Google, Karnataka High Court 
ಸುದ್ದಿಗಳು

[ಗೂಗಲ್ ಗೌಪ್ಯ ಮಾಹಿತಿ ಪ್ರಕರಣ] ಸಿಸಿಐ ಆದೇಶಕ್ಕೆ ನೀಡಿದ್ದ ತಡೆಯಾಜ್ಞೆ ವಿಸ್ತರಿಸಿದ ಕರ್ನಾಟಕ ಹೈಕೋರ್ಟ್‌

ಗೂಗಲ್‌ ಸಲ್ಲಿಸಿರುವ ಮನವಿಯು ನಿರ್ವಹಣೆಗೆ ಅರ್ಹವಲ್ಲ ಎಂಬುದಕ್ಕೆ ಸಂಬಂಧಿಸಿದಂತೆ ಸೂಕ್ತ ರೀತಿಯಲ್ಲಿ ಅರ್ಜಿ ಸಲ್ಲಿಸುವಂತೆ ಸಿಸಿಐಗೆ ಆದೇಶಿಸಿದ ನ್ಯಾಯಾಲಯ.

Bar & Bench

ಗೂಗಲ್‌ನ ಗೌಪ್ಯತಾ ವಲಯದೊಳಗೆ ಪ್ರತಿವಾದಿಗಳಾದ ಅಲಯನ್ಸ್‌ ಆಫ್‌ ಡಿಜಿಟಲ್‌ ಇಂಡಿಯಾ ಫೌಂಡೇಶನ್‌ ಅನ್ನು (ಎಡಿಐಎಫ್‌) ಸೇರಿಸಿಕೊಂಡು ಅವರ ಜೊತೆ ಗೌಪ್ಯ ಮಾಹಿತಿ ಹಂಚಿಕೊಳ್ಳುವಂತೆ ನಿರ್ದೇಶಿಸಿದ್ದ ಭಾರತೀಯ ಸ್ಪರ್ಧಾ ಆಯೋಗದ (ಸಿಸಿಐ) ಆದೇಶಕ್ಕೆ ವಿಧಿಸಿರುವ ತಡೆಯಾಜ್ಞೆಯನ್ನು ಬುಧವಾರ ಕರ್ನಾಟಕ ಹೈಕೋರ್ಟ್‌ ವಿಸ್ತರಿಸಿದೆ. ಅಲ್ಲದೇ, ಗೂಗಲ್‌ ಸಲ್ಲಿಸಿರುವ ಮನವಿಯು ನಿರ್ವಹಣೆಗೆ ಅರ್ಹವಲ್ಲ ಎಂಬುದಕ್ಕೆ ಸಂಬಂಧಿಸಿದಂತೆ ಸೂಕ್ತ ರೀತಿಯಲ್ಲಿ ಅರ್ಜಿ ಸಲ್ಲಿಸುವಂತೆ ಸಿಸಿಐಗೆ ಆದೇಶಿಸಿದೆ.

ಭಾರತೀಯ ಸ್ಪರ್ಧಾ ಆಯೋಗದ ಆದೇಶ ಪ್ರಶ್ನಿಸಿ ಗೂಗಲ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌, ಆಲ್ಫಬೆಟ್‌ ಇಂಕ್‌, ಗೂಗಲ್‌ ಎಲ್‌ಎಲ್‌ಸಿ, ಗೂಗಲ್‌ ಐರ್ಲೆಂಡ್‌ ಲಿಮಿಟೆಡ್‌, ಗೂಗಲ್‌ ಇಂಡಿಯಾ ಡಿಜಿಟಲ್‌ ಸರ್ವೀಸಸ್‌ ಪ್ರೈವೇಟ್‌ ಲಿಮಿಟೆಡ್‌ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ಜಿ ಪಂಡಿತ್‌ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

ಸಿಸಿಐ ಉದ್ದೇಶಿಸಿ ಪೀಠವು “ಮನವಿ ನಿರ್ವಹಣೆಗೆ ಅರ್ಹವಲ್ಲ ಎಂದು ನೀವು ಸೂಕ್ತವಾದ ರೀತಿಯಲ್ಲಿ ಅರ್ಜಿ ಸಲ್ಲಿಸಬಹುದು. ಅದಕ್ಕೆ ಗೂಗಲ್‌ ಪ್ರತಿಕ್ರಿಯಿಸಲಿದೆ. ಅಲ್ಲಿಯವರೆಗೆ ಗೌಪ್ಯ ಮಾಹಿತಿಯನ್ನು ಎಡಿಐಎಫ್‌ ಪಡೆಯಲು ಈಗ ಅನುಮತಿಸಲಾಗದು. ಸಿಸಿಐ ಮುಂದಿರುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಗೂಗಲ್‌ ಸಂಸ್ಥೆಯು ಕಾಲಾನುಕ್ರಮಣಿಕೆ (ಟೈಮ್‌ಲೈನ್‌) ಪಾಲಿಸಬೇಕು. ಇಲ್ಲಿನ ಯಾವುದೇ ಅಭಿಪ್ರಾಯವು ಅಂತಿಮ ಎಂದು ಪರಿಗಣಿಸಬೇಕಿಲ್ಲ. ಇದು ಮುಂದಿನ ಆದೇಶಕ್ಕೆ ಒಳಪಟ್ಟಿರುತ್ತದೆ. ಮೇ 10ರಂದು ಮಾಡಿರುವ ಆದೇಶವು ಮುಂದುವರಿಯಲಿದೆ" ಎಂದಿತು.

ಇದಕ್ಕೂ ಮುನ್ನ, ಸ್ಪರ್ಧಾ ಆಯೋಗವನ್ನು ಪ್ರತಿನಿಧಿಸಿದ್ದ ಸರ್ಕಾರದ ವಕೀಲರು ಗೂಗಲ್‌ ಮನವಿಯು ನಿರ್ವಹಣೆಗೆ ಅರ್ಹವಲ್ಲ ಎಂದರು. ಇದಕ್ಕೆ ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಜ್ಜನ್‌ ಪೂವಯ್ಯ ಆಕ್ಷೇಪಿಸಿದರು. ಹಿರಿಯ ವಕೀಲ ಗೋಪಾಲ್‌ ಸುಬ್ರಮಣಿಯನ್‌, ವಕೀಲ ಹರೀಶ್‌ ನರಸಪ್ಪ ಹಾಜರಿದ್ದರು.