Justice M Nagaprasanna
Justice M Nagaprasanna 
ಸುದ್ದಿಗಳು

ರಾಜಕೀಯ ಹಸ್ತಕ್ಷೇಪಕ್ಕೆ ಅತೃಪ್ತಿ; ಹರಾಜಿನ ಮೂಲಕವೇ ಸರ್ಕಾರಿ ಆಸ್ತಿ ಹಂಚಿಕೆ ಮಾಡಬೇಕು ಎಂದ ಹೈಕೋರ್ಟ್‌

Bar & Bench

ಸರ್ಕಾರಿ ಆಸ್ತಿಯನ್ನು ಹಂಚಿಕೆ ಮಾಡುವ ವಿಚಾರದಲ್ಲಿ ನಡೆಯವ ರಾಜಕೀಯ ಹಸ್ತಕ್ಷೇಪದ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್, ಸಾರ್ವಜನಿಕ ಆಸ್ತಿ ಹಂಚಿಕೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿದೆ.

ಶಾಸಕರಿಬ್ಬರ ಶಿಫಾರಸು ಪತ್ರ ಆಧರಿಸಿ ಮಲ್ಪೆ ಬಂದರಿನ ಮೀನು ಸಂಸ್ಕರಣೆ ಘಟಕದಲ್ಲಿ 700 ಚದರ ಮೀಟರ್ ಜಾಗವನ್ನು ಸಂತೋಷ್ ವಿ. ಸಾಲ್ಯಾನ್ ಎಂಬುವರಿಗೆ ಗುತ್ತಿಗೆ ನೀಡಿ ಉಡುಪಿಯ ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕರು ಹೊರಡಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ರದ್ದುಪಡಿಸಿದೆ.

“ಸರ್ಕಾರಿ ಆಸ್ತಿಯನ್ನು ಸಾರ್ವಜನಿಕ ಹರಾಜು ಅಥವಾ ಟೆಂಡರ್ ಪ್ರಕ್ರಿಯೆ ಮೂಲಕವೇ ಗುತ್ತಿಗೆ ನೀಡಬೇಕು. ತಪ್ಪಿದರೆ ಅಧಿಕಾರವನ್ನು ನಿರಂಕುಶವಾಗಿ ಬಳಕೆ ಮಾಡಿದಂತಾಗುತ್ತದೆ. ಸಾರ್ವಜನಿಕರ ಗಮನಕ್ಕೆ ಬರದಂತೆ ಸರ್ಕಾರಿ ಆಸ್ತಿಯನ್ನು ಹಿತಾಸಕ್ತಿಯ ವ್ಯಕ್ತಿಗೆ ಮನಸೋಇಚ್ಛೆ ಹಂಚಿಕೆ ಮಾಡಲು ಅವಕಾಶವಿಲ್ಲ. ಈ ಪ್ರಕರಣವು ಸರ್ಕಾರಿ ಆಸ್ತಿಯನ್ನು ಬೇಕಾಬಿಟ್ಟಿ ಹಂಚಿಕೆ ಮಾಡುತ್ತಿರುವ ಸರ್ಕಾರಕ್ಕೆ ಕೊನೆಯ ಎಚ್ಚರಿಕೆಯಾಗಿದೆ. ಈ ಪ್ರವೃತ್ತಿ ಮರುಕಳಿಸಿದರೆ ಅದನ್ನು ಗಂಭೀರವಾಗಿ ಪರಿಗಣಿಸಲಿದ್ದು, ಯಾವುದೇ ವಿನಾಯ್ತಿ ನೀಡಲಾಗುವುದಿಲ್ಲ” ಎಂದು ಸರ್ಕಾರಕ್ಕೆ ಹೈಕೋರ್ಟ್ ಎಚ್ಚರಿಸಿದೆ.

“ವಿವಾದಿತ ಸರ್ಕಾರಿ ಜಾಗವನ್ನು ಸಾರ್ವಜನಿಕ ಹರಾಜು ಮೂಲಕವೇ ಗುತ್ತಿಗೆ ನೀಡಲಾಗುವುದು ಎಂದು ತಿಳಿಸಿ ಅರ್ಜಿದಾರ ಮತ್ತು ಸಂತೋಷ್ ಅವರ ಅರ್ಜಿಗಳನ್ನು ಮೊದಲು ಇಲಾಖೆ ವಜಾಗೊಳಿಸಿತ್ತು. ಅದಾದ ಬಳಿಕ ರಾಜಕೀಯ ಮಧ್ಯಪ್ರವೇಶದಿಂದ ಸಂತೋಷ್ ಪರವಾಗಿ ಆದೇಶ ಹೊರಡಿಸಲಾಗಿದೆ. ಇದು ಆಶ್ಚರ್ಯ ಮೂಡಿಸಿದೆ. ಅರ್ಜಿದಾರರ ವಿಚಾರದಲ್ಲಿ ಸರ್ಕಾರ ನಡೆದುಕೊಂಡಿರುವ ಪಕ್ಷಪಾತಿ ಕ್ರಮಕ್ಕೆ ನ್ಯಾಯಾಲಯ ಅನುಮತಿಸುವುದಿಲ್ಲ. ಸರ್ಕಾರಿ ಆಸ್ತಿಯನ್ನು ಹಂಚಿಕೆ ಮಾಡುವ ಪ್ರಕ್ರಿಯೆಯಲ್ಲಿ ಏಕತೆ ಮತ್ತು ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಹರಾಜು ಪ್ರಕ್ರಿಯೆ ನಡೆಸಿ ಅದರಲ್ಲಿ ಸಾರ್ವಜನಿಕರು ಭಾಗವಹಿಸುವಂತೆ ಮಾಡಬೇಕು” ಎಂದು ಆದೇಶದಲ್ಲಿ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.

2022ರ ಸೆಪ್ಟೆಂಬರ್‌ 23ರಂದು ಉಡುಪಿ ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕರು ಬಂದರಿನ ಜಾಗವನ್ನು ಸಂತೋಷ್‌ಗೆ ಗುತ್ತಿಗೆ ನೀಡಿ ಹೊರಡಿಸಿರುವ ಆದೇಶವನ್ನು ನ್ಯಾಯಾಲಯ ರದ್ದುಪಡಿಸಿದೆ. ಅಲ್ಲದೇ, ವಿವಾದಿತ ಸರ್ಕಾರಿ ಜಾಗವನ್ನು ಸಾರ್ವಜನಿಕ ಹರಾಜು ಮೂಲಕವೇ ಗುತ್ತಿಗೆ ನೀಡಬೇಕು. ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅರ್ಜಿದಾರ ಹಾಗೂ ಸಂತೋಷ್‌ಗೆ ಈ ಆದೇಶ ಅಡ್ಡಿಯಾವುದಿಲ್ಲ ಎಂದು ನಿರ್ದೇಶಿಸಿ, ಪೀಠವು ಅರ್ಜಿ ಇರ್ತ್ಯಪಡಿಸಿದೆ.

ಪ್ರಕರಣದ ಹಿನ್ನೆಲೆ: ಶೀತಲ ಘಟಕ ನಿರ್ಮಾಣಕ್ಕಾಗಿ ಮಲ್ಪೆ ಬಂದರಿನ ಮೀನು ಸಂಸ್ಕರಣಾ ಕೇಂದ್ರದಲ್ಲಿರುವ ಸರ್ವೆ ನಂ.262/ಸಿ ರಲ್ಲಿ ಖಾಲಿಯಿರುವ ಜಾಗ ಗುತ್ತಿಗೆ ನೀಡಲು ಉಡುಪಿ ಜಿಲ್ಲೆಯ ಕೊಡವೂರು ನಿವಾಸಿ ಗ್ರಾಮದ ಚಂದ್ರ ಸುವರ್ಣ ಮತ್ತು ಅನಂತ ಕೃಷ್ಣ ನಗರ ನಿವಾಸಿ ಸಂತೋಷ್ ವಿ. ಸಾಲ್ಯಾನ್ ಅರ್ಜಿ ಸಲ್ಲಿಸಿದ್ದರು. ಕೇವಲ ಸಾರ್ವಜನಿಕ ಹರಾಜು ಮೂಲಕವಷ್ಟೇ ಸರ್ಕಾರಿ ಆಸ್ತಿಯನ್ನು ಹಂಚಿಕೆ ಮಾಡಲಾಗುವುದು ಎಂದು ತಿಳಿಸಿ ಅವರ ಅರ್ಜಿಗಳನ್ನು ತಿರಸ್ಕರಿಸಲಾಗಿತ್ತು.

ಶಾಸಕ ಲಾಲಾಜಿ ಆರ್.ಮೆಂಡನ್ ಅವರು ಉಡುಪಿ ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಿಗೆ ಪತ್ರ ಬರೆದು, ಮಲ್ಪೆ ಬಂದರಿನಲ್ಲಿ 700 ಚದರ ಮೀಟರ್ ಭೂಮಿಯನ್ನು ಸಂತೋಷ್ ವಿ.ಸಾಲ್ಯಾನ್‌ಗೆ ಗುತ್ತಿಗೆ ನೀಡಬೇಕು ಎಂದು ತಿಳಿಸಿದ್ದರು. ನಂತರ ಇನ್ನೊಬ್ಬ ಶಾಸಕ ಕೆ  ರಘುಪತಿ ಭಟ್ ಸಹ ಪತ್ರ ಬರೆದು, ಆ ಜಾಗವನ್ನು 10 ವರ್ಷದ ಅವಧಿಗೆ ಗುತ್ತಿಗೆ ಆಧಾರದಲ್ಲಿ ಸಂತೋಷ್‌ಗೆ ಗುತ್ತಿಗೆ ನೀಡಬೇಕು ಎಂದು ಕೋರಿದ್ದರು. ಈ ಪತ್ರಗಳನ್ನು ಪರಿಗಣಿಸಿ ಸಂತೋಷ್‌ಗೆ ಜಾಗವನ್ನು ಗುತ್ತಿಗೆ ನೀಡಿ 2021ರ ಸೆಪ್ಟೆಂಬರ್‌ 23ರಂದು ಆದೇಶಿಸಲಾಗಿತ್ತು. ಈ ಆದೇಶವನ್ನು ಪ್ರಶ್ನಿಸಿ ಚಂದ್ರ ಸುವರ್ಣ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.