ಸೆಪ್ಟೆಂಬರ್ 19ರಂದು ತೆರೆ ಕಾಣಲಿರುವ ಹಿಂದಿಯ ʼಜಾಲಿ ಎಲ್‌ಎಲ್‌ಬಿ 3ʼ ಸಿನಿಮಾ ಬಿಡುಗಡೆಗೆ ನಿರ್ಬಂಧ ವಿಧಿಸುವಂತೆ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾಗೊಳಿಸಿರುವ ಕರ್ನಾಟಕ ಹೈಕೋರ್ಟ್, ಅರ್ಜಿದಾರರಿಗೆ ಗುರುವಾರ ₹50 ಸಾವಿರ ದಂಡ ವಿಧಿಸಿದೆ.
ಬೆಂಗಳೂರಿನ ಸಯೀದಾ ನಿಲೋಫರ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರ ವಿಭಾಗೀಯ ಪೀಠ ವಜಾಗೊಳಿಸಿದೆ. ನ್ಯಾಯಾಂಗದ ಸಮಯವನ್ನು ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ ಅರ್ಜಿದಾರೆಗೆ ನ್ಯಾಯಾಲಯ ದಂಡ ವಿಧಿಸಿದೆ.
ದಂಡದ ಮೊತ್ತವನ್ನು ರಿಜಿಸ್ಟ್ರಿಯಲ್ಲಿ ಠೇವಣಿ ಇಡಬೇಕು. ಇಲ್ಲವಾದಲ್ಲಿ ಅಕ್ಟೋಬರ್ 4ರಂದು ಪ್ರಕರಣವನ್ನು ಅರ್ಜಿದಾರೆಯ ವಿರುದ್ಧ ಕ್ರಮಕ್ಕೆ ಪಟ್ಟಿ ಮಾಡುವಂತೆ ಪೀಠ ಆದೇಶಿಸಿದೆ.
ಅರ್ಜಿದಾರೆಯ ಪರ ವಕೀಲರು “ಚಿತ್ರದ ಟೀಸರ್ ಈಚೆಗೆ ಬಿಡುಗಡೆಯಾಗಿದ್ದು, ಅದರಲ್ಲಿ ಕೆಲವು ಸಂಭಾಷಣೆಗಳು ನ್ಯಾಯಾಂಗ ವ್ಯವಸ್ಥೆ, ನ್ಯಾಯಮೂರ್ತಿಗಳು, ವಕೀಲರ ಕುರಿತು ಮಾನಹಾನಿಕಾರವಾಗಿವೆ” ಎಂದರು. ಇದಕ್ಕೆ ಪೀಠವು “ಇದು ಹಾಸ್ಯದ ಚಿತ್ರವಲ್ಲವೇ, ಪ್ರೇಕ್ಷಕರ ಹಾಸ್ಯ ಪ್ರಜ್ಞೆಯನ್ನು ಕೆರಳಿಸುವ ಉದ್ದೇಶ ಹೊಂದಿರಬಹುದು, ಇದು ನಿಮಗೆ ಮತ್ತು ನಮಗೆ ಏನನ್ನೂ ಮಾಡದಿರಬಹುದು. ಇದರರ್ಥ ಅದನ್ನು ಮೊಟಕುಗೊಳಿಸಬೇಕು ಎಂದಲ್ಲ” ಎಂದಿತು.
“ನ್ಯಾಯಾಲಯದ ಕಲಾಪವನ್ನು ಚಿತ್ರದಲ್ಲಿ ಬಿಂಬಿಸಿ ಪ್ರೇಕ್ಷಕರಲ್ಲಿ ನಗೆ ಉಕ್ಕಿಸುವುದು ಸಾಮಾನ್ಯವಾಗಿದ್ದು, ಕಲಾಪದ ಪ್ರದರ್ಶನವು ಅರ್ಜಿದಾರೆ ಅಥವಾ ನ್ಯಾಯಾಲಯದ ಹಾಸ್ಯಪ್ರಜ್ಞೆ ಕೆರಳಿಸದಿರಬಹುದು. ಇದು ಸೃಜನಶೀಲತೆಯನ್ನು ಹತ್ತಿಕ್ಕಲು ಅಥವಾ ಅದಕ್ಕೆ ಸೆನ್ಸಾರ್ ವಿಧಿಸಲು ಆಧಾರವಾಗದು” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
ಮುಂದುವರಿದು, “ಇಂಥ ಪಿಐಎಲ್‌ಗಳು ನ್ಯಾಯಾಂಗದ ಸಮಯ ಪೋಲು ಮಾಡಲಿದ್ದು, ಅದಕ್ಕಾಗಿಯೇ ಅರ್ಜಿ ಸಲ್ಲಿಕೆ ಮಾಡಿದಂತಿದೆ. ಹೀಗಾಗಿ, ಅರ್ಜಿ ವಜಾಗೊಳಿಸುತ್ತಿದ್ದು, ಅರ್ಜಿದಾರೆಗೆ 50,000 ದಂಡ ವಿಧಿಸಲಾಗಿದೆ. ಇದನ್ನು ಅವರು ನ್ಯಾಯಾಲಯದ ರಿಜಿಸ್ಟ್ರಿಯಲ್ಲಿ ಠೇವಣಿ ಇಡಬೇಕು. ಠೇವಣಿ ಇಡದಿದ್ದಲ್ಲಿ ಕಠಿಣ ಕ್ರಮಕ್ಕಾಗಿ ಅರ್ಜಿಯನ್ನು ಅಕ್ಟೋಬರ್ 4ರಂದು ಮತ್ತೆ ವಿಚಾರಣೆಗೆ ಪಟ್ಟಿ ಮಾಡಬೇಕು” ಎಂದು ನಿರ್ದೇಶಿಸಿದೆ.
ಸಿನಿಮಾದಲ್ಲಿ ತೋರಿಸಲಾಗಿರುವ ಸಂಭಾಷಣೆಯು ಮಾನಹಾನಿಕಾರವಾಗಿದ್ದು, ಭಾರತೀಯ ನ್ಯಾಯ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯನ್ನು ಉಲ್ಲಂಘಿಸಲಿವೆ. ಹೀಗಾಗಿ, ಕಲಾವಿದರು ಮತ್ತು ಚಿತ್ರ ತಯಾರಕರು ರಾಷ್ಟ್ರಮಟ್ಟದಲ್ಲಿ ಪ್ರಸರಣ ಹೊಂದಿರುವ ಪತ್ರಿಕೆಗಳಲ್ಲಿ ಬೇಷರತ್ ಕ್ಷಮೆ ಕೋರಲು ನಿರ್ದೇಶಿಸಬೇಕು. ಪ್ರಕರಣದ ತನಿಖೆ ನಡೆಸಿ, ನಟರು, ಸಿನಿಮಾ ತಯಾರಕರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಅಡಿ ಕ್ರಮಕೈಗೊಳ್ಳಲು ಸಂಬಂಧಿತ ಪ್ರಾಧಿಕಾರಗಳಿಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದರು.