ಪರಿಸರ ಸ್ನೇಹಿ, ಬಟ್ಟೆಯ ಕೈಚೀಲಗಳನ್ನು ಮಾರುಕಟ್ಟೆ ದರ ₹13ಕ್ಕೆ ಬದಲಾಗಿ ₹52ಕ್ಕೆ ಖರೀದಿಸುವ ಮೂಲಕ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲೆಯ ಅಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆಗೆ ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಅಡಿ ಪೂರ್ವಾನುಮತಿ ನೀಡಲು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಒಂದು ತಿಂಗಳ ಗಡುವು ವಿಧಿಸಿದೆ.
ರೋಹಿಣಿ ಸಿಂಧೂರಿ ವಿರುದ್ಧ ತನಿಖೆ ಕೈಗೊಳ್ಳಬೇಕೆಂಬ ಮೈಸೂರಿನ ವಕೀಲ ಎನ್ ಆರ್ ರವಿಚಂದ್ರೇಗೌಡ ಪೂರ್ವಾನುಮತಿ ಕೋರಿಕೆ ನಿರಾಕರಿಸಿದ್ದ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (ಡಿಪಿಎಆರ್) ಆದೇಶವನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಜಾಗೊಳಿಸಿದೆ.
“ಕಾನೂನಿನ ಅನ್ವಯ ಪೂರ್ವಾನುಮತಿ ನೀಡುವುದನ್ನು ಪರಿಗಣಿಸುವಂತೆ ಸಮನ್ವಯ ಪೀಠವು ಈ ಹಿಂದೆ ನಿರ್ದೇಶಿಸಿದೆ. ಅದಾಗ್ಯೂ, ಸರ್ಕಾರವು ಅರ್ಥಪೂರ್ಣವಾಗಿ ಮೌಲ್ಯಮಾಪನ ಮಾಡುವ ಬದಲು ತನ್ನ ಹಿಂದಿನ ನಿಲುವನ್ನು ಸಮರ್ಥಿಸಿದೆ. ಹೀಗಾಗಿ, ಪ್ರಕರಣವನ್ನು ಮತ್ತೆ ಸರ್ಕಾರಕ್ಕೆ ಮರಳಿಸುವುದರಿಂದ ಯಾವುದೇ ಲಾಭವಿಲ್ಲ. ಬದಲಿಗೆ ನ್ಯಾಯದಾನ ಮತ್ತಷ್ಟು ವಿಸ್ತರಣೆಯಾಗಲಿದೆ” ಎಂದು ನ್ಯಾಯಾಲಯವು ಅರ್ಜಿ ಮಾನ್ಯ ಮಾಡುವುದಕ್ಕೆ ಸಮರ್ಥನೆ ನೀಡಿದೆ.
‘ಇಲಾಖಾ ವಿಚಾರಣೆಗಳು ಮತ್ತು ಕ್ರಿಮಿನಲ್ ವಿಚಾರಣೆಗಳು ವಿಭಿನ್ನ ತಳಹದಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಇವುಗಳಲ್ಲಿ ಪರಿಗಣಿಸಲಾಗುವ ಪುರಾವೆ ಮತ್ತು ಉದ್ದೇಶದ ಮಾನದಂಡಗಳನ್ನು ಪ್ರತ್ಯೇಕ ಕಾನೂನುಗಳಿಂದ ನಿಯಂತ್ರಿಸಲಾಗುತ್ತದೆ. ಇಲಾಖಾ ವಿಚಾರಣೆಯಲ್ಲಿ ಅಧಿಕಾರಿಯನ್ನು ದೋಷಮುಕ್ತಗೊಳಿಸಿದ ಮಾತ್ರಕ್ಕೆ ಕ್ರಿಮಿನಲ್ ತನಿಖೆ ನಡೆಯುವುದನ್ನು ತಡೆಯಲು ಸಾಧ್ಯವಿಲ್ಲ ಎಂಬುದು ಈಗಾಗಲೇ ನ್ಯಾಯಾಂಗ ಪರಾಮರ್ಶೆಯಲ್ಲಿ ಇತ್ಯರ್ಥವಾಗಿರುವ ಅಂಶ” ಎಂದು ನ್ಯಾಯಾಲಯ ಹೇಳಿದೆ.
“ಭ್ರಷ್ಟಾಚಾರದಂತಹ ಗಂಭೀರ ಆರೋಪಗಳು ಕೇಳಿ ಬಂದಾಗ ಅವುಗಳನ್ನು ಆರಂಭದಲ್ಲೇ ನಂದಿಸುವುದು ಸಾಧುವಲ್ಲ. ನಿಜಾಂಶವನ್ನು ತನಿಖಾ ಪ್ರಕ್ರಿಯೆಯ ಮೂಲಕ ಬಯಲು ಮಾಡಲು ಅವಕಾಶ ನೀಡಬೇಕು. ಆಗ ಮಾತ್ರ ಜನರಿಗೆ ಸತ್ಯ ಅರ್ಥವಾಗುತ್ತದೆ. ಹಾಲಿ ಪ್ರಕರಣದ ಆರೋಪಗಳು ಸಾರ್ವಜನಿಕ ಪ್ರಾಮಾಣಿಕತೆಯ ಹೃದಯವನ್ನೇ ಜಖಂಗೊಳಿಸುವಂತಿವೆ. ರೋಹಿಣಿ ಸಿಂಧೂರಿ ಕೇವಲ ಆಡಳಿತಾತ್ಮಕ ಲೋಪ ಎಸಗಿದ್ದಾರೆ ಎಂಬುದಲ್ಲ. ಇವರ ನಿರ್ಧಾರದಿಂದ ಸಾರ್ವಜನಿಕ ಬೊಕ್ಕಸಕ್ಕೆ ನಷ್ಟ ಉಂಟಾಗಿದೆ ಎಂಬುದು ಗಮನಾರ್ಹ” ಎಂದು ಪೀಠ ವಿವರಿಸಿದೆ.
“ಆರೋಪದ ತನಿಖೆಗೆ ಪೂರ್ವಾನುಮತಿ ನೀಡಲು ನಿರಾಕರಿಸಿರುವ ನಿರ್ಧಾರ ವಸ್ತುನಿಷ್ಠ ಮತ್ತು ತಾರ್ಕಿಕ ಅಂಶಗಳಿಂದ ಕೂಡಿಲ್ಲ. ಇಲಾಖೆಯು, ಆರೋಪಗಳ ಗಂಭೀರತೆಯನ್ನು ಗಮನವಿಟ್ಟು ಪರಿಶೀಲಿಸಿ ನ್ಯಾಯೋಚಿತ ನಿರ್ಧಾರ ಕೈಗೊಳ್ಳಲು ವಿಫಲವಾಗಿರುವುದು ಎದ್ದು ಕಾಣುತ್ತದೆ. ಅಷ್ಟೇ ಅಲ್ಲ, ಇದು ಅಧಿಕಾರಿ ವರ್ಗದ ಯಾಂತ್ರಿಕ ಕಸರತ್ತಿನಂತೆ ಕಾಟಾಚಾರದ ಪ್ರತಿಬಿಂಬವಾಗಿದೆ” ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ವಿರುದ್ಧ ಕಿಡಿಕಾರಿದೆ.
“ಸಾರ್ವಜನಿಕ ಸೇವಕರು ತಮ್ಮ ಅಧಿಕೃತ ಕಾರ್ಯ ಅಥವಾ ಕರ್ತವ್ಯಗಳನ್ನು ನಿರ್ವಹಿಸುವಾಗ ಮಾಡಿದ ಶಿಫಾರಸ್ಸುಗಳು ಅಥವಾ ನಿರ್ಧಾರಗಳಿಗೆ ಸಂಬಂಧಿಸಿದ ಅಪರಾಧಗಳ ವಿಚಾರಣೆ ಅಥವಾ ತನಿಖೆಗೆ ಅನುಮತಿ ನೀಡುವುದು ಸಾಂವಿಧಾನಿಕ ಮತ್ತು ಶಾಸನಬದ್ಧ ಕಡ್ಡಾಯ ನಿಲುವಾಗಿರಬೇಕು. ಯಾಕೆಂದರೆ, ಭ್ರಷ್ಟಾಚಾರ ಒಂದು ಪಿಡುಗು. ಇದನ್ನು ಕ್ಯಾನ್ಸರ್, ಪ್ಲೇಗ್ ಮತ್ತು ಸಾಂಕ್ರಾಮಿಕ ಎಂದು ವಿವಿಧ ರೀತಿಯಲ್ಲಿ ವರ್ಣಿಸಲಾಗಿದೆ” ಎಂಬ ಸುಪ್ರೀಂ ಕೋರ್ಟ್ ತೀರ್ಪನ್ನು ಪೀಠ ಆದೇಶದಲ್ಲಿ ಉಲ್ಲೇಖಿಸಿದೆ.
“ಭ್ರಷ್ಟಚಾರವನ್ನು ನಿಯಂತ್ರಿಸದೇ ಹೋದರೆ ಅದು ರಾಜಕೀಯ ಕ್ಷೇತ್ರವನ್ನೇ ಅಸ್ಥಿರಗೊಳಿಸುತ್ತದೆ. ಪ್ರಜಾಪ್ರಭುತ್ವ ಸಂಸ್ಥೆಗಳನ್ನು ನಾಶಮಾಡುವ ಸಾಮರ್ಥ್ಯ ಭ್ರಷ್ಟಾಚಾರಕ್ಕಿದೆ. ಭ್ರಷ್ಟಾಚಾರವು ರಾಷ್ಟ್ರದ ಶತ್ರು. ಭ್ರಷ್ಟ ಸಾರ್ವಜನಿಕ ಸೇವಕರು ಯಾವುದೇ ಶ್ರೇಣಿ ಅಥವಾ ಅಂತಸ್ತನ್ನು ಹೊಂದಿದ್ದರೂ ಕಾಯಿದೆಗೆ ಅನುಗುಣವಾಗಿ ಅಂಥವರನ್ನು ಪತ್ತೆಹಚ್ಚಿ ಶಿಕ್ಷಿಸುವುದಕ್ಕೆ ಹಿಂಜರಿಕೆ ಸಲ್ಲ” ಎಂದು ಪೀಠ ಪುನರುಚ್ಚರಿಸಿದೆ.
ಬೊಕ್ಕಸಕ್ಕೆ ₹7.65 ಕೋಟಿ ನಷ್ಟ ಆರೋಪ: ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಮೈಸೂರು ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಮುಕ್ತ ವಾತಾವರಣ ನಿರ್ಮಿಸಬೇಕು ಮತ್ತು ಪ್ಲಾಸ್ಟಿಕ್ ಬಳಕೆಗೆ ಮುಕ್ತಾಯ ಹಾಡಿ ಬಟ್ಟೆಯ ಕೈಚೀಲಗಳನ್ನು ಬಳಸಬೇಕು ಎಂದು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರು ಜಿಲ್ಲೆಯ ನಗರ, ಗ್ರಾಮಾಂತರ ಮತ್ತು ಸ್ಥಳೀಯ ಸಂಸ್ಥೆಗಳಿಗೆ ನಿರ್ದೇಶಿಸಿದ್ದರು.
ಈ ನಿಟ್ಟಿನಲ್ಲಿ ಮುಕ್ತ ಮಾರುಕಟ್ಟೆಯಲ್ಲಿ 5ರಿಂದ 10 ಕೆಜಿಯ ಪ್ರತಿ ಚೀಲಕ್ಕೆ ₹13 ಇದ್ದರೆ ಅವುಗಳನ್ನು ಪ್ರತಿ ಚೀಲಕ್ಕೆ ₹52ರಷ್ಟು (ಜಿಎಸ್‌ಟಿ ಸೇರಿ) ದರ ನೀಡಿ ಖರೀದಿಸಲಾಗಿದೆ. ಈ ಮೂಲಕ ಸರ್ಕಾರದ ಬೊಕ್ಕಸಕ್ಕೆ ₹7,65,15,816 ಕೋಟಿ ನಷ್ಟು ಉಂಟು ಮಾಡಲಾಗಿದೆ. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಪ್ರಯೋಜನ ನೀಡುವ ಉದ್ದೇಶದಿಂದ ಕಲ್ಯಾಣ ಯೋಜನೆಗಳಿಗೆ ಮೀಸಲಿಟ್ಟ ಹಣವನ್ನು ಈ ಕೈಚೀಲಗಳ ಖರೀದಿಗೆ ಬಳಸಲಾಗಿದೆ. ಗ್ರಾಮ ಸ್ವರಾಜ್ಯದ ಎಲ್ಲ ಕನಸುಗಳನ್ನು ಗಾಳಿಗೆ ತೂರಿ ಭ್ರಷ್ಟಾಚಾರ ಎಸಗಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದರು.
ಅಕ್ರಮದ ಕುರಿತಂತೆ, ಭ್ರಷ್ಟಾಚಾರ ನಿಗ್ರಹ ಕಾಯಿದೆ–1988ರ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು 2021ರ ಅಕ್ಟೋಬರ್ 13ರಂದು ಮೈಸೂರು ಜಿಲ್ಲಾ ಭ್ರಷ್ಟಚಾರ ನಿಗ್ರಹ ದಳಕ್ಕೆ (ಎಸಿಬಿ) ರವಿಚಂದ್ರೇಗೌಡ ದೂರು ನೀಡಿದ್ದರು.