ಬಿಡದಿ ಟೌನ್‌ಶಿಪ್ ಅಭಿವೃದ್ಧಿ ಹಿನ್ನೆಲೆಯಲ್ಲಿ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್ ಯೋಜನೆಗಾಗಿ ಸುಮಾರು 516 ಎಕರೆ ಫಲವತ್ತಾದ ಕೃಷಿ ಭೂಮಿಯ ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಹೊರಡಿಸಿರುವ ಅಧಿಸೂಚನೆ ರದ್ದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಕಂಪ್ಲಾಪುರ ಗ್ರಾಮದ ವಕೀಲ ಕೆ ಬಿ ರಾಜೇಶ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಕೆ ಎಸ್ ಹೇಮಲೇಖಾ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರದ ಕಾಯಿದೆ-1987ಎ ಸೆಕ್ಷನ್ 17ರ ಅಡಿಯಲ್ಲಿ ಭೂ ಸ್ವಾಧೀನಕ್ಕೆ ಸರ್ಕಾದ ಹೊರಡಿಸಿದ ಅಧಿಸೂಚನೆಯನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ. ವಿಚಾರಣೆ ವೇಳೆ ಅಭಿವೃದ್ಧಿ ಯೋಜನೆಯಡಿ ಭೂ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. ಕೇಂದ್ರ ಸರ್ಕಾರದ ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್ವಸತಿಯಲ್ಲಿ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕತೆಯ ಹಕ್ಕು ಕಾಯ್ದೆ-2013ರ ನೀಡಬೇಕಾದ ಪ್ರಮಾಣದಲ್ಲಿ ರೈತರಿಗೆ ಪರಿಹಾರವನ್ನು ನಿಗದಿಪಡಿಸಿಲ್ಲ ಅಂಶ ಆಧರಿಸಿಯಷ್ಟೇ ವಾದಿಸಿದ್ದಾರೆ. ಆದರೆ, ಭೂಸ್ವಾಧೀನ ಅಧಿಸೂಚನೆಯು ಯಾವ ಕಾಯಿದೆ ಹಾಗೂ ಕಾನೂನು ಉಲ್ಲಂಘಿಸುತ್ತದೆ ಎಂದು ತಿಳಿಸಿಲ್ಲ ಎಂದು ಅಭಿಪ್ರಾಯಪಟ್ಟಿರುವ ಪೀಠ ಅರ್ಜಿ ವಜಾಗೊಳಿಸಿದೆ.
ಅಲ್ಲದೆ, ಅಧಿಸೂಚನೆ ಮೆರಿಟ್ ಬಗ್ಗೆ ಯಾವುದೇ ಅಭಿಪ್ರಾಯ ವ್ಯಕ್ತಪಡಿಸುತ್ತಿಲ್ಲ. ಅಧಿಸೂಚನೆಗೆ ಸಂಬಂಧಿಸಿದ ವಿಷಯಗಳನ್ನು ತಡೆಹಿಡಿದಿಲ್ಲ ಎಂದು ಇದೇ ವೇಳೆ ಪೀಠ ಸ್ಪಷ್ಟಪಡಿಸಿದೆ.
ಇದಕ್ಕೂ ಮುನ್ನ, ವಿಚಾರಣೆ ವೇಳೆ ಅರ್ಜಿದಾರರು ವಾದ ಮಂಡಿಸಿ, ಅಭಿವೃದ್ದಿ ಯೋಜನೆಗಾಗಿ ಸುಮಾರು 4,900 ಅಧಿಕ ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಭೂ ಸ್ವಾಧೀನಕ್ಕೆ ರೈತರು ವಿರೋಧ ವ್ಯಕ್ತಪಡಿಸುತ್ತಾರೆ. ಕಳೆದ 500 ದಿನಗಳಿಂದ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪರಿಣಾಮ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುತ್ತಿದೆ ಎಂದು ಅರ್ಜಿದಾರ ವಾದಿಸಿದ್ದರು.
ಹಾಗೆಯೇ, ಭೂ ಸ್ವಾಧೀನ ಅಧಿಸೂಚನೆ ಹೊರಡಿಸುವ ಮುನ್ನ ಸಾಮಾಜಿಕ ಮತ್ತು ಪರಿಸರ ಮೇಲಿನ ಪರಿಣಾಮ ಅಧ್ಯಯನ ನಡೆಸಿಲ್ಲ. ಈ ಯೋಜನೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ಇಲ್ಲ. ರಿಯಲ್ ಎಸ್ಟೇಟ್ ಯೋಜನೆ ಇದಾಗಿದೆ. ಪರಿಹಾರವು ಪ್ರಮಾಣವು ಕೇಂದ್ರ ಸರ್ಕಾರದ ಯೋಜನೆಗೆ ಅನುಗುಣವಾಗಿಲ್ಲ. ಪುನರ್ವಸತಿಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿದಾರರು ವಾದ ಮಂಡಿಸಿದರು.
ಪ್ರಕರಣದ ಹಿನ್ನೆಲೆ: ಬಿಡದಿ ತಾಲ್ಲೂಕಿನ ಕೆಂಪಯ್ಯನ ಪಾಳ್ಯದ 384.22, ಮಂಡಲಹಳ್ಳಿಯ 71.13 ಮತ್ತು ವಡೇರಹಳ್ಳಿಯ 63.10 ಎಕರೆ ಸೇರಿದಂತೆ ಒಟ್ಟು 519 ಎಕರೆ ಕೃಷಿ ಜಮೀನನ್ನು ಭೂಸ್ವಾಧೀನಕ್ಕೆ ನಗರಾಭಿವೃದ್ಧಿ ಇಲಾಖೆ ಹೊರಡಿಸಿರುವ ಅಧಿಸೂಚನೆ ಹೊರಡಿಸಿದೆ. ಭೂಸ್ವಾಧೀನ ಕಾಯ್ದೆಯ ಸಾಮಾಜಿಕ ಪರಿಣಾಮಗಳ ಮೌಲ್ಯಮಾಪನಮಾಡದೆ ಜಮೀನು ಸ್ವಾಧೀನಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಆದ್ದರಿಂದ ಬಿಡದಿಯ ಬಳಿ 516 ಎಕರೆ ಜಮೀನು ಭೂ ಸ್ವಾಧೀನಪಡಿಸಿಕೊಳ್ಳುವ ಸಂಬಂಧ 2026ರ ಜೂನ್ 13ರಂದು ಹೊರಡಿಸಿರುವ ಅಂತಿಮ ಅಧಿಸೂಚನೆ ರದ್ದುಪಡಿಸಬೇಕು. ಕೃಷಿ ಭೂಮಿಯನ್ನು ನಾಶಪಡಿಸುವ ಬದಲು, ಉತ್ತರ ಕರ್ನಾಟಕದ ಬರಪೀಡಿತ ಅಥವಾ ಕೈಗಾರಿಕಾ ಭೂ ಬ್ಯಾಂಕ್ ಗಳಿರುವ ಹಿಂದುಳಿದ ಪ್ರದೇಶಗಳಿಗೆ ಈ ಯೋಜನೆಯನ್ನು ವಿಕೇಂದ್ರೀಕರಿಸಲು ತಜ್ಞರ ಸಮಿತಿ ರಚಿಸಬೇಕು. ಅಲ್ಲಿಯವರೆಗೆ ಈ ಯೋಜನೆಗೆ ಸಂಬಂಧಿಸಿದ ಎಲ್ಲಾ ಭೂಸ್ವಾಧೀನ ಮತ್ತು ಟೆಂಡರ್ ಪ್ರಕ್ರಿಯೆಗಳಿಗೆ ತಕ್ಷಣ ತಡೆಯಾಜ್ಞೆ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.