Kannada and Karnataka High Court 
ಸುದ್ದಿಗಳು

ಕನ್ನಡಿಗರಿಗೆ ಉದ್ಯೋಗ ಮೀಸಲು ಮಸೂದೆ ಪ್ರಶ್ನಿಸಿದ್ದ ಪಿಐಎಲ್‌ ವಜಾ ಮಾಡಿದ ಹೈಕೋರ್ಟ್‌; ದಂಡ ವಿಧಿಸಿ ಹಿಂಪಡೆದ ನ್ಯಾಯಾಲಯ

ಅರ್ಜಿ ಅವಧಿಪೂರ್ವವಾಗಿದ್ದು ಮೆರಿಟ್‌ ಮೇಲೆ ವಿಚಾರಣೆ ನಡೆಸದೆ ಮತ್ತು ಯಾವುದೇ ಅಭಿಪ್ರಾಯ ವ್ಯಕ್ತಪಡಿಸದೆ ಅರ್ಜಿ ವಜಾಗೊಳಿಸಲಾಗುತ್ತಿದೆ ಎಂದು ಪೀಠ ಆದೇಶಿಸಿತು.

Bar & Bench

ರಾಜ್ಯದಲ್ಲಿನ ಕೈಗಾರಿಕೆಗಳು, ಕಾರ್ಖಾನೆಗಳು ಹಾಗೂ ಇತರ ಸಂಸ್ಥೆಗಳ ಉದ್ಯೋಗಗಳಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ (ಕನ್ನಡಿಗರಿಗೆ) ಮೀಸಲಾತಿ ಕಲ್ಪಿಸುವ ಮಸೂದೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ಮಂಗಳವಾರ ವಜಾಗೊಳಿಸಿದೆ.

ಬೆಂಗಳೂರಿನ ಲೆಕ್ಕ ಪರಿಶೋಧಕಿ ಡಾ.ಆರ್‌ ಅಮೃತಲಕ್ಷ್ಮಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್‌ ನೇತೃತ್ವದ ವಿಭಾಗೀಯ ಪೀಠ ಇತ್ಯರ್ಥಪಡಿಸಿದೆ.

ಅರ್ಜಿದಾರರ ಪರ ವಕೀಲರು “ಕರ್ನಾಟಕ ಕೈಗಾರಿಕೆಗಳು, ಕಾರ್ಖಾನೆಗಳು ಮತ್ತು ಇತರೆ ಸಂಸ್ಥೆಗಳಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಉದ್ಯೋಗಗಳಲ್ಲಿ ಮೀಸಲು ಕಲ್ಪಿಸಿದ ವಿಧೇಯಕ ಕುರಿತು 2024ರ ಜುಲೈ 11ರಂದು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಈ ವಿಧೇಯಕಕ್ಕೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿರುವ ಬಗ್ಗೆ ಜುಲೈ 16ರಂದು ದಿನ ಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿದೆ. ಈ ವಿಧೇಯಕವನ್ನು ಪ್ರಶ್ನಿಸಿ ಜುಲೈ 19ರಂದು ಈ ಅರ್ಜಿ ಸಲ್ಲಿಸಲಾಗಿದೆ” ಎಂದು ವಿವರಿಸಿದರು.

“ಇದೇ ಮಾದರಿಯ ಕಾನೂನನ್ನು ಹರಿಯಾಣ ಸರ್ಕಾರ ರಚಿಸಿತ್ತು. ಆ ಬಗ್ಗೆ ಮೆರಿಟ್‌ ಮೇಲೆ ವಿಚಾರಣೆ ನಡೆಸಿದ್ದ ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌, ಆ ಕಾನೂನು ರದ್ದುಪಡಿಸಿದೆ. ಖಾಸಗಿ ವಲಯದ ಉದ್ಯೋಗದಲ್ಲಿ ಸ್ಥಳೀಯರಿಗೆ ಮೀಸಲು ಕಲ್ಪಿಸಲು ಸಾಧ್ಯವಿಲ್ಲ ಎಂದು ಆದೇಶದಲ್ಲಿ ಸ್ಷಷ್ಟವಾಗಿ ಹೇಳಲಾಗಿದೆ. ಕರ್ನಾಟಕದಲ್ಲಿ ಇದೇ ಆಡಳಿತ ವಿಭಾಗದ ಹುದ್ದೆಗಳಲ್ಲಿ ಶೇ.75ರಷ್ಟು ಮತ್ತು ಆಡಳಿತೇತರ ವಿಭಾಗದ ಉದ್ಯೋಗದಲ್ಲಿ ಶೇ.50ರಷ್ಟು ಮೀಸಲು ಕಲ್ಪಿಸಲು ವಿಧೇಯಕದಲ್ಲಿ ಹೇಳಲಾಗಿದೆ. ಇದು ಸ್ಥಳಿಯ ಅಭ್ಯರ್ಥಿಗಳ ಪ್ರಯೋಜನಕ್ಕೆ ವಿರುದ್ಧವಾಗಿದೆ” ಎಂದು ಆಕ್ಷೇಪಿಸಿದರು.

ಅರ್ಜಿ ಪರಿಶೀಲಿಸಿದ ಪೀಠವು “ಹರಿಯಾಣ ಸರ್ಕಾರ ರೂಪಿಸಿದ್ದ ಕಾಯಿದೆಯನ್ನು ಆಧರಿಸಿ ಅರ್ಜಿದಾರರು ಈ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಹರಿಯಾಣ ಸರ್ಕಾರವು ತನ್ನ ರಾಜ್ಯದ ಖಾಸಗಿ ವಲಯದಲ್ಲಿ ಸ್ಥಳೀಯರಿಗೆ ಮೀಸಲಾತಿ ಕಲ್ಪಿಸಿ ಶಾಸನನಾತ್ಮಕವಾದ ಕಾಯಿದೆ ರೂಪಿಸಿತ್ತು. ಕರ್ನಾಟಕದಲ್ಲಿ ಅರ್ಜಿದಾರರು ಆಕ್ಷೇಪಿಸಿರುವ ವಿಧೇಯಕವು ಕಾಯಿದೆ ರೂಪದಲ್ಲಿ ಜಾರಿಗೆ ಬಂದಿಲ್ಲ. ವಿಧೇಯಕ ಸದ್ಯ ಕರಡು ಸ್ವರೂಪದಲ್ಲಿದ್ದು, ಕಾನೂನಿನ ಮಾನ್ಯತೆ ಪಡೆದುಕೊಂಡಿಲ್ಲ. ಆದ್ದರಿಂದ ವಿಧೇಯಕವು ಕಾನೂನಿನ ಗುಣಲಕ್ಷಣ ಹೊಂದಿರುವುದಾಗಿ ನ್ಯಾಯಾಲಯ ಭಾವಿಸಲಾಗದು” ಎಂದು ಅಭಿಪ್ರಾಯಪಟ್ಟಿತು.

ಅಲ್ಲದೇ, ಅರ್ಜಿ ಅವಧಿಪೂರ್ವವಾಗಿದ್ದು ಮೆರಿಟ್‌ ಮೇಲೆ ವಿಚಾರಣೆ ನಡೆಸದೆ, ಯಾವುದೇ ಅಭಿಪ್ರಾಯ ವ್ಯಕ್ತಪಡಿಸದೆ ಅರ್ಜಿ ವಜಾಗೊಳಿಸಲಾಗುತ್ತಿದೆ ಎಂದು ಪೀಠ ಆದೇಶಿಸಿತು.

ಈ ನಡುವೆ ಸರ್ಕಾರದ ಪರ ವಕೀಲೆ ನಿಲೋಫರ್‌ ಅಕ್ಬರ್‌ ಅವರು, "ಅರ್ಜಿದಾರರು ವೃತ್ತಿಯಲ್ಲಿ ಲೆಕ್ಕಪರಿಶೋಧಕರಾಗಿದ್ದಾರೆ. ನೀತಿ ಆಯೋಗದ ಪ್ರಾದೇಶಿಕ ಮೆಂಟರ್ ಆಗಿದ್ದಾರೆ. ಇದರಿಂದ ಅರ್ಜಿಯಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಇಲ್ಲ. ಖಾಸಗಿ ಹಿತಾಸಕ್ತಿಯಿಂದ ಅರ್ಜಿ ಸಲ್ಲಿಸಿರಬಹುದು ಎಂಬ ಭಾವನೆ ವ್ಯಕ್ತವಾಗಿದೆ" ಎಂದು ಆಕ್ಷೇಪಿಸಿದರು.

ಇದರಿಂದ ಅಸಮಾಧಾನಗೊಂಡ ಪೀಠವು ಸರ್ಕಾರಿ ವಕೀಲರ ವಾದವನ್ನು ಲಘುವಾಗಿ ಪರಿಗಣಿಸಲಾಗದು ಎಂದು ಅಭಿಪ್ರಾಯಪಟ್ಟು ಅರ್ಜಿದಾರರಿಗೆ ಐದು ಸಾವಿರ ರೂಪಾಯಿ ದಂಡ ವಿಧಿಸಿತು.

ಅರ್ಜಿದಾರರ ವಕೀಲರು, ಅರ್ಜಿದಾರರು ಯಾವುದೇ ಸಂಘ-ಸಂಸ್ಥೆಯನ್ನು ಪ್ರತಿನಿಧಿಸುತ್ತಿಲ್ಲ. ವೃತ್ತಿಯಲ್ಲಿ ಲೆಕ್ಕಪರಿಶೋಧಕರಾಗಿದ್ದಾರೆ. ಸದ್ಯ ಅವರು ಗರ್ಭಿಣಿಯಾಗಿದ್ಧಾರೆ. ಯಾವುದೇ ವೈಯಕ್ತಿಕ ಹಿತಾಸಕ್ತಿ ಹಾಗೂ ದುರುದ್ದೇಶದಿಂದ ಅರ್ಜಿ ಸಲ್ಲಿಸಿಲ್ಲ. ನೀತಿ ಆಯೋಗದ ಪ್ರಾದೇಶಿಕ ಮೆಂಟರ್‌ ಸಹ ಆಗಿಲ್ಲ. ದಯವಿಟ್ಟು ದಂಡವನ್ನು ಕೈಬಿಡಬೇಕು ಎಂದು ಕೋರಿದರು.

ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯವು ನ್ಯಾಯಾಲಯದಲ್ಲಿ ಭಾವನಾತ್ಮಕ ಅಂಶಗಳಿಂದ ವಾದ ಮಂಡಿಸಬಾರದು. ನ್ಯಾಯಾಲಯವು ಕೇವಲ ಕಾನೂನಿನ ಚೌಕಟ್ಟಿನಲ್ಲಿ ಪ್ರಕರಣವನ್ನುಪರಿಗಣಿಸುತ್ತದೆ ಎಂದು ತಿಳಿಸಿ, ದಂಡ ವಿಧಿಸಿದ ಅಂಶವನ್ನು ಆದೇಶದಿಂದ ಕೈಬಿಟ್ಟಿತು.

ಪ್ರಕರಣದ ಹಿನ್ನೆಲೆ: ರಾಜ್ಯದ ಕೈಗಾರಿಕೆಗಳು–ಕಾರ್ಖಾನೆಗಳು ಮತ್ತು ಇತರೆ ಸಂಸ್ಥೆಗಳ ಉದ್ಯೋಗಗಳಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ (ಕನ್ನಡಿಗರಿಗೆ) ಮೀಸಲಾತಿ ಕಲ್ಪಿಸುವ ಮಸೂದೆ-2024ರ ಕರಡು ನಿಯಮಗಳನ್ನು ಕಾರ್ಮಿಕ ಇಲಾಖೆ 2024ರ ಜು.11ರಂದು ಹೊರಡಿಸಿತ್ತು. ಈ ನಿಯಮಗಳಿಗೆ ಜು.16ರಂದು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿತ್ತು. ಆದರೆ ಇದು ಇನ್ನೂ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸುವುದು ಬಾಕಿಯಿದೆ. ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಮಸೂದೆ ಸಂವಿಧಾನದ 19 (1) (ಡಿ), 19 1 (ಇ), ಜಿ ಮತ್ತು 14ನೇ ವಿಧಿಗಳಿಗೆ ವಿರುದ್ಧವಾಗಿದೆ. ಈ ಕಾಯ್ದೆಯನ್ನು ಜಾರಿಗೊಳಿಸುವ ಆಧಿಕಾರವನ್ನು ರಾಜ್ಯ ಶಾಸಕಾಂಗ ಹೊಂದಿಲ್ಲ ಎಂದು ಆಕ್ಷೇಪಿಸಿದ್ದ ಅರ್ಜಿದಾರರು, ಉದ್ದೇಶಿತ ಮಸೂದೆಯನ್ನು ಹಿಂಪಡೆಯುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿದ್ದರು.