Praveen Nettaru and Karnataka High Court 
ಸುದ್ದಿಗಳು

ಕೇಸ್‌ ಡೈರಿಯ ಪ್ರತಿ ಪುಟಕ್ಕೂ ತನಿಖಾಧಿಕಾರಿ ಸಹಿ ಹಾಕಲು ನಿರ್ದೇಶನ ಕೋರಿದ್ದ ಮೇಲ್ಮನವಿ ವಜಾ ಮಾಡಿದ ಹೈಕೋರ್ಟ್‌

“ಹಾಲಿ ಕಾನೂನಿನಲ್ಲಿ ಕೇಸ್‌ ಡೈರಿಯಲ್ಲಿ ಸಹಿ ಹಾಕಲು ಅವಕಾಶ ನೀಡುವಂತಹ ನಿಯಮಗಳಿಲ್ಲ. ಏನೇ ತಕರಾರುಗಳಿದ್ದರೆ ಅವನ್ನು ಹಾಲಿ ಕಾನೂನಿನ ಅಡಿ ವಿಶ್ಲೇಷಿಸಬಹುದೇ ಹೊರತು, ವಿಶ್ಲೇಷಣೆಯ ಹೆಸರಲ್ಲಿ ಹೊಸ ಕಾನೂನು ಜಾರಿ ಮಾಡಲಾಗದು” ಎಂದಿರುವ ಪೀಠ.

Bar & Bench

“ತನಿಖಾ ಸಂಸ್ಥೆಗಳು ನಿರ್ವಹಿಸುತ್ತಿರುವ ಕೇಸ್‌ ಡೈರಿಯನ್ನು (ಸಿ ಡಿ) ತಿದ್ದುವ ಅಥವಾ ತಿರುಚುವ ಸಾಧ್ಯತೆ ಇರುವ ಕಾರಣ ತನಿಖಾಧಿಕಾರಿಯು ಅದರ ಪ್ರತಿ ಪುಟಕ್ಕೂ ಸಹಿ ಹಾಕುವಂತೆ ನಿರ್ದೇಶಿಸಬೇಕು” ಎಂದು ಕೋರಲಾಗಿದ್ದ ಮೇಲ್ಮನವಿಯನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ವಜಾ ಮಾಡಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಮೊಹಮ್ಮದ್‌ ಶಿಯಾಬ್‌ ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್‌ ಅವರ ನೇತೃತ್ವದ ವಿಭಾಗೀಯ ಪೀಠ ವಜಾಗೊಳಿಸಿದೆ.

“ಹಾಲಿ ಕಾನೂನುಗಳ‌ ಅನುಸಾರ ಕೇಸ್‌ ಡೈರಿಯಲ್ಲಿ ಸಹಿ ಹಾಕಲು ಅವಕಾಶ ನೀಡುವಂತಹ ನಿಯಮಗಳಿಲ್ಲ. ಹೀಗಾಗಿ, ಏನೇ ತಕರಾರುಗಳಿದ್ದರೆ ಅವುಗಳನ್ನು ಹಾಲಿ ಕಾನೂನುಗಳ ಅಡಿ ವಿಶ್ಲೇಷಿಸಬಹುದೇ ಹೊರತು, ವಿಶ್ಲೇಷಣೆಯ ಹೆಸರಿನಲ್ಲಿ ನ್ಯಾಯಾಲಯ ಹೊಸ ಕಾನೂನು ಜಾರಿಗೊಳಿಸಲಾಗದು” ಎಂದು ಪೀಠ ಅಭಿಪ್ರಾಯಪಟ್ಟಿದೆ.

“ಶಾಸನಗಳಲ್ಲಿ ಇರುವ ಪದಗಳನ್ನು ವ್ಯಾಖ್ಯಾನಿಸಲು ಅಥವಾ ವಿಶ್ಲೇಷಿಸಲು ನ್ಯಾಯಾಲಯಕ್ಕೆ ಅಧಿಕಾರವಿದೆ. ಶಾಸನ ರೂಪಿಸಿದ ನಂತರ ಅದರಲ್ಲಿರುವ ಪದಗಳನ್ನು ಹೊರತುಪಡಿಸಿ ನ್ಯಾಯಾಲಯವೇ ಹೆಚ್ಚುವರಿ ಪದಗಳನ್ನು ಸೇರ್ಪಡೆ ಮಾಡಲು ಆಗದು” ಎಂದು ಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ವಿಚಾರಣಾಧೀನ ನ್ಯಾಯಾಲಯ ತನಿಖಾಧಿಕಾರಿಗೆ "ಕೇಸ್‌ ಡೈರಿ ಹಾಜರುಪಡಿಸಿ" ಎಂದು ತನಿಖಾಧಿಕಾರಿಗೆ ನಿರ್ದೇಶನ ನೀಡಿತ್ತು. ಅದರಂತೆ ತನಿಖಾಧಿಕಾರಿ ಕೇಸ್‌ ಡೈರಿ ಸಲ್ಲಿಸಿ ಅದನ್ನು ವಾಪಸು ಪಡೆದುಕೊಂಡಿದ್ದರು. ಇದಕ್ಕೆ ಆರೋಪಿ ಮೊಹಮ್ಮದ್‌ ಶಿಯಾಬ್‌ ಮೆಮೊ ಸಲ್ಲಿಸಿ, "ಕೇಸ್‌ ಡೈರಿಯಲ್ಲಿ ಏನಾದರೂ ಸೇರ್ಪಡೆ ಅಥವಾ ತಿದ್ದುಪಡಿ ಮಾಡುವ ಸಾಧ್ಯತೆ ಇದೆ. ಹಾಗಾಗಿ, ತನಿಖಾಧಿಕಾರಿ ನ್ಯಾಯಾಲಯಕ್ಕೆ ಕೇಸ್‌ ಡೈರಿ ಸಲ್ಲಿಸಿದಾಗ ಅದರ ಪ್ರತಿ ಪುಟದಲ್ಲೂ ಸಹಿ ಹಾಕುವಂತೆ ನಿರ್ದೇಶಿಸಬೇಕು ಎಂದು ವಿಚಾರಣಾ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆದರೆ, ವಿಚಾರಣಾಧೀನ ನ್ಯಾಯಾಲಯ 2022ರ ನವೆಂಬರ್ 16ರಂದು ಈ ಮನವಿಯನ್ನು ತಿರಸ್ಕರಿಸಿತ್ತು.

ಇದನ್ನು ಪ್ರಶ್ನಿಸಿ ಆರೋಪಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠ ಈ ರಿಟ್ ಅರ್ಜಿಯನ್ನು ವಜಾ ಮಾಡಿದ್ದ ವಿಚಾರಣಾಧೀನ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿತ್ತು.

Mohammed Shiyab Vs NIA.pdf
Preview