ತಮ್ಮ ನಿವೃತ್ತಿ ವಯಸ್ಸನ್ನು 62ರಿಂದ 65 ವರ್ಷಕ್ಕೆ ಹೆಚ್ಚಿಸುವಂತೆ ಕೋರಿ ಹುಬ್ಬಳ್ಳಿಯ ಕೃಷಿ ವಿಜ್ಞಾನ ಕಾಲೇಜಿನ ಡೀನ್ ಸಲ್ಲಿಸಿದ್ದ ಮೇಲ್ಮನವಿಯನ್ನು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ಈಚೆಗೆ ವಜಾ ಮಾಡಿದೆ.
ಹುಬ್ಬಳ್ಳಿಯ ಹನುಮನಟ್ಟಿಯ ಕೃಷಿ ವಿಜ್ಞಾನ ಕಾಲೇಜಿನ ಡೀನ್ ಆಗಿದ್ದ ಡಾ. ಚಿದಾನಂದ ಪಿ ಮನ್ಸೂರ್ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್ ಮತ್ತು ಪಿ ಕೃಷ್ಣ ಭಟ್ ಅವರ ನೇತೃತ್ವದ ವಿಭಾಗೀಯ ಪೀಠವು ತಿರಸ್ಕರಿಸಿದೆ.
“ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) 2018ರ ನಿಯಮಾವಳಿಗಳು ರಾಜ್ಯ ಸರ್ಕಾರ ಮತ್ತು ರಾಜ್ಯದ ವಿಶ್ವವಿದ್ಯಾಲಯಗಳಿಗೆ ಅನ್ವಯಿಸುವುದಿಲ್ಲ” ಎಂದಿರುವ ನ್ಯಾಯಾಲಯವು ನಿವೃತ್ತಿ ವಯಸ್ಸು ಹೆಚ್ಚಿಸುವುದನ್ನು ತಿರಸ್ಕರಿಸುವಾಗ ನ್ಯಾ. ಆರ್ ದೇವದಾಸ್ ನೇತೃತ್ವದ ಏಕಸದಸ್ಯ ಪೀಠವು ಉಲ್ಲೇಖಿಸಿರುವ ಅಂಶಗಳನ್ನು ಎತ್ತಿ ಹಿಡಿದಿದೆ.
“ನಿವೃತ್ತಿಯ ವಯಸ್ಸನ್ನು ನಿರ್ಧರಿಸುವ ವಿಚಾರವನ್ನು ರಾಜ್ಯದ ವಿಶ್ವವಿದ್ಯಾಲಯಗಳಿಗೆ ಬಿಡಲಾಗಿದೆ ಎಂದು ತನ್ನ 2018ರ ನಿಯಮಾವಳಿಗಳಿಗೆ ಸಂಬಂಧಿಸಿದಂತೆ ರಾಜ್ಯದ ವಿಶ್ವವಿದ್ಯಾಲಯಗಳಿಗೆ ಬರೆದಿರುವ ಪತ್ರದಲ್ಲಿ ಯುಜಿಸಿ ವಿವರಿಸಿದೆ ಎಂದು ಹೇಳಿರುವ ನ್ಯಾಯಾಲಯವು “ಹಳೆಯ ರಕ್ತವನ್ನು ಉಳಿಸಿಕೊಳ್ಳುವುದು ವಿವೇಕವೋ ಅಥವಾ ಹೊಸ ರಕ್ತವನ್ನು ಹರಿಸಿಕೊಳ್ಳುವುದು ವಿವೇಕವೋ ಎನ್ನುವುದು ರಾಜ್ಯದ ಕಾರ್ಯಾಂಗ ಮತ್ತು ವಿಶ್ವವಿದ್ಯಾಲಯಗಳ ವಿವೇಚನೆಗೆ ಬಿಟ್ಟಿರುವ ವಿಚಾರ” ಎಂದಿದೆ.
“ವಿಶ್ವವಿದ್ಯಾಲಯ ಅಥವಾ ಸಂಬಂಧಿತ ಕಾಲೇಜುಗಳ ಬೋಧಕರು ಯಾವ ವಯಸ್ಸಿನಲ್ಲಿ ನಿವೃತ್ತಿ ಹೊಂದಬೇಕು ಎಂಬುದು ರಾಜ್ಯದ ಆಡಳಿತಾಂಗದ ವ್ಯಾಪ್ತಿಗೆ ಸೇರಿದೆ. ಏಕೆಂದರೆ, ಬೋಧಕರ ವೇತನ, ಸೇವಾ ಸೌಲಭ್ಯಗಳನ್ನು ಕಲ್ಪಿಸುವುದು ರಾಜ್ಯ ಸರ್ಕಾರದ ಹೊಣೆಯಾಗಿರುತ್ತದೆ. ಸಾರ್ವಜನಿಕ ಸೇವಕರ ನಿವೃತ್ತಿ ವಯಸ್ಸಿನ ನಿರ್ಧಾರವು ರಾಜ್ಯ ಸರ್ಕಾರದ ಬೊಕ್ಕಸದ ಮೇಲೆ ಪರಿಣಾಮ ಉಂಟು ಮಾಡುವುದಲ್ಲದೇ, ಇತರರ ಉದ್ಯೋಗವಕಾಶಗಳ ಮೇಲೆ ಪರಿಣಾಮ ಬೀರುತ್ತದೆ” ಎಂದು ನ್ಯಾಯಾಲಯ ಹೇಳಿದೆ.
“ವಿವಿಧ ವಿಶ್ವವಿದ್ಯಾಲಯಗಳು ಮತ್ತು ಸಂಬಂಧಿತ ಕಾಲೇಜುಗಳಲ್ಲಿ ಸಾವಿರಾರು ಉದ್ಯೋಗಿಗಳಿದ್ದಾರೆ. ಅರ್ಜಿದಾರರ ಕೋರಿಕೆಯನ್ನು ಮನ್ನಿಸಿದರೆ ಎಲ್ಲಾ ಅಧಿಕಾರಿಗಳು ಹೆಚ್ಚುವರಿಯಾಗಿ ಮೂರು ವರ್ಷಗಳ ಕಾಲ ಸೇವೆಯಲ್ಲಿ ಮುಂದುವರಿಯಲಿದ್ದಾರೆ. ಇದರಿಂದ ಹೊಸ ನೇಮಕಾತಿಗೆ ಅವಕಾಶ ಇರುವುದಿಲ್ಲ. ಹೀಗಾಗಿ, ಇದು ಸಮ್ಮತವಲ್ಲ” ಎಂದು ಪೀಠವು ಅಭಿಪ್ರಾಯಪಟ್ಟಿತು.
ರಾಜ್ಯ ಸರ್ಕಾರ ಮತ್ತು ಧಾರವಾಡದ ಕೃಷಿ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದ ವಕೀಲರಾದ ಜಿ ಕೆ ಹಿರೇಗೌಡರ್ ಮತ್ತು ರಾಮಚಂದ್ರ ಮಾಲಿ ಅವರ “ಯುಜಿಸಿ ನಿಯಮಾವಳಿ ಪಾಲಿಸುವುದು ಕಡ್ಡಾಯವಲ್ಲ” ಎಂದು ವಾದಿಸಿದ್ದರು.
ಪ್ರಕರಣದ ಹಿನ್ನೆಲೆ: ಡಾ. ಮನ್ಸೂರ್ ಅವರು ನಿವೃತ್ತಿ ವಯಸ್ಸನ್ನು 62ಕ್ಕೆ ಸೀಮಿತಗೊಳಿಸಿರುವ ವಿಶ್ವವಿದ್ಯಾಲಯ ಶಾಸನಗಳು 1964ರ ಕಲಂ 30(8) ಅನ್ನು ಪ್ರಶ್ನಿಸಿದ್ದು, ಯುಜಿಸಿ 2018ರ ನಿಯಮಾವಳಿ ಅನ್ವಯ ತಮ್ಮನ್ನು 65 ವರ್ಷದವರೆಗೆ ಇದೇ ಹುದ್ದೆಯಲ್ಲಿ ಮುಂದುವರಿಸಲು ಆದೇಶಿಸಬೇಕು ಎಂದು ಮನವಿ ಮಾಡಿದ್ದರು. ಯುಜಿಸಿ ಶಾಸನವನ್ನು ರಾಜ್ಯ ಸರ್ಕಾರ ಮತ್ತು ರಾಜ್ಯದ ವಿಶ್ವವಿದ್ಯಾಲಯಗಳು ಪಾಲಿಸುವುದು ಕಡ್ಡಾಯ ಎಂದು ಮನವಿಯಲ್ಲಿ ವಾದಿಸಿದ್ದರು. ಅರ್ಜಿದಾರರನ್ನು ಹಿರಿಯ ವಕೀಲ ಲಕ್ಷ್ಮಿನಾರಾಯಣ ಪ್ರತಿನಿಧಿಸಿದ್ದರು.