High Court of Karnataka 
ಸುದ್ದಿಗಳು

ಡಿಜಿಟಲ್‌ ಗೋಪ್ಯತೆ ಬಿಟ್ಟುಕೊಡಲು ಒತ್ತಾಯ: ಆಕ್ಷೇಪಿಸಿದ್ದ ಪಿಐಎಲ್‌ ವಜಾಗೊಳಿಸಿದ ಹೈಕೋರ್ಟ್‌

“ಒಂದು ವೇಳೆ ಯಾವುದೇ ವ್ಯಕ್ತಿಯ ಗೋಪ್ಯತೆಯ ಹಕ್ಕು ಉಲ್ಲಂಘನೆಯಾಗಿದೆ ಎಂದಾದರೆ ಅದಕ್ಕೆ ಅವರು ಕಾನೂನು ಪ್ರಕಾರ ಸೂಕ್ತ ಕ್ರಮ ಜರುಗಿಸುವಂತೆ ಕೋರಲು ಸ್ವತಂತ್ರರು” ಎಂದು ಆದೇಶಿಸಿದ ಪೀಠ.

Bar & Bench

ಡಿಜಿಟಲ್‌ ಗೋಪ್ಯತೆಯನ್ನು ಬಿಟ್ಟುಕೊಡುವಂತೆ ಬಲವಂತಪಡಿಸಲಾಗುತ್ತಿದ್ದು, ಇದನ್ನು ತಡೆಹಿಡಿಯಲು ಆದೇಶಿಸಬೇಕು ಎಂದು ಕೋರಿ ನೋ ಬ್ರೋಕರ್‌ ಟೆಕ್ನಾಲಜೀಸ್‌ ಸಲ್ಯೂಷನ್ಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯ ಸಿಬ್ಬಂದಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ಮಂಗಳವಾರ ವಜಾಗೊಳಿಸಿದೆ.

ಬೆಂಗಳೂರಿನ ಎಂ ಡಿ ಇಮ್ರಾನ್‌ ರೇಜಾ ಸಲ್ಲಿಸಿದ್ದ ಪಿಐಎಲ್‌ ಅನ್ನು ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಂ ಐ ಅರುಣ್‌ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

“ಅರ್ಜಿಯನ್ನು ಕೇವಲ ಆರೋಪಗಳ ಆಧಾರದಲ್ಲಿ ಸಲ್ಲಿಸಲಾಗಿದೆ. ಇದಕ್ಕೆ ಯಾವುದೇ ನಿರ್ದಿಷ್ಟ ಉದಾಹರಣೆಗಳಿಲ್ಲ. ಸಾಮಾನ್ಯ ಸಂದರ್ಭಗಳಲ್ಲಿ ಸಂವಿಧಾನದ 226ನೇ ವಿಧಿ ಅಡಿ ಈ ನ್ಯಾಯಾಲಯ ಅರ್ಜಿಗೆ ಸಂಬಂಧಿಸಿದಂತೆ ಯಾವುದೇ ಆದೇಶ ನೀಡಲಾಗದು. ಅಷ್ಟಕ್ಕೂ ಅರ್ಜಿದಾರರು ಯಾವುದೇ ನಿರ್ದಿಷ್ಟ ಪರಿಹಾರ ಕೋರಿಲ್ಲ. ಹಾಗಾಗಿ, ಅರ್ಜಿಯನ್ನು ವಜಾಗೊಳಿಸಲಾಗುತ್ತಿದೆ” ಎಂದು ಪೀಠ ಹೇಳಿದೆ.

“ಒಂದು ವೇಳೆ ಯಾವುದೇ ವ್ಯಕ್ತಿಯ ಗೋಪ್ಯತೆಯ ಹಕ್ಕು ಉಲ್ಲಂಘನೆಯಾಗಿದೆ ಎಂದಾದರೆ ಅದಕ್ಕೆ ಅವರು ಕಾನೂನು ಪ್ರಕಾರ ಸೂಕ್ತ ಕ್ರಮ ಜರುಗಿಸುವಂತೆ ಕೋರಲು ಸ್ವತಂತ್ರರು” ಎಂದು ಪೀಠ ಆದೇಶಿಸಿತು.

ನೋ ಬ್ರೋಕರ್‌ ಟೆಕ್ನಾಲಜೀಸ್‌ ಸಲ್ಯೂಷನ್ಸ್‌ ಪ್ರೈವೈಟ್‌ ಲಿಮಿಟೆಡ್‌ ಕಂಪನಿ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಬೇಕಿದೆ. ಅದಕ್ಕೆ ಅವರು ತಮ್ಮ ಮೊಬೈಲ್‌ ಹಾಗೂ ಕಂಪ್ಯೂಟರ್‌ಗಳಲ್ಲಿ ಸಾಫ್ಟ್‌ವೇರ್‌ ಅನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕಿದೆ. ಹಾಗೆ ಅಳವಡಿಸಿಕೊಂಡ ಸಾಫ್ಟ್‌ವೇರ್‌ ವೈಯಕ್ತಿಕ ಮತ್ತು ಗೋಪ್ಯ ಮಾಹಿತಿಯನ್ನು ಪಡೆದುಕೊಳ್ಳುತ್ತದೆ. ಇದು ಗೋಪ್ಯತೆಯ ಹಕ್ಕಿನ ಉಲ್ಲಂಘನೆ. ಆದ್ದರಿಂದ, ಕಂಪನಿ ವಿರುದ್ಧ ಕ್ರಿಮಿನಲ್‌ ವಿಶ್ವಾಸದ್ರೋಹ ಆರೋಪದಡಿ ಕ್ರಮ ಕೈಗೊಳ್ಳಬೇಕು ಎಂದು ಅರ್ಜಿದಾರರು ಕೋರಿದ್ದರು.