ಬೆಂಗಳೂರಿನ ಕೋರಮಂಗಲದ ಕೇಂದ್ರೀಯ ಸದನ ಮತ್ತು ಈಜೀಪುರ ನಡುವೆ ಸಂಪರ್ಕ ಕಲ್ಪಿಸುವ ಈಜೀಪುರ ಮೇಲ್ಸೇತುವೆ ನಿರ್ಮಾಣ ಕಾರ್ಯದ ವಿಳಂಬಕ್ಕೆ ಕರ್ನಾಟಕ ಹೈಕೋರ್ಟ್ ಮಂಗಳವಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರನ್ನು ತೀವ್ರ ತರಾಟೆಗೆ ಗುರಿಪಡಿಸಿತು. “ಜವಾಬ್ದಾರಿ ನಿರ್ವಹಿಸಲು ಮುಖ್ಯ ಆಯುಕ್ತರಿಗೆ ಸಾಧ್ಯವಾಗದಿದ್ದರೆ ಹುದ್ದೆ ತೊರೆಯಬೇಕು. ಸಮರ್ಥ ಅಧಿಕಾರಿಗಳು ಅವರ ಸ್ಥಾನಕ್ಕೆ ಬರುತ್ತಾರೆ. ಯೋಜನೆ ಇಷ್ಟು ದಿನ ವಿಳಂಬವಾದರೂ ಬಿಬಿಎಂಪಿ ಮುಖ್ಯ ಆಯುಕ್ತರು ಏನು ಮಾಡುತ್ತಿದ್ದಾರೆ” ಎಂದು ಏರು ಧ್ವನಿಯಲ್ಲಿ ಪ್ರಶ್ನಿಸಿತು.
ಕೋರಮಂಗಲದ ವಾಸಿ ಆದಿನಾರಾಯಣಶೆಟ್ಟಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ವಿಭಾಗೀಯ ಪೀಠ ನಡೆಸಿತು.
ವಿಚಾರಣೆ ಆರಂಭವಾಗುತ್ತಿದ್ದಂತೆ ಬಿಬಿಎಂಪಿ ಪ್ರತಿನಿಧಿಸಿದ್ದ ವಕೀಲೆ ಕೆ ಸುಮನಾ ಅವರು “ಕಾಮಗಾರಿ ಪೂರ್ಣಗೊಳಿಸಲು ಸಾಕಷ್ಟು ಅಡೆತಡೆಗಳಿದ್ದವು. ಇದೀಗ ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಯನ್ನು ಕೋರಲಾಗಿದ್ದು, ಅರಣ್ಯ ಇಲಾಖೆ ಕೆಲಸ ಪೂರ್ಣಗೊಳಿಸಿದ ಬಳಿಕ ಕಾಮಗಾರಿ ಆರಂಭಿಸಲಾಗುವುದು. ಆದಷ್ಟು ಬೇಗ ಯೋಜನೆ ಪೂರ್ಣಗೊಳಿಸಲಾಗುವುದು. ಆ ಬಗ್ಗೆ ವಿಸ್ತೃತ ಅಫಿಡವಿಟ್ ಸಲ್ಲಿಸಲು ಕಾಲಾವಕಾಶ ನೀಡಬೇಕು” ಎಂದು ಕೋರಿದರು.
“ಕಾಮಗಾರಿ ವಿಳಂಬ ಮಾಡಿರುವುದಕ್ಕೆ ಮೇಲುಸೇತುವೆ ನಿರ್ಮಾಣ ಗುತ್ತಿಗೆ ಪಡೆದಿರುವ ಮೆಸರ್ಸ್ ಸಿಂಪ್ಲೆಕ್ಸ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಗೆ ದಂಡ ವಿಧಿಸಲಾಗಿದೆ. ಸದ್ಯ ಶೇ.44ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಹೊಸದಾಗಿ 2022ರ ಆಗಸ್ಟ್ 31ರ ಗಡುವು ವಿಧಿಸಲಾಗಿದ್ದು, ಅಷ್ಟರಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು” ಎಂದು ಮೌಖಿಕವಾಗಿ ಹೇಳಿದರು.
ಇದರಿಂದ ಆಕ್ರೋಶಗೊಂಡ ಮುಖ್ಯ ನ್ಯಾಯಮೂರ್ತಿಗಳು “2021ರ ಜುಲೈ 29ರ ವಿಚಾರಣೆಯಂದು ನಿರ್ದಿಷ್ಟ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವ ಕುರಿತು ಅಫಿಡವಿಟ್ ಸಲ್ಲಿಸುವಂತೆ ಬಿಬಿಎಂಪಿಗೆ ಸೂಚಿಸಲಾಗಿತ್ತು. ಆ ಬಳಿಕ ಸಾಕಷ್ಟು ಸಮಯದ ನಂತರವೂ ಅಫಿಡವಿಟ್ ಸಲ್ಲಿಸಿಲ್ಲ” ಎಂದರು.
“ನೀವು ಗುತ್ತಿಗೆದಾರರಿಗೆ ದಂಡ ವಿಧಿಸಿದರೆ ಸಾಲದು, ಯೋಜನೆ ವಿಳಂಬದಿಂದ ಸಾರ್ವಜನಿಕರಿಗೆ ಎಷ್ಟು ತೊಂದರೆ ಆಗಿದೆ, ಎಷ್ಟು ಹಣ ಪೋಲಾಗಿದೆ ತಿಳಿದಿದೆಯೇ” ಎಂದು ಪ್ರಶ್ನಿಸಿತು.
“ಕಾಮಗಾರಿಗೆ ಅಷ್ಟೊಂದು ವಿಘ್ನಗಳಿದ್ದರೆ ಅದನ್ನು ಏಕೆ ಕೈಗೆತ್ತಿಕೊಳ್ಳಬೇಕಿತ್ತು. ಒಂದು ವಾರದಲ್ಲಿ ಕಾಮಗಾರಿ ಪೂರ್ಣಗೊಳಿಸುವ ಸಂಬಂಧ ವಿಸ್ತೃತವಾದ ವರದಿ ಸಲ್ಲಿಸಬೇಕು. ಇಲ್ಲವಾದಲ್ಲಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಖುದ್ದು ನ್ಯಾಯಾಲಯದ ಮುಂದೆ ಸಂಬಂಧಪಟ್ಟ ಎಲ್ಲಾ ದಾಖಲೆಗಳೊಂದಿಗೆ ಹಾಜರಾಗಬೇಕು” ಎಂದು ಪೀಠ ಹೇಳಿದ್ದು, ವಿಚಾರಣೆಯನ್ನು ಜನವರಿ 20ಕ್ಕೆ ಮುಂದೂಡಿದೆ.