Martin 
ಸುದ್ದಿಗಳು

'ಮಾರ್ಟಿನ್‌ʼ ಸಿನಿಮಾ ಪೋಸ್ಟರ್‌ನಲ್ಲಿ 'ಎ ಪಿ ಅರ್ಜುನ್‌ ಫಿಲ್ಮ್‌ʼ ಟ್ಯಾಗ್‌ಲೈನ್‌ ಬಳಕೆಗೆ ಹೈಕೋರ್ಟ್‌ ನಿರ್ದೇಶನ

ಈಗಾಗಲೇ ಮುದ್ರಿಸಿರುವುದನ್ನು ಹೊರತುಪಡಿಸಿ ಮುಂದೆ ಮುದ್ರಿಸುವ ಮಾರ್ಟಿನ್‌ ಚಿತ್ರದ ಪೋಸ್ಟರ್‌ & ಪ್ರಚಾರ ದಾಖಲೆಗಳಲ್ಲಿ 'ಎ ಪಿ ಅರ್ಜುನ್‌ ಫಿಲ್ಮ್‌ʼ ಎಂದು ಹಾಕಬೇಕು. ಸಿನಿಮಾದ ಪ್ರಚಾರ ಚಟುವಟಿಕೆಗಳಲ್ಲಿ ಭಾಗವಹಿಸಲು ಅರ್ಜುನ್‌ಗೆ ಅನುಮತಿಸಬೇಕು.

Bar & Bench

ನಟ ಧ್ರುವ ಸರ್ಜಾ ಅಭಿನಯದ 'ಮಾರ್ಟಿನ್‌ʼ ಚಿತ್ರದ ಪೋಸ್ಟರ್‌ ಮತ್ತಿತರ ಪ್ರಚಾರ ದಾಖಲೆಗಳಲ್ಲಿ ನಿರ್ದೇಶಕ ಎ ಪಿ ಅರ್ಜುನ್‌ ಫಿಲ್ಮ್‌ ಎಂಬ ಟ್ಯಾಗ್‌ಲೈನ್‌ ಬಳಕೆ ಮಾಡಬೇಕು ಹಾಗೂ ನಿರ್ದೇಶಕರನ್ನು ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅನುಮತಿಸುವಂತೆ ಚಿತ್ರ ನಿರ್ಮಾಪಕರಿಗೆ ಕರ್ನಾಟಕ ಹೈಕೋರ್ಟ್‌ ಶುಕ್ರವಾರ ನಿರ್ದೇಶಿಸಿದೆ.

ಚಿತ್ರ ನಿರ್ದೇಶಕ ಬೆಂಗಳೂರಿನ ಎ ಪಿ ಅರ್ಜುನ್‌ ಸಲ್ಲಿಸಿದ್ದ ವಾಣಿಜ್ಯ ಮೇಲ್ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎಸ್‌ ಆರ್‌ ಕೃಷ್ಣ ಕುಮಾರ್‌ ಮತ್ತು ಎಂ ಜಿ ಉಮಾ ಅವರ ರಜಾಕಾಲೀನ ವಿಭಾಗೀಯ ಪೀಠ ನಡೆಸಿತು.

ಈಗಾಗಲೇ ಮುದ್ರಿಸಿರುವುದನ್ನು ಹೊರತುಪಡಿಸಿ ಮುಂದೆ ಮುದ್ರಿಸುವ ಮಾರ್ಟಿನ್‌ ಚಿತ್ರದ ಪೋಸ್ಟರ್‌ ಮತ್ತು ಪ್ರಚಾರ ದಾಖಲೆಗಳಲ್ಲಿ 'ಎ ಪಿ ಅರ್ಜುನ್‌ ಫಿಲ್ಮ್‌ʼ ಎಂಬ ಟ್ಯಾಗ್‌ಲೈನ್‌ ಹಾಕಬೇಕು. ಸಿನಿಮಾದ ಪ್ರಚಾರ ಚಟುವಟಿಕೆಗಳಿಗೆ ಎ ಪಿ ಅರ್ಜುನ್‌ಗೆ ಅವಕಾಶ ಮಾಡಿಕೊಡಬೇಕು. ಪ್ರಚಾರ ಚಟುವಟಿಕೆ ವೇಳೆ ಅರ್ಜುನ್‌ ಚಿತ್ರ ಮತ್ತು ತಂಡದ ವಿರುದ್ಧ ಯಾವುದೇ ಕೆಟ್ಟ ಅಭಿಪ್ರಾಯ ವ್ಯಕ್ತಪಡಿಸಬಾರದು ಎಂದು ನ್ಯಾಯಾಲಯವು ಆದೇಶಿಸಿದೆ.

ಪ್ರತಿವಾದಿಗಳಾದ ಚಿತ್ರ ನಿರ್ಮಾಣ ಸಂಸ್ಥೆಗಳಾದ ವಾಸವಿ ಎಂಟರ್‌ಪ್ರೈಸಸ್‌, ಅದರ ಪಾಲುದಾರರಾದ ಉದಯ್‌ ಮತ್ತು ವಾಸವಿ ಮೆಹ್ತಾ ಅವರಿಗೆ ನೋಟಿಸ್‌ ಜಾರಿ ಮಾಡಲಾಗಿದ್ದು, ಅಕ್ಟೋಬರ್‌ 14ಕ್ಕೆ ವಿಚಾರಣೆ ಮುಂದೂಡಲಾಗಿದೆ.

ಅರ್ಜುನ್‌ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಉದಯ್‌ ಹೊಳ್ಳ ಅವರು “ಚಿತ್ರದ ನಿರ್ದೇಶಕನಾದ ನನ್ನನ್ನು ಪ್ರಮೋಷನ್‌ಗೆ ಕರೆಯಬೇಕು. ಒಪ್ಪಂದರ ಪ್ರಕಾರ ಸಿನಿಮಾ ಬಿಡುಗಡೆಗೂ ಮುನ್ನ ನಮಗೆ ವೇತನ ಪಾವತಿಸಬೇಕು. ಅಲ್ಲದೇ, ಪೋಸ್ಟರ್‌ ಮತ್ತು ಪ್ರಚಾರದ ದಾಖಲೆಗಳಲ್ಲಿ ಎ ಪಿ ಅರ್ಜುನ್‌ ಫಿಲ್ಮ್‌ ಎಂದು ಬರೆಯಬೇಕು” ಎಂದರು.

ಪ್ರತಿವಾದಿಗಳನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಚೇತನ್‌ ಜಾಧವ್‌ ಅವರು “3,800 ಚಿತ್ರಮಂದಿರಗಳಲ್ಲಿ ಮುಂದಿನ ಶುಕ್ರವಾರ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈ ಹಂತದಲ್ಲಿ ಯಾವುದೇ ಬದಲಾವಣೆ ಮಾಡಲಾಗದು. ಈ ವಿವಾದ ಚಲನಚಿತ್ರ ವಾಣಿಜ್ಯ ಮಂಡಳಿಯ ಮುಂದೆ ಬಂದಿದ್ದು, ಅವರು ನಿರ್ದೇಶನ ನೀಡಿದ್ದಾರೆ. ಅರ್ಜುನ್‌ ಅದರಂತೆ ನಡೆದುಕೊಂಡಿಲ್ಲ. ಅಕ್ಟೋಬರ್‌ 1ರಂದು ಸೆನ್ಸಾರ್‌ ಮಂಡಳಿಯು ಯು/ಎ ಸರ್ಟಿಫಿಕೇಟ್‌ ನೀಡಿದ್ದು, ಈಗ ಏನೂ ಬದಲಾವಣೆ ಮಾಡಲಾಗದು” ಎಂದು ಆಕ್ಷೇಪಿಸಿದರು.