Marriage
Marriage 
ಸುದ್ದಿಗಳು

ಹಿಂದೂ ಸಂಪ್ರದಾಯದಂತೆ ಪ್ರಿಯತಮೆ ವರಿಸಲು ಅಪರಾಧಿಗೆ 60 ದಿನಗಳ ಪೆರೋಲ್ ವಿಸ್ತರಿಸಿದ ಕರ್ನಾಟಕ ಹೈಕೋರ್ಟ್‌

Bar & Bench

ಕೊಲೆ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆಗೆ ಗುರಿಯಾದ ಅಪರಾಧಿಗೆ ತನ್ನ ಪ್ರಿಯತಮೆಯನ್ನು ವರಿಸಲು 15 ದಿನ ಪೆರೋಲ್ ನೀಡಿದ್ದ ಕರ್ನಾಟಕ ಹೈಕೋರ್ಟ್, ಜೋತಿಷಿಗಳ ಸಲಹೆ ಮೇರೆಗೆ ಹಿಂದೂ ಸಂಪ್ರದಾಯದಂತೆ ವಿವಾಹ ನೆರವೇರಿಸಲು ಯುವತಿಯ ಪೋಷಕರು ನಿಶ್ಚಯಿಸಿದ ಹಿನ್ನೆಲೆಯಲ್ಲಿ 60 ದಿನಗಳ ಕಾಲ ಪೆರೋಲ್ ವಿಸ್ತರಿಸಿ ಆದೇಶಿಸಿದೆ.

ಪೆರೋಲ್ ವಿಸ್ತರಣೆಗೆ ಕೋರಿ ಕೈದಿ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ಪುರಸ್ಕರಿಸಿದೆ.

“ಪ್ರಕರಣದಲ್ಲಿ ಅರ್ಜಿದಾರನಿಗೆ ಏಪ್ರಿಲ್‌ 5ರಿಂದ ಏಪ್ರಿಲ್‌ 20ರ ಸಂಜೆ 6 ಗಂಟೆಯವರೆಗೆ ಪೆರೋಲ್ ನೀಡಲಾಗಿತ್ತು. ಆತ ಏಪ್ರಿಲ್‌ 11ರಂದು ನೋಂದಣಿ ಮೂಲಕ ಮದುವೆಯಾಗಿದ್ದನು. ಸದ್ಯ 60 ದಿನ ಪೆರೋಲ್ ವಿಸ್ತರಣೆಗೆ ಕೋರಿ ಮಧ್ಯಂತರ ಅರ್ಜಿ ಸಲ್ಲಿಸಿದ್ದು, ಪೆರೋಲ್ ಅವಧಿ ವಿಸ್ತರಣೆ ಸೂಕ್ತವಾಗಿದೆ. ಹಾಗೆಯೇ, ಇದೇ ಮಾದರಿಯ ಕಾರಣ ನೀಡಿ ಮತ್ತೆ ಪೆರೋಲ್ ವಿಸ್ತರಣೆಗೆ ಅರ್ಜಿ ಸಲ್ಲಿಸಿದರೆ, ಅದನ್ನು ಪುರಸ್ಕರಿಸಲಾಗದು. ಪೆರೋಲ್ ನೀಡಿದ ಅವಧಿಯಲ್ಲಿ ಪ್ರತಿ ಭಾನುವಾರ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯೊಳಗೆ ಸಂಬಂಧಪಟ್ಟ ಠಾಣೆಗೆ ಹಾಜರಾಗಬೇಕು” ಎಂದು ಆದೇಶದಲ್ಲಿ ಹೇಳಲಾಗಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಡಿ ಮೋಹನ್ ಕುಮಾರ್ ಅವರು, ಪ್ರಕರಣದಲ್ಲಿ ಹೈಕೋಟ್ ಪೆರೋಲ್ ನೀಡಿದ ಹಿನ್ನೆಲೆಯಲ್ಲಿ ಅರ್ಜಿದಾರ ತನ್ನ ಪ್ರೇಯಸಿಯನ್ನು ಏಪ್ರಿಲ್‌ 11ರಂದು ವಿವಾಹವಾಗಿದ್ದಾರೆ. ಆದರೆ, ಹಿಂದೂ ಧರ್ಮದ ಸಂಪ್ರದಾಯ ಮತ್ತು ಆಚರಣೆ ಅನ್ವಯ ಜೂನ್ ಮೊದಲ ವಾರದಲ್ಲಿ ಕಲ್ಯಾಣ ಮಂಟಪದಲ್ಲಿ ಮದುವೆ ಮಾಡಲು ಅರ್ಜಿದಾರನ ಪತ್ನಿಯ ಪೋಷಕರು ನಿಶ್ಚಯಿಸಿದ್ದಾರೆ. ಆದರೆ, ಈ ಹಿಂದೆ ಮಂಜೂರು ಮಾಡಿದ ಪೆರೋಲ್ ಅವಧಿ ಏಪ್ರಿಲ್‌ 20ಕ್ಕೆ ಕೊನೆಯಾಗಲಿದ್ದು, ಮತ್ತೆ 60 ದಿನಗಳ ಕಾಲ ಪೆರೋಲ್ ವಿಸ್ತರಿಸಬೇಕು ಎಂದು ಕೋರಿದ್ದರು.

ಅಲ್ಲದೆ, ಪೆರೋಲ್ ವಿಸ್ತರಿಸದಿದ್ದರೆ ಅರ್ಜಿದಾರರಿಗೆ ಸರಿಪಡಿಸಲಾಗದ ನಷ್ಟ ಉಂಟಾಗಲಿದೆ. ಮತ್ತೆ ಪೆರೋಲ್‌ ಕೋರುವುದಿಲ್ಲ. ಪೆರೋಲ್ ಅವಧಿ ಮುಗಿದ ನಂತರ ಅರ್ಜಿದಾರ ಕಾರಾಗೃಹದ ಅಧಿಕಾರಿಗಳ ಮುಂದೆ ಹಾಜರಾಗುತ್ತಾರೆ ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿದ್ದರು. ಇದನ್ನು ನ್ಯಾಯಾಲಯ ಮಾನ್ಯ ಮಾಡಿದೆ.

ಪ್ರಕರಣದ ಹಿನ್ನೆಲೆ: ಸ್ಥಿರಾಸ್ತಿ ವ್ಯಾಜ್ಯದ ಗಲಾಟೆಯಲ್ಲಿ ವ್ಯಕ್ತಿಯೊಬ್ಬರನ್ನು ಕೊಲೆಗೈದ ಪ್ರಕರಣ ಸಂಬಂಧ 2015ರ ಆಗಸ್ಟ್‌ 17ರಂದು ಕೋಲಾರದ ಅರ್ಜಿದಾರನನ್ನು (ಘಟನೆ ನಡೆದಾಗ 21 ವರ್ಷ) ಪೊಲೀಸರು ಬಂಧಿಸಿದ್ದರು. ಸತ್ರ ನ್ಯಾಯಾಲಯ 2019ರಲ್ಲಿ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಅದನ್ನು ಪ್ರಶ್ನಿಸಲಾದ ಮೇಲ್ಮನವಿಯಲ್ಲಿ ಹೈಕೋರ್ಟ್ ವಿಭಾಗೀಯ ಪೀಠವು ಶಿಕ್ಷೆಯ ಪ್ರಮಾಣವನ್ನು 10 ವರ್ಷಗಳಿಗೆ ಇಳಿಸಿದೆ. ಈಗಾಗಲೇ ಆತ 6 ವರ್ಷ ಜೈಲುವಾಸ ಪೂರೈಸಿದ್ದು, ನಾಲ್ಕು ವರ್ಷ ಬಾಕಿಯಿದೆ.

ಕಳೆದ ಒಂಭತ್ತು ವರ್ಷಗಳಿಂದ ಅರ್ಜಿದಾರ ಮತ್ತು ಆತನ ಪ್ರೇಯಸಿ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಇತ್ತೀಚೆಗೆ ಪ್ರೇಯಸಿಗೆ ಬೇರೊಬ್ಬರ ಜೊತೆಗೆ ಮದುವೆ ಮಾಡಲು ಪೋಷಕರು ನಿಶ್ಚಯಿಸಿದ್ದರು. ಇದರಿಂದ ಅರ್ಜಿದಾರ ಮತ್ತು ಪ್ರೇಯಸಿ ಮದುವೆಯಾಗಲು ನಿರ್ಧರಿಸಿ, ಆತ ಪೆರೋಲ್‌ಗೆ ಮನವಿ ಮಾಡಿದ್ದನು. ಇದನ್ನು ಬೆಂಗಳೂರು ಕೇಂದ್ರ ಕಾರಾಗೃಹದ ಅಧಿಕಾರಿಗಳು ಪರಿಗಣಿಸದ ಕಾರಣ ಅರ್ಜಿದಾರನ ತಾಯಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಮದುವೆಯಾಗಲು ಅರ್ಜಿದಾರನಿಗೆ 15 ದಿನ ಪೆರೋಲ್ ಮಂಜೂರು ಮಾಡಿ 2023ರ ಮಾರ್ಚ್‌ 31ರಂದು ಹೈಕೋರ್ಟ್ ಆದೇಶಿಸಿತ್ತು.