Lawyers 
ಸುದ್ದಿಗಳು

ಬಿಸಿಲ ಝಳ: ಮಾರ್ಚ್‌ 15ರಿಂದ ಮೇ 31ರವರೆಗೆ ವಕೀಲರಿಗೆ ಕಪ್ಪು ಕೋಟ್‌ ಧರಿಸುವುದರಿಂದ ವಿನಾಯಿತಿ ನೀಡಿದ ಹೈಕೋರ್ಟ್‌

ವಿನಾಯಿತಿಯು ಬಿಳಿ ಶರ್ಟ್‌ ಮತ್ತು ನೆಕ್‌ ಬ್ಯಾಂಡ್‌ ಧರಿಸುವುದಕ್ಕೆ ಅನ್ವಯಿಸುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿಗಳ ಆದೇಶದ ಮರೆಗೆ ರಿಜಿಸ್ಟ್ರಾರ್‌ ಜನರಲ್‌ ಸುತ್ತೋಲೆಯಲ್ಲಿ ವಿವರಿಸಿದ್ದಾರೆ.

Bar & Bench

ಬೇಸಿಗೆ ಕಾಲ ಮುಗಿಯುವವರೆಗೆ ಮಾರ್ಚ್‌ 15ರಿಂದ ಮೇ 31ರವರೆಗೆ ರಾಜ್ಯದ ಜಿಲ್ಲಾ ಮತ್ತು ವಿಚಾರಣಾಧೀನ ನ್ಯಾಯಾಲಯದಲ್ಲಿ ಕಲಾಪಕ್ಕೆ ಹಾಜರಾಗುವ ವೇಳೆ ವಕೀಲರು ಕಪ್ಪು ಕೋಟ್‌ ಧರಿಸುವುದರಿಂದ ವಿನಾಯಿತಿ ನೀಡಿ ಕರ್ನಾಟಕ ಹೈಕೋರ್ಟ್ ಬುಧವಾರ ಅಧಿಸೂಚನೆ ಹೊರಡಿಸಿದೆ.

ಬೇಸಿಗೆ ಹಿನ್ನೆಲೆಯಲ್ಲಿ ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯದಲ್ಲಿ ಕಪ್ಪು ಕೋಟ್ ಧರಿಸುವುದರಿಂದ ವಕೀಲರಿಗೆ ವಿನಾಯಿತಿ ನೀಡುವಂತೆ ಕೋರಿ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರು ಮತ್ತು ಕರ್ನಾಟಕ ವಕೀಲರ ಪರಿಷತ್‌ ಅಧ್ಯಕ್ಷರು ಕ್ರಮವಾಗಿ ಮಾರ್ಚ್‌ 3 ಮತ್ತು 4ರಂದು ಹೈಕೋರ್ಟ್‌ಗೆ ಮನವಿ ಪತ್ರ ಸಲ್ಲಿಸಿದ್ದರು.

ಈ ಮನವಿ ಆಧರಿಸಿ ವಿನಾಯಿತಿನೀಡಲು ಹೈಕೋರ್ಟ್‌ ಪೂರ್ಣ ಪೀಠವು ಮಾರ್ಚ್‌ 7ರಂದು ನಿರ್ಣಯಗೊಂಡಿದೆ. ಅದರಂತೆ ಮಾರ್ಚ್‌ 15ರಿಂದ ಮೇ 31ರವರೆಗೆ ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಯಗಳ ಕಲಾಪಕ್ಕೆ ಹಾಜರಾಗುವ ವೇಳೆ ವಕೀಲರು ಕಪ್ಪು ಕೋಟ್‌ ಧರಿಸಲು ವಿನಾಯಿತಿ ನೀಡಲಾಗಿದೆ. ಆದರೆ, ಈ ವಿನಾಯಿತಿಯು ಬಿಳಿ ಶರ್ಟ್‌ ಮತ್ತು ನೆಕ್‌ ಬ್ಯಾಂಡ್‌ ಧರಿಸುವುದಕ್ಕೆ ಅನ್ವಯಿಸುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿಗಳ ಆದೇಶದ ಮೇರೆಗೆ ರಿಜಿಸ್ಟ್ರಾರ್‌ ಜನರಲ್‌ ಸುತ್ತೋಲೆಯಲ್ಲಿ ವಿವರಿಸಿದ್ದಾರೆ.

ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳಲ್ಲಿ ಹವಾನಿಯಂತ್ರಿತ ವ್ಯವಸ್ಥೆ ಇಲ್ಲ. ಈಗಾಗಲೇ  ಬಿಸಿಲಿನ ಪ್ರಮಾಣ ದಿನೇ ದಿನೇ ಏರುತ್ತಿದೆ. ಈ ಸಂದರ್ಭದಲ್ಲಿ ಬಿಳಿಯ ಬಟ್ಟೆಯ ಮೇಲೆ ಕಪ್ಪು ಕೋಟ್‌ ಮತ್ತು ಬ್ಯಾಂಡ್‌ ಹಾಕುವುದು ಕಷ್ಟವಾಗಿದೆ. ಬಿಸಿಲ ಝಳದಿಂದ ತಪ್ಪಿಸಿಕೊಳ್ಳಲು ಕಪ್ಪು ಕೋಟ್‌ ಧರಿಸುವುದರಿಂದ ಬೇಸಿಗೆ ರಜಾಕಾಲ ಮುಗಿದು ನ್ಯಾಯಾಲಯಗಳು ಕೆಲಸ ಪುನಾರಂಭಿಸುವವರೆಗೆ ಮಾರ್ಚ್‌ 15ರಿಂದ ಅನ್ವಯವಾಗುವಂತೆ ವಿನಾಯಿತಿ ನೀಡಬೇಕು ಎಂದು ವಕೀಲರ ಸಂಘ ಕೋರಿತ್ತು.