High Court of Karnataka 
ಸುದ್ದಿಗಳು

ಡಿ ಎಂ ನಂಜುಂಡಪ್ಪ ವರದಿ ಶಿಫಾರಸ್ಸು ಜಾರಿಗೆ ನಿರ್ದೇಶನ ಕೋರಿದ್ದ ಪಿಐಎಲ್‌ ವಜಾ ಮಾಡಿದ ಹೈಕೋರ್ಟ್‌

2014ರಲ್ಲಿಯೂ ಇದೇ ಮಾದರಿಯ ಅರ್ಜಿ ಸಲ್ಲಿಸಿ ಹೈಕೋರ್ಟ್‌ನಿಂದ ನಿರ್ದೇಶನ ಪಡೆಯಲಾಗಿದೆ. ಹೀಗಿರುವಾಗ ಮತ್ತೆ ಇದೇ ಮಾದರಿಯ ಅರ್ಜಿ ಸಲ್ಲಿಸಿರುವುದು ನಿಷ್ಪ್ರಯೋಜಕ ಎಂದಿರುವ ನ್ಯಾಯಾಲಯ.

Bar & Bench

ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಡಿ ಎಂ ನಂಜುಂಡಪ್ಪ ವರದಿಯ ಶಿಫಾರಸ್ಸುಗಳನ್ನು ಜಾರಿಗೊಳಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಲಾದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ.

ಬೀದರ್‌ನ ಸಾಮಾಜಿಕ ಕಾರ್ಯಕರ್ತ ಗುರುನಾಥ ವಡ್ಡೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್‌ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸರ್ಕಾರಿ ವಕೀಲರು ಡಿ ಎಂ ನಂಜುಂಡಪ್ಪ ವರದಿಯ ಶಿಫಾರಸ್ಸುಗಳು ಜಾರಿಯಾಗಿವೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಮಾಹಿತಿ ನೀಡಲು ಈ ಹಿಂದೆ ಹೈಕೋರ್ಟ್‌ ಸರ್ಕಾರಕ್ಕೆ ಸೂಚಿಸಿತ್ತು. ನಂಜುಂಡಪ್ಪ ವರದಿಯ ಶಿಫಾರಸ್ಸುಗಳನ್ನು 2007-08ನೇ ಸಾಲಿನಿಂದಲೇ ಅನುಷ್ಠಾನಕ್ಕೆ ತರಲಾಗಿದೆ ಎಂದು ವಿವರಿಸಿದರು.

ಇದಕ್ಕೆ ಪೀಠವು ರಾಜ್ಯ ಸರ್ಕಾರದ ಹೇಳಿಕೆ ಗಮನಿಸಿದರೆ 2007ರಿಂದಲೇ ನಂಜುಂಡಪ್ಪ ವರದಿಯ ಶಿಫಾರಸ್ಸುಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ಆದರೆ, ಅರ್ಜಿದಾರರು ವರದಿ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಲು ನಿರ್ದೇಶಿಸಬೇಕು ಎಂದು ಕೋರಿದ್ದಾರೆ. 2014ರಲ್ಲಿಯೂ ಇದೇ ಮಾದರಿಯ ಅರ್ಜಿ ಸಲ್ಲಿಸಿ ಹೈಕೋರ್ಟ್‌ನಿಂದ ನಿರ್ದೇಶನ ಪಡೆಯಲಾಗಿದೆ. ಹೀಗಿರುವಾಗ ‍ಪುನಾ ಇದೇ ಮಾದರಿಯ ಅರ್ಜಿ ಸಲ್ಲಿಸಿರುವುದು ನಿಷ್ಪ್ರಯೋಜಕ ಎಂಬ ಅಭಿಪ್ರಾಯದೊಂದಿಗೆ ಅರ್ಜಿ ವಜಾಗೊಳಿಸಿ ಆದೇಶಿಸಿತು.