಿದೆ ಎಂಬ ಮಾಹಿತಿ ಒದಗಿಸುವ ಕುರಿತು ನ್ಯಾಯಯುತವೂ ಮತ್ತು ಅಗತ್ಯವೂ ಆದ ಮಾಹಿತಿ ಒದಗಿಸಲು ಯುಐಡಿಎಐಗೆ ಆದೇಶ ನೀಡಬಹುದು ಎಂದು ಪೀಠವು ತನ್ನ ಆದೇಶದಲ್ಲಿ ದಾಖಲಿಸಿದೆ.

ಆಧಾರ್ ಕಾಯಿದೆಯ ಸೆಕ್ಷನ್ 29ರ ಅಡಿ ಮಾಹಿತಿ ನೀಡಲು ನಿರ್ಬಂಧವಿದೆ. ಆದರೆ, ಆ ನಿರ್ಬಂಧದ ಮೂಲ ಬಯೋಮೆಟ್ರಿಕ್ ಮಾಹಿತಿಗಷ್ಟೇ. ಆದರೆ ಯಾರಾದರೂ ನಿರ್ದಿಷ್ಟವಾಗಿ ಅರ್ಜಿ ಸಲ್ಲಿಸಿದಾಗ ಆಧಾರ್‌ ಸಂಖ್ಯೆ, ಬಯೋಮೆಟ್ರಿಕ್ ಮಾಹಿತಿ ಮತ್ತು ಡೆಮೋಗ್ರಾಫಿಕ್ ಮಾಹಿತಿಯನ್ನು ಒದಗಿಸಬೇಕಾಗುತ್ತದೆ. ಮತ್ತು ಕೆಲವೊಂದು ಸಂದರ್ಭಗಳಲ್ಲಿ ತನಿಖೆಯ ಉದ್ದೇಶಕ್ಕೆ ಅಗತ್ಯ ಮಾಹಿತಿಯನ್ನು ಒದಗಿಸುವಂತೆ ಯುಐಡಿಎಐಗೆ ನ್ಯಾಯಾಲಯಗಳು ಸೂಕ್ತ ನಿರ್ದೇಶನ ನೀಡಬಹುದಾಗಿದೆ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.

ಹೀಗಾಗಿ, ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ನಾಪತ್ತೆಯಾಗಿರುವ ಪುತ್ರನ ಆಧಾರ್‌ ಬಳಕೆ ಬಗ್ಗೆ ದೂರು ನೀಡಿದ 15 ದಿನಗಳ ಹಿಂದಿನಿಂದ ಹಿಡಿದು ಈವರೆಗಿನ ಎಲ್ಲಾ ಮಾಹಿತಿಯನ್ನು 15 ದಿನಗಳಲ್ಲಿ ತನಿಖಾಧಿಕಾರಿಗೆ ಒದಗಿಸಬೇಕು. ತನಿಖಾಧಿಕಾರಿಯು ಆ ಮಾಹಿತಿಯನ್ನು ತನಿಖೆಯ ಉದ್ದೇಶಕ್ಕೆ ಹೊರತುಪಡಿಸಿ ಇತರೆ ಯಾರೊಂದಿಗೂ ಹಂಚಿಕೊಳ್ಳಬಾರದು ಎಂದು ನ್ಯಾಯಾಲಯ ಆದೇಶ ಮಾಡಿದೆ.

ಪ್ರಕರಣದ ಹಿನ್ನೆಲೆ: ಅರ್ಜಿದಾರರ ಮಗ 2019ರ ನಾಪತ್ತೆಯಾಗಿದ್ದರು. ಈ ಸಂಬಂಧ ಅರ್ಜಿದಾರರು 2019ರ ಡಿಸೆಂಬರ್​ 19ರಂದು ಹುಬ್ಬಳ್ಳಿಯ ಗೋಕುಲ್​ ರಸ್ತೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ, ಈ ಸಂಬಂಧ ಹಲವು ಪ್ರಯತ್ನ ನಡೆಸಿದರು, ನಾಪತ್ತೆಯಾದ ಮಗ ಪತ್ತೆಯಾಗಿರಲಿಲ್ಲ.

ಆದರೆ, 2023ರ ಜೂನ್‌ 20ರಂದು ನಾಪತ್ತೆಯಾದ ಪುತ್ರನ ಆಧಾರ್‌ ಬಳಕೆ ದೃಢೀಕರಣವಾಗಿರುವುದು ಸಂಬಂಧ ಮಾಹಿತಿ ಲಭ್ಯವಾಗಿತ್ತು. ತಕ್ಷಣ ಅರ್ಜಿದಾರರು ಹುಬ್ಬಳ್ಳಿಯ ಪೊಲೀಸ್​ ಕಮಿಷನರ್​ ಮತ್ತು ಆಧಾರ್​ನ ಪ್ರಾದೇಶಿಕ ಕಚೇರಿಗೆ ಮಾಹಿತಿ ನೀಡಿದ್ದರು. ಜೊತೆಗೆ, ತಮ್ಮ ಮಗನ ಆಧಾರ್‌ ಬಳಕೆ ವಿವರಗಳನ್ನು ಒದಗಿಸುವಂತೆ ಅರ್ಜಿದಾರರು ಯುಐಡಿಎಐಗೆ 2024ರ ಮೇ 10ರಂದು ಮನವಿ ಸಲ್ಲಿಸಿದ್ದರು. ಆ ಮನವಿಯನ್ನು ಪ್ರಾಧಿಕಾರ ಪರಿಗಣಿಸಿರಲಿಲ್ಲ. ಹೀಗಾಗಿ ತನಿಖೆಗೆ ಆ ವಿವರಗಳನ್ನು ಒದಗಿಸುವಂತೆ ಅರ್ಜಿದಾರರು ಹೈಕೋರ್ಟ್​ ಮೆಟ್ಟಿಲೇರಿದ್ದರು.

Krishnamurthy Vs UIDAI.pdf
Preview