BBMP
BBMP 
ಸುದ್ದಿಗಳು

ಪ್ರಗತಿ ಕಾಣದ ರಾಜಕಾಲುವೆ ಒತ್ತುವರಿ ತೆರವು: ಮುಖ್ಯ ಎಂಜಿನಿಯರ್‌ ವೇತನ ತಡೆ ಹಿಡಿಯುವ ಎಚ್ಚರಿಕೆ ನೀಡಿದ ಹೈಕೋರ್ಟ್

Bar & Bench

ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ ಮಾಡಿರುವುದನ್ನು ಗಣನೀಯ ಪ್ರಮಾಣದಲ್ಲಿ ತೆರವು ಮಾಡದಿದ್ದರೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಎಂಜಿನಿಯರ್‌ (ರಾಜಕಾಲುವೆ) ವಿರುದ್ಧ ಕಠಿಣ ಆದೇಶ ಮಾಡಲಾಗುವುದು ಎಂದು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಎಚ್ಚರಿಕೆ ನೀಡಿದೆ.

ಬೆಂಗಳೂರು ವ್ಯಾಪ್ತಿಯಲ್ಲಿನ ರಸ್ತೆಗಳ ಗುಂಡಿ ಮುಚ್ಚುವುದಕ್ಕೆ ಸಂಬಂಧಿಸಿದಂತೆ ವಿಜಯನ್ ಮೆನನ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಗಳ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ಮತ್ತು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು. ರಾಜಕಾಲುವೆ ತೆರವು ವಿಚಾರದಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸದಿದ್ದರೆ ಮುಖ್ಯ ಎಂಜಿನಿಯರ್‌ ಅವರ ವೇತನ ತಡೆ ಹಿಡಿಯಲಾಗುವುದು ಎಂದು ಪೀಠವು ಮೌಖಿಕವಾಗಿ ಹೇಳಿತು.

ಕಳೆದ ವಿಚಾರಣೆಯಿಂದ ಅಂದರೆ ಸೆಪ್ಟೆಂಬರ್‌ 19ರಿಂದ ಇಲ್ಲಿಯ ತನಕ ರಾಜಕಾಲುವೆಯನ್ನು ಒತ್ತುವರಿ ಮಾಡಿದ್ದ 10 ಪ್ರದೇಶಗಳಲ್ಲಿ ತೆರವು ಮಾಡಲಾಗಿದೆ. ಉಳಿದಂತೆ 592 ಒತ್ತುವರಿಗಳನ್ನು ಇನ್ನಷ್ಟೇ ತೆರವು ಮಾಡಬೇಕಿದೆ ಎಂದು ಉಲ್ಲೇಖಿಸಿರುವ ಸ್ಥಿತಿಗತಿ ವರದಿಯನ್ನು ಬಿಬಿಎಂಪಿಯು ಪೀಠಕ್ಕೆ ಸಲ್ಲಿಸಿತು.

“602 ರಾಜಕಾಲುವೆ ಒತ್ತುವರಿಗಳ ಪೈಕಿ ಕೇವಲ 10 ಅನ್ನು ತೆರವುಗೊಳಿಸಲಾಗಿದೆ. ವರದಿಯನ್ನು ಪರಿಶೀಲಿಸಿದಾಗ ರಾಜಕಾಲುವೆ ತೆರವಿಗೆ ಸಂಬಂಧಿಸಿದಂತೆ ನಮಗೆ ಸಮಾಧಾನಕರ ಪ್ರಗತಿ ಕಾಣುತ್ತಿಲ್ಲ. ಬಿಬಿಎಂಪಿಯಲ್ಲಿ ರಾಜಕಾಲುವೆ ಉಸ್ತುವಾರಿ ನಿಭಾಯಿಸುವ ಮುಖ್ಯ ಎಂಜಿನಿಯರ್‌ ಎಂ ಲೋಕೇಶ್‌ ಅವರು ನ್ಯಾಯಾಲಯದ ಮುಂದೆ ಹಾಜರಾಗಿದ್ದು, ಮುಂದಿನ ವಿಚಾರಣೆ ವೇಳೆಗೆ ಗಣನೀಯ ಪ್ರಗತಿ ಆಗಿರುವುದನ್ನು ಖಾತರಿಪಡಿಸಬೇಕು. ಇಲ್ಲವಾದಲ್ಲಿ ಕಟ್ಟುನಿಟ್ಟಿನ ಆದೇಶ ಮಾಡಲಾಗುವುದು” ಎಂದು ಪೀಠವು ಆದೇಶದಲ್ಲಿ ಎಚ್ಚರಿಸಿದೆ. ಅಲ್ಲದೇ, ವಿಚಾರಣೆಯನ್ನು ಅಕ್ಟೋಬರ್‌ 27ಕ್ಕೆ ಮುಂದೂಡಿದೆ.

ಕಳೆದ ವಿಚಾರಣೆಯಿಂದ ಇಲ್ಲಿಯವರೆಗೆ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿರುವ 221 ಗುಂಡಿಗಳನ್ನು ಹಾಟ್‌ಮಿಕ್ಸ್‌ ಬಳಸಿ ಮುಚ್ಚಲಾಗಿದೆ ಎಂದು ಬಿಬಿಎಂಪಿಯು ಪೀಠಕ್ಕೆ ವಿವರಿಸಿತು. ಮಹಾದೇವಪುರ ವಲಯದಲ್ಲಿನ ರಸ್ತೆಗಳನ್ನು (324 ಕಿ ಮೀ) ಪುನರ್‌ ನಿರ್ಮಿಸಲಾಗುತ್ತಿದೆ ಎಂದು ಬಿಬಿಎಂಪಿ ಪೀಠಕ್ಕೆ ತಿಳಿಸಿತು. ರಸ್ತೆ ಗುಂಡಿ ಮುಚ್ಚುವ ಕೆಲಸಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಅಸಮಾಧಾನ ವ್ಯಕ್ತಪಡಿಸಿತು. ವಾಹನ ಸವಾರರಿಗೆ ವಾಹನ ಚಲಾಯಿಸಲಾಗದಷ್ಟು ರಸ್ತೆಗಳು ಹಾಳಾಗಿವೆ ಎಂದು ಪೀಠವು ಹೇಳಿತು.