Karnataka High Court 
ಸುದ್ದಿಗಳು

28 ವರ್ಷ ಕಳೆದರೂ ವಿಚಾರಣೆ ಪೂರ್ಣಗೊಳಿಸದ ಸರ್ಕಾರದ ನಡೆಗೆ ಹೈಕೋರ್ಟ್ ಕಿಡಿ; ಕೆಎಟಿ ಆದೇಶ ಪ್ರಶ್ನಿಸಿದ್ದ ಅರ್ಜಿ ವಜಾ

ರಾಮಪ್ಪ ವಿರುದ್ಧ 1996-97ರ ಅವಧಿಯಲ್ಲಿ ಸರ್ಕಾರದ ಬೊಕ್ಕಸಕ್ಕೆ ₹29 ಲಕ್ಷ ನಷ್ಟ ಉಂಟು ಮಾಡಿದ ಆರೋಪ ಕೇಳಿಬಂದಿತ್ತು. ರಾಮಪ್ಪ ಸೇವೆಯಿಂದ ನಿವೃತ್ತಿಗೊಂಡು 13 ವರ್ಷ ಕಳೆದ ನಂತರ ಇಲಾಖಾ ತನಿಖೆ ನಡೆಸಲು ಅಧಿಕಾರಿಯನ್ನು ಸರ್ಕಾರ ನೇಮಿಸಿತ್ತು.

Bar & Bench

ಜಿಲ್ಲಾಧಿಕಾರಿಗಳ ಅನುಮತಿ ಪಡೆಯದೆ ಹಾಗೂ ಟೆಂಡರ್ ಪ್ರಕ್ರಿಯೆ ನಡೆಸದೆ ಕಾಮಗಾರಿ ನಡೆಸಿ ಸರ್ಕಾರದ ಬೊಕ್ಕಸಕ್ಕೆ 29 ಲಕ್ಷ ರೂಪಾಯಿ ನಷ್ಟ ಉಂಟು ಮಾಡಿದ ಪ್ರಕರಣದಲ್ಲಿ ರಾಜ್ಯ ಪೌರಾಡಳಿತ ಇಲಾಖೆಯ ನಿವೃತ್ತ ಆಯುಕ್ತರೊಬ್ಬರ ವಿರುದ್ಧ 28 ವರ್ಷ ಕಳೆದರೂ ಇಲಾಖೆ ವಿಚಾರಣೆ ಪೂರ್ಣಗೊಳಿಸದ ರಾಜ್ಯ ಸರ್ಕಾರದ ಕಾರ್ಯವೈಖರಿಗೆ ಕರ್ನಾಟಕ ಹೈಕೋರ್ಟ್ ಈಚೆಗೆ ತೀವ್ರ ಬೇಸರ ವ್ಯಕ್ತಪಡಿಸಿದೆ.

ನಿವೃತ್ತ ಆಯುಕ್ತ ಕೆ ಎಂ ರಾಮಪ್ಪ ವಿರುದ್ಧ ಕೈಗೊಂಡಿದ್ದ ಇಲಾಖಾ ವಿಚಾರಣೆ ರದ್ದುಪಡಿಸಿದ್ದ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಆದೇಶ ಪ್ರಶ್ನಿಸಿ ಮೇಲ್ಮವಿ ಸಲ್ಲಿಸಿದ್ದ ಸರ್ಕಾರದ (ನಗರಾಭಿವೃದ್ಧಿ ಇಲಾಖೆ) ನಡೆಯ ಕುರಿತು ನ್ಯಾಯಮೂರ್ತಿ ಜಿ ನರೇಂದರ್ ನೇತೃತ್ವದ ವಿಭಾಗೀಯ ಪೀಠ ಆಕ್ರೋಶ ಹೊರಹಾಕಿದೆ. ಕೆಎಟಿ ಆದೇಶ ಪುರಸ್ಕರಿಸಿ ಸರ್ಕಾರದ ಮೇಲ್ಮನವಿ ವಜಾಗೊಳಿಸಿ ಪೀಠವು ಆದೇಶಿಸಿದೆ.

ರಾಮಪ್ಪ ವಿರುದ್ಧ 1996ರಿಂದ 97ರ ಅವಧಿಯಲ್ಲಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ ಆರೋಪ ಕೇಳಿಬಂದಿತ್ತು. ರಾಮಪ್ಪ ಸೇವೆಯಿಂದ ನಿವೃತ್ತಿಗೊಂಡು 13 ವರ್ಷ ಕಳೆದ ನಂತರ ಇಲಾಖಾ ತನಿಖೆ ನಡೆಸಲು ಅಧಿಕಾರಿಯನ್ನು ಸರ್ಕಾರ ನೇಮಿಸಿತ್ತು. ಅವರು ಈವರೆಗೂ ವಿಚಾರಣೆ ನಡೆಸುವ ಸಲುವಾಗಿ ಒಂದೂ ಸಭೆ ನಡೆಸಿಲ್ಲ. ಈಗ ಮತ್ತೆ ವಿಚಾರಣೆ ನಡೆಸಲು ಮತ್ತೊಬ್ಬ ಅಧಿಕಾರಿಯನ್ನು ನೇಮಿಸಲಾಗಿದೆ. ಇಲಾಖಾ ವಿಚಾರಣೆ ಪೂರ್ಣಗೊಳಿಸಲು ಇಷ್ಟು ವಿಳಂಬ ಮಾಡಿರುವುದು ನ್ಯಾಯಸಮ್ಮತವಲ್ಲ. ಹೀಗಾಗಿ, ಸುದೀರ್ಘ ವಿಳಂಬ ಪರಿಗಣಿಸಿ ರಾಮಪ್ಪ ವಿರುದ್ಧದ ವಿಚಾರಣೆ ರದ್ದುಪಡಿಸಿದ ಕೆಎಟಿ ಕ್ರಮ ನ್ಯಾಯಸಮ್ಮತವಾಗಿದೆ. ಅದರಲ್ಲಿ ಮಧ್ಯಪ್ರವೇಶ ಮಾಡಲು ಮತ್ತು ಸರ್ಕಾರದ ಮೇಲ್ಮನವಿ ಪುರಸ್ಕರಿಸಲು ಯಾವುದೇ ಸಕಾರಣ ಕಂಡುಬರುತ್ತಿಲ್ಲ ಎಂದು ಪೀಠ ಆದೇಶದಲ್ಲಿ ಸರ್ಕಾರದ ಕಾರ್ಯವೈಖರಿಗೆ ಬೇಸರ ವ್ಯಕ್ತಪಡಿಸಿದೆ.

ಪ್ರಕರಣದ ಹಿನ್ನೆಲೆ: 1996ರಿಂದ 1997ರ ಅವಧಿಯಲ್ಲಿ ಬೆಂಗಳೂರಿನ ಕೆ ಆರ್ ಪುರ ಪುರಸಭೆಯ ಆಯುಕ್ತರಾಗಿದ್ದ ರಾಮಪ್ಪ, ಟೆಂಡರ್ ಕರೆಯದೆ ಕೆಲ ಕಾಮಗಾರಿ ನಡೆಸಿ ಬಿಲ್ ಪಾವತಿಸಿದ್ದರು. ಆ ಮೂಲಕ ಸರ್ಕಾರದ ಬೊಕ್ಕಸಕ್ಕೆ 29 ಲಕ್ಷ ರೂಪಾಯಿ ನಷ್ಟ ಉಂಟು ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ನಂತರ 2006ರ ನವೆಂಬರ್‌ 10ರಂದು ರಾಮಪ್ಪ ವಿರುದ್ಧ ಇಲಾಖಾ ವಿಚಾರಣೆಗೆ ಆದೇಶಿಸಲಾಗಿತ್ತು. ಈ ನಡುವೆ ರಾಮಪ್ಪ ದೊಡ್ಡಬಳ್ಳಾಪುರ ಪುರಸಭೆಯ ಆಯುಕ್ತರಾಗಿ ವಗಾರ್ವಣೆಗೊಂಡಿದ್ದರು. ಅಲ್ಲಿ ಕರ್ತವ್ಯ ನಿರತರಾಗಿದ್ದಾಗ 2007ರ ಡಿಸೆಂಬರ್‌ 7ರಂದು ರಾಮಪ್ಪಗೆ ನೋಟಿಸ್ ನೀಡಿದ್ದ ಸರ್ಕಾರ ಪ್ರತಿಕ್ರಿಯಿಸಲು ಸೂಚಿಸಿತ್ತು. ರಾಮಪ್ಪ ವಿವರವಾದ ಪ್ರತಿಕ್ರಿಯೆ ನೀಡಿ ತಮ್ಮ ವಿರುದ್ಧದ ಎಲ್ಲಾ ಆರೋಪ ನಿರಾಕರಿಸಿದ್ದರು. 2010ರ ಮೇ 31ರಂದು ಅವರು ನಿವೃತ್ತರಾಗಿದ್ದರು.

ಈ ಎಲ್ಲ ಪ್ರಕ್ರಿಯೆ ನಡೆದ 18 ವರ್ಷಗಳ ಬಳಿಕ ನಗರಾಭಿವೃದ್ಧಿಯ ಪ್ರಧಾನ ಕಾರ್ಯದರ್ಶಿಗಳು ನಿವೃತ್ತ ಜಿಲ್ಲಾ ನ್ಯಾಯಾಧೀಶರನ್ನು ವಿಚಾರಣಾ ಅಧಿಕಾರಿಯಾಗಿ ನೇಮಿಸಿದ್ದರು. ಅವರು ವಿಚಾರಣೆ ನಿಮಿತ್ತ ಯಾವುದೇ ಸಭೆ ನಡೆಸಿರಲಿಲ್ಲ. 2019ರಲ್ಲಿ ಮತ್ತೊಬ್ಬ ವಿಚಾರಣಾಧಿಕಾರಿಯನ್ನು ನೇಮಿಸಲಾಗಿತ್ತು. ಅದನ್ನು ರಾಮಪ್ಪ ಕೆಎಟಿಯಲ್ಲಿ ಪ್ರಶ್ನಿಸಿದ್ದರು. ಇಲಾಖಾ ವಿಚಾರಣೆಯನ್ನು ಕೆಎಟಿ ರದ್ದುಪಡಿಸಿದ್ದರಿಂದ ಸರ್ಕಾರ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.