ಸುದ್ದಿಗಳು

ಮಹಾತ್ಮ ಗಾಂಧಿ ಆತ್ಮಕಥೆ ಸಂಪುಟ-2 ಕುರಿತು ಬೆಳಕು ಚೆಲ್ಲಲು ರಾಹುಲ್‌, ಓಂ ಬಿರ್ಲಾಗೆ ನಿರ್ದೇಶನ ಕೋರಿದ್ದ ಪಿಐಎಲ್‌ ವಜಾ

ʼಸತ್ಯದೊಂದಿಗೆ ನನ್ನ ಪ್ರಯೋಗಗಳುʼ (ಮೈ ಎಕ್ಸ್‌ಪೆರಿಮೆಂಟ್ಸ್‌ ವಿತ್‌ ಟ್ರುತ್)‌ ಸಂಪುಟ-2 ಪುನರ್‌ ಶೋಧದ ಕೋರಿರುವ ಮನವಿ ಅಸ್ಪಷ್ಟವಾಗಿದ್ದು, ಅಂಥದ್ದಕ್ಕೆ ಯಾವುದೇ ಪರಿಹಾರವಿಲ್ಲ ಎಂದಿರುವ ನ್ಯಾಯಾಲಯ.

Bar & Bench

ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಕಣ್ಮರೆಯಾಗಿರುವ ಆತ್ಮತಥೆ ʼಸತ್ಯದೊಂದಿಗೆ ನನ್ನ ಪ್ರಯೋಗಗಳು (ಮೈ ಎಕ್ಸ್‌ಪೆರಿಮೆಂಟ್ಸ್‌ ವಿತ್‌ ಟ್ರುತ್)‌ ಸಂಪುಟ-2ʼರ ಬಗ್ಗೆ ಬೆಳಕು ಚೆಲ್ಲಲು ವಿಪಕ್ಷ ನಾಯಕ ರಾಹುಲ್‌ ಗಾಂಧಿ, ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ, ರಾಜ್ಯ ಶಿಕ್ಷಣ ಇಲಾಖೆ ಮತ್ತು ಸುಪ್ರೀಂ ಕೋರ್ಟ್‌ ಬಾರ್‌ ಅಸೋಸಿಯೇಶನ್ಸ್‌ಗೆ ನಿರ್ದೇಶನ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ಗುರುವಾರ ವಜಾಗೊಳಿಸಿದೆ.

ಜಾಗೃತ ಕರ್ನಾಟಕ, ಜಾಗೃತ ಭಾರತದ ಅಧ್ಯಕ್ಷ ಕೆ ಎನ್‌ ಮಂಜುನಾಥ್‌ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರ ವಿಭಾಗೀಯ ಪೀಠವು ವಜಾಗೊಳಿಸಿತು.

“ಅರ್ಜಿದಾರರ ಪ್ರಕಾರ ಇತಿಹಾಸದಲ್ಲಿ ಕೆಲ ಖಾಲಿ ಜಾಗಗಳಿದ್ದು, ಅದಕ್ಕೆ ಉತ್ತರ ಬಯಸಿದ್ದಾರೆ. ಈ ವಿಚಾರದಲ್ಲಿ ಯಾವುದೇ ಆದೇಶ ಮಾಡಲಾಗದು. ಇತಿಹಾಸ ವಿಷಯದಲ್ಲಿ ಸಂಶೋಧನೆ ನಡೆಸಲು ಅರ್ಜಿದಾರರು ಬಯಸಿದಲ್ಲಿ ಅದಕ್ಕೆ ಯಾವುದೇ ಅಡ್ಡಿ-ಆತಂಕಗಳಿಲ್ಲ. ʼಸತ್ಯದೊಂದಿಗೆ ನನ್ನ ಪ್ರಯೋಗಗಳು (ಮೈ ಎಕ್ಸ್‌ಪೆರಿಮೆಂಟ್ಸ್‌ ವಿತ್‌ ಟ್ರುತ್)‌ ಸಂಪುಟ-2ʼ ಪುನರ್‌ ಶೋಧ ಕೋರಿರುವ ಮನವಿ ಅಸ್ಪಷ್ಟವಾಗಿದ್ದು, ಅಂಥದ್ದಕ್ಕೆ ಯಾವುದೇ ಪರಿಹಾರವಿಲ್ಲ” ಎಂದು ನ್ಯಾಯಾಲಯ ಆದೇಶಿಸಿದೆ.

ಪಾರ್ಟಿ ಇನ್‌ ಪರ್ಸನ್‌ ಆಗಿ ಹಾಜರಾಗಿದ್ದ ಮಂಜುನಾಥ್‌ ಅವರು “ಗಾಂಧೀಜಿ ಅವರ ಆತ್ಮಕತೆಯ ಎರಡನೇ ಸಂಪುಟದಲ್ಲಿ 1926-1947 ನಡುವಿನ ಭಾರತದ ಇತಿಹಾಸ ದಾಖಲಿಸಲಾಗಿದೆ. ಈ ವಿಚಾರದ ಕುರಿತು ಜನರಿಗೆ ತಿಳಿಸಲು ಹಲವು ಪ್ರಾಧಿಕಾರಗಳಿಗೆ ಪತ್ರ ಬರೆದಿದ್ದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ” ಎಂದರು.

ಐತಿಹಾಸಿಕ ಪ್ರಶ್ನೆಗಳ ಪ್ರಸ್ತುತತೆಯನ್ನು ಪರಿಶೀಲಿಸಲು 1947ರ ಆಗಸ್ಟ್‌ 15ರಂದು ನಡೆದಿದ್ದ ಸ್ವಾತಂತ್ರ್ಯೋತ್ಸವದಲ್ಲಿ ಮಹಾತ್ಮ ಗಾಂಧಿ ಅವರು ಭಾಗವಹಿಸಿದ್ದ ಚಿತ್ರ ಒದಗಿಸಲು ನಿರ್ದೇಶಿಸಬೇಕು ಎಂದು ಅರ್ಜಿದಾರರು ಮಧ್ಯಂತರ ಪರಿಹಾರ ಕೋರಿದ್ದರು.