Renukaswamy 
ಸುದ್ದಿಗಳು

ರೇಣುಕಾಸ್ವಾಮಿ ಕೊಲೆ ಪ್ರಕರಣ: ಆರೋಪ ಮುಕ್ತಿ ಕೋರಿದ್ದ ಪ್ರದೋಷ್‌ ರಾವ್‌ ಅರ್ಜಿ ವಜಾಗೊಳಿಸಿದ ಹೈಕೋರ್ಟ್‌

ಪ್ರಾಸಿಕ್ಯೂಷನ್‌ ಬಳಿ ಅರ್ಜಿದಾರರನ್ನು ವಿಚಾರಣೆಗೆ ಒಳಪಡಿಸುವಷ್ಟು ಪ್ರಮಾಣದ ಸಾಕ್ಷ್ಯಧಾರಗಳು ಇವೆಯಲ್ಲಾ? ಹೀಗಾಗಿ, ಈ ನ್ಯಾಯಾಲಯವು ಅದಕ್ಕಿಂತಲೂ ಒಂದು ಪರ್ಸೆಂಟ್ ಕೂಡಾ ಹೆಚ್ಚು ಪರಿಶೀಲಿಸುವ ಗೋಜಿಗೆ ಹೋಗುವುದಿಲ್ಲ ಎಂದ ನ್ಯಾಯಾಲಯ.

Bar & Bench

“ನಿಮ್ಮ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿರುವಾಗ ಆರೋಪಗಳಿಂದ ಕೈಬಿಡಬೇಕು ಎಂದು ಹೇಗೆ ತಾನೇ ಕೋರುತ್ತೀರಿ” ಎಂದು ಕರ್ನಾಟಕ ಹೈಕೋರ್ಟ್‌ ಮಂಗಳವಾರ ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಗೆ ಪ್ರಶ್ನಿಸಿದೆ.

ಕೊಲೆ ಮತ್ತು ಕೊಲೆ ಅಪರಾಧದ ಜಂಟಿ ಹೊಣೆಗಾರಿಕೆ ಆರೋಪಗಳಿಂದ ಕೈಬಿಡಲು ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸಬೇಕು ಎಂದು ಕೋರಿ ರೇಣುಕಾಸ್ವಾಮಿ ಕೊಲೆ ಪ್ರಕರಣದ14ನೇ ಆರೋಪಿ ಪ್ರದೂಷ್ ಎಸ್‌.ರಾವ್ ಅಲಿಯಾಸ್ ಪ್ರದೂಷ್‌ ಸಲ್ಲಿಸಿದ್ದ ಕ್ರಿಮಿನಲ್‌ ಪುನರ್‌ ಪರಿಶೀಲನಾ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌ ವಿಶ್ವಜಿತ್‌ ಶೆಟ್ಟಿ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಪ್ರದೂಷ್‌ ಪರ ಹಿರಿಯ ವಕೀಲ ಕೆ ದಿವಾಕರ್‌ ಅವರು “ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜನವರಿ ತಿಂಗಳಿಂದಲೇ ಸಂಚು ರೂಪಿಸಲಾಗಿತ್ತು ಎಂದು ಆರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ. ಆ ದಿನಗಳಲ್ಲಿ ಅರ್ಜಿದಾರರದ್ದು ಯಾವುದೇ ಪಾತ್ರವಿಲ್ಲ. ಘಟನೆಯ ಅಂತಿಮ ಭಾಗದಲ್ಲಿ ಅವರು ಇದ್ದರು ಮತ್ತು  ₹30 ಲಕ್ಷ ಮೊತ್ತವನ್ನು ದರ್ಶನ್‌ ಕಡೆಯಿಂದ ಪಡೆದು ಬೇರೆಯವರಿಗೆ ವರ್ಗಾಯಿಸಿದ್ದರು ಎಂದು ಆರೋಪಿಸಲಾಗಿದೆ. ಹೀಗಾಗಿ, ಅರ್ಜಿದಾರರ ವಿರುದ್ಧದ ಆರೋಪಗಳನ್ನು ಪೂರ್ಣವಾಗಿ ಕೈಬಿಡದಿದ್ದರೂ ಅಲ್ಪಮಟ್ಟಿಗೆ ಸಡಿಲಿಸಬೇಕು” ಎಂದು ಕೋರಿದರು.

ಇದಕ್ಕೆ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನ ಕುಮಾರ್ ಅವರು “ಪ್ರದೂಷ್‌ ಇತರೆ ಆರೋಪಿಗಳಿಗೆ ಪ್ರಚೋದನೆ ನೀಡಿದ್ದಾರೆ. ಕೊಲೆಯಲ್ಲಿ ಭಾಗಿಯಾಗಿರುವುದಕ್ಕೆ ಸಾಕಷ್ಟು ಪುರಾವೆಗಳಿವೆ. ಸಾಕ್ಷಿ ವಿಚಾರಣೆಯಲ್ಲಿ ಅರ್ಜಿದಾರರ ಪಾತ್ರದ ಬಗ್ಗೆ ಸಿಆರ್‌ಪಿಸಿ ಸೆಕ್ಷನ್‌ 164ರ ಅಡಿಯಲ್ಲಿ ನೀಡಲಾದ ಹೇಳಿಕೆಯಲ್ಲಿ ಇದನ್ನೆಲ್ಲಾ ವಿವರಿಸಲಾಗಿದೆ. ಅಷ್ಟಕ್ಕೂ, ಸುಪ್ರೀಂ ಕೋರ್ಟ್‌ ಇವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ” ಎಂದು ತಿಳಿಸಿದರು.

ಇದಕ್ಕೆ ಪೀಠವು “ಸುಪ್ರೀಂ ಕೋರ್ಟ್‌ ನಿಮ್ಮ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆಯಲ್ಲವೇ? ಪ್ರಾಸಿಕ್ಯೂಷನ್‌ ಬಳಿ ಅರ್ಜಿದಾರರನ್ನು ವಿಚಾರಣೆಗೆ ಒಳಪಡಿಸುವಷ್ಟು ಪ್ರಮಾಣದ ಸಾಕ್ಷ್ಯಧಾರಗಳು ಇವೆಯಲ್ಲಾ? ಹೀಗಾಗಿ, ಈ ನ್ಯಾಯಾಲಯವು ಅದಕ್ಕಿಂತಲೂ ಒಂದು ಪರ್ಸೆಂಟ್ ಕೂಡಾ ಹೆಚ್ಚು ಪರಿಶೀಲಿಸುವ ಗೋಜಿಗೆ ಹೋಗುವುದಿಲ್ಲ. ಆದ್ದರಿಂದ, ಅರ್ಜಿ ವಾಪಸು ಪಡೆಯುವುದು ಒಳಿತು. ಇಲ್ಲವೇ ವಜಾಗೊಳಿಸಲಾವುದು” ಎಂದು ಅರ್ಜಿದಾರರ ಪರ ವಕೀಲರಿಗೆ ಸೂಚಿಸಿತು.

ಈ ಹಿನ್ನೆಲೆಯಲ್ಲಿ ಅರ್ಜಿದಾರರ ಪರ ವಕೀಲರು ಅರ್ಜಿ ವಾಪಸು ಪಡೆಯಲು ಸಮ್ಮತಿ ಸೂಚಿಸಿದರು. ಇದನ್ನು ಮಾನ್ಯ ಮಾಡಿದ ಪೀಠವು ಅರ್ಜಿದಾರರಿಗೆ ಸೂಕ್ತ ಕಾನೂನಿನ ಆಧಾರದಡಿ ಮುಂದುವರಿಯಲು ಸ್ವಾತಂತ್ರ್ಯ ನೀಡಿ ಅರ್ಜಿ ವಿಲೇವಾರಿ ಮಾಡಿತು.