BJP Leaders and Karnataka HC 
ಸುದ್ದಿಗಳು

ಬಿಜೆಪಿ ನಾಯಕರ ಕುರಿತ ದ್ವೇಷ ಭಾಷಣ ಪ್ರಕರಣ: ಪಿಐಎಲ್‌ ಹಿಂದೆ ರಾಜಕೀಯ, ಕೋಮು ಉದ್ದೇಶವಿದೆ ಎಂದ ಹೈಕೋರ್ಟ್‌; ಅರ್ಜಿ ವಜಾ

Bar & Bench

ದ್ವೇಷ ಭಾಷಣದ ಆರೋಪದ ಮೇಲೆ ರಾಜ್ಯ ಬಿಜೆಪಿಯ ಮುಖಂಡರಾದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದ ತೇಜಸ್ವಿ ಸೂರ್ಯ, ವಿಧಾನಸಭಾ ಸದಸ್ಯ ಬಸನಗೌಡ ಪಾಟೀಲ್‌ ಯತ್ನಾಳ್‌, ವಿಧಾನ ಪರಿಷತ್‌ ಸದಸ್ಯ ಸಿ ಟಿ ರವಿ ಸೇರಿದಂತೆ ಹಲವು ನಾಯಕರ ವಿರುದ್ಧ ಕ್ರಮಕೈಗೊಳ್ಳಲು ವಿಫಲರಾಗಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ಮಂಗಳವಾರ ವಜಾ ಮಾಡಿದೆ.

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಮೊಹಮ್ಮದ್‌ ಖಲೀಮುಲ್ಲಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್‌ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

“ಅರ್ಜಿಯು ತುಂಬಾ ಸಾಮಾನ್ಯವಾಗಿದ್ದು, ಇವುಗಳನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಎಂದು ಪರಿಗಣಿಸಲಾಗದು. ಸಾರ್ವಜನಿಕ ಹಿತಾಸಕ್ತಿ ಹೊರತುಪಡಿಸಿ ಬೇರೆ ಉದ್ದೇಶವನ್ನೂ ಈ ಅರ್ಜಿ ಹೊಂದಿದೆ. ರಾಜಕೀಯ ಮತ್ತು ಕೋಮು ಉದ್ದೇಶದಿಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ರೂಪದಲ್ಲಿ ಸಲ್ಲಿಕೆಯಾಗಿರುವ ಅರ್ಜಿಯನ್ನು ಪುರಸ್ಕರಿಸಲಾಗದು. ಅರ್ಜಿಗೆ ದಂಡ ವಿಧಿಸುವ ಮೂಲಕ ಅದನ್ನು ವಜಾ ಮಾಡಬೇಕು. ಆದರೆ, ಹಾಗೆ ಮಾಡಲಾಗುತ್ತಿಲ್ಲ” ಎಂದು ಪೀಠ ಆದೇಶದಲ್ಲಿ ಹೇಳಿದೆ.

ಅರ್ಜಿದಾರರ ಪರ ವಕೀಲ ಮೊಹಮ್ಮದ್‌ ಅನ್ವರ್‌ ಅವರು “ಪ್ರತಿವಾದಿಗಳಾಗಿರುವ ಬಿಜೆಪಿ ನಾಯಕರು ಮಾಡಿರುವ ದ್ವೇಷ ಭಾಷಣಗಳು ಮಾಧ್ಯಮ, ಸಾಮಾಜಿಕ ಮಾಧ್ಯಮಗಳಿಂದ ತಿಳಿದು ಬಂದಿದೆ. ನಿರ್ದಿಷ್ಟ ಕೋಮನ್ನು ಗುರಿಯಾಗಿಸಿ ಅವರು ವಾಗ್ದಾಳಿ ನಡೆಸಿದ್ದಾರೆ. ಈ ಸಂಬಂಧ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮಕೈಗೊಳ್ಳಲಾಗಿಲ್ಲ. ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ತೆಹಸೀನ್‌ ಪೂನಾವಾಲಾ ಮಾರ್ಗಸೂಚಿ ಪ್ರಕಾರ ಕೋಮು ದ್ವೇಷ ಭಾಷಣ ಮಾಡುವವರ ವಿರುದ್ಧ ಕ್ರಮಕೈಗೊಳ್ಳಬೇಕು” ಎಂದರು.

ಈ ಸಂದರ್ಭದಲ್ಲಿ ಪೀಠವು ವಕೀಲ ಅನ್ವರ್‌ ಅವರನ್ನು ಅರ್ಜಿದಾರ ಖಲೀಮುಲ್ಲಾ ಅವರ ವೃತ್ತಿ ಏನು ಎಂದು ಕೇಳಿತು. ಈ ಸಂದರ್ಭದಲ್ಲಿ ಅನ್ವರ್‌ ಅವರು ಉತ್ತರಿಸಲು ತಡವರಿಸಿದರು. ಅಲ್ಲದೆ, ಪ್ರಕರಣವನ್ನು ವಾದಿಸಬೇಕಾದ ಹಿರಿಯ ವಕೀಲರ ಗೈರಿನ ಹಿನ್ನೆಲೆಯಲ್ಲಿ ವಿಚಾರಣೆ ಮುಂದೂಡುವಂತೆ ಪರಿಪರಿಯಾಗಿ ಕೋರಿದರು. ಅಂತಿಮವಾಗಿ ಅರ್ಜಿದಾರ ಖಲೀಮುಲ್ಲಾ ಅವರು ಸಿವಿಲ್‌ ಗುತ್ತಿಗೆದಾರರಾಗಿದ್ದು, ಸಾಮಾಜಿಕ ಕಾರ್ಯಕರ್ತರೂ ಆಗಿದ್ದಾರೆ ಎಂದರು.

ಇದಕ್ಕೂ ಮುನ್ನ, ಅರ್ಜಿಯ ಮೇಲೆ ಕಣ್ಣಾಡಿಸಿದ ಪೀಠವು “ಹೈಕೋರ್ಟ್‌ನ ವೇದಿಕೆಯನ್ನು ಕ್ಷುಲ್ಲಕ ಅರ್ಜಿಗಳನ್ನು ಸಲ್ಲಿಸುವ ಮೂಲಕ ಏಕೆ ದುರ್ಬಳಕೆ ಮಾಡಿಕೊಳ್ಳುತ್ತೀರಿ? ನಿಮ್ಮ ಅರ್ಜಿದಾರರು ಏನು ಮಾಡುತಿದ್ದಾರೆ ಎಂಬುದು ನಿಮಗೆ ತಿಳಿದಿಲ್ಲ ಎಂದರೆ ಏಕೆ ಅರ್ಜಿ ಸಲ್ಲಿಸುತ್ತೀರಿ? ಸಿವಿಲ್‌ ಕಾಂಟ್ರ್ಯಾಕ್ಟರ್‌ ಇಂಥ ಅನ್‌ಸಿವಿಲ್‌ ಅರ್ಜಿ ಸಲ್ಲಿಸಿದ್ದಾರೆಯೇ?" ಎಂದು ಮೌಖಿಕವಾಗಿ ಕಿಡಿಕಾರಿತು.

ಪ್ರಕರಣದ ಹಿನ್ನೆಲೆ: ದ್ವೇಷ ಭಾಷಣ ಮಾಡಿರುವ ಬಿಜೆಪಿ ನಾಯಕರಾದ ಕೇಂದ್ರದ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ, ಸಂಸದ ತೇಜಸ್ವಿ ಸೂರ್ಯ, ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ಪರಿಷತ್‌ ಸದಸ್ಯ ಸಿ ಟಿ ರವಿ, ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ, ಮಾಜಿ ಸಂಸದ ಪ್ರತಾಪ್‌ ಸಿಂಹ, ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌, ನಮೋ ಬ್ರಿಗೇಡ್‌ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ, ಬಿಜೆಪಿಯ ಉಚ್ಚಾಟಿತ ನಾಯಕ ಕೆ ಎಸ್‌ ಈಶ್ವರಪ್ಪ ಅವರ ವಿರುದ್ಧ ತೆಹಸೀನ್‌ ಪೂನಾವಾಲಾ ಮಾರ್ಗಸೂಚಿ ಅನ್ವಯ ಕ್ರಮಕೈಗೊಳ್ಳದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದರು.

ದ್ವೇಷ ಭಾಷಣ, ದೊಂಬಿ ದೌರ್ಜನ್ಯ, ಗುಂಪುಗೂಡಿ ಕೊಲೆ ಮಾಡುವಂತಹ ಗಂಭೀರ ಪರಿಣಾಮಗಳನ್ನು ಉಂಟು ಮಾಡಲಿದೆ ಎಂಬುದರ ಸಂಬಂಧ ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸಲು ರಾಜ್ಯ ಸರ್ಕಾರಕ್ಕೆ ಆದೇಶಿಸಿಬೇಕು. ದ್ವೇಷ ಭಾಷಣ ಮಾಡುವವರ ವಿರುದ್ಧ ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಸ್ವಯಂಪ್ರೇರಿತವಾಗಿ ಪೊಲೀಸರು ಕ್ರಮಕ್ಕೆ ಮುಂದಾಗಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು. ದ್ವೇಷ ಭಾಷಣ ಮತ್ತು ದೊಂಬಿ ಕೊಲೆ ಸಂಬಂಧಿತ ದಾಖಲಾದ ಪ್ರಕರಣಗಳ ವಿಚಾರಣೆ ನಡೆಸಲು ಜಿಲ್ಲಾ ಮಟ್ಟದಲ್ಲಿ ನಿರ್ದಿಷ್ಟ ನ್ಯಾಯಾಲಯ ಗೊತ್ತು ಮಾಡುವ ಸಂಬಂಧ ಸರ್ಕಾರಕ್ಕೆ ಅಧಿಸೂಚನೆ ಹೊರಡಿಸಲು ಆದೇಶಿಸಬೇಕು. ಈ ಕುರಿತಾದ ಪ್ರಕರಣಗಳ ಸಂಜ್ಞೇ ಪರಿಗಣಿಸಿದ ಆರು ತಿಂಗಳ ಒಳಗೆ ಪೂರ್ಣಗೊಳ್ಳಬೇಕು ಎಂದು ನಿರ್ದೇಶಿಸಬೇಕು ಎಂಬುದು ಅರ್ಜಿದಾರರ ಮನವಿಯಾಗಿತ್ತು.