Mantri developers and Karnataka HC
Mantri developers and Karnataka HC 
ಸುದ್ದಿಗಳು

ಮಂತ್ರಿ ಡೆವಲಪರ್ಸ್‌ ದಿವಾಳಿ ಪ್ರಕ್ರಿಯೆ: ಎನ್‌ಸಿಎಲ್‌ಟಿ ಆದೇಶಕ್ಕೆ ಹೈಕೋರ್ಟ್‌ ಮಧ್ಯಂತರ ತಡೆ

Bar & Bench

ಬೆಂಗಳೂರಿನ ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯ ಮಂಡಳಿಯು (ಎನ್‌ಸಿಎಲ್‌ಟಿ) ಈಚೆಗೆ ಮಂತ್ರಿ ಡೆವಲಪರ್ಸ್‌ ವಿರುದ್ಧ ಕಾರ್ಪೊರೇಟ್‌ ದಿವಾಳಿ ಪರಿಹಾರ ಪ್ರಕ್ರಿಯೆ (ಸಿಐಆರ್‌ಪಿ) ಆರಂಭಿಸಿರುವುದಕ್ಕೆ ಕರ್ನಾಟಕ ಹೈಕೋರ್ಟ್‌ ಬುಧವಾರ ಮಧ್ಯಂತರ ತಡೆಯಾಜ್ಞೆ ವಿಧಿಸಿದೆ.

ಮಂತ್ರಿ ಡೆವಲಪರ್ಸ್‌ ನಿರ್ದೇಶಕ ಸುಶೀಲ್‌ ಮಂತ್ರಿ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

ದಿವಾಳಿ ಮತ್ತು ದಿವಾಳಿತನ ಸಂಹಿತೆ (ಐಬಿಸಿ) ಅಡಿ ಪರಿಹಾರಿಕ ವೃತ್ತಿಪರರನ್ನು ನೇಮಕ ಮಾಡಿ ಆದೇಶಿಸಿದ್ದ ಎನ್‌ಸಿಎಲ್‌ಟಿ ಆದೇಶ ವಿರೋಧಿಸಿ ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಕೆ ಶಶಿಕಿರಣ ಶೆಟ್ಟಿ ಅವರು ವಾದಿಸಿದರು. “ಮೇಲ್ಮನವಿ ನ್ಯಾಯ ಮಂಡಳಿಯು ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡಿಲ್ಲ. ಆದರೆ, ಆಕ್ಷೇಪಾರ್ಹ ಪ್ರಕ್ರಿಯೆಯ ನಡುವೆ ಪರಿಹಾರಿಕ ವೃತ್ತಿಪರರನ್ನು ನೇಮಕ ಮಾಡಲಾಗಿದ್ದು, ಎನ್‌ಸಿಎಲ್‌ಎಟಿ ಪ್ರಕರಣ ಕೈಗೆತ್ತಿಕೊಳ್ಳುವುದಕ್ಕೂ ಮುನ್ನ ರಕ್ಷಣೆ ಒದಗಿಸದಿದ್ದರೆ ಐಬಿಸಿ ಅಡಿ ಪರಿಹಾರಿಕ ವೃತ್ತಿಪರರು ಕಂಪೆನಿಯ ಚಟುವಟಿಕೆಯನ್ನು ನಿಯಂತ್ರಣಕ್ಕೆ ಪಡೆಯಲಿದ್ದಾರೆ. ಹೀಗಾಗಿ, ಎನ್‌ಸಿಎಲ್‌ಟಿ ಆದೇಶಕ್ಕೆ ತಡೆ ನೀಡಬೇಕು” ಎಂದು ಕೋರಿದರು.

“ಅರ್ಜಿದಾರರ ಪರ ವಕೀಲರ ವಾದದಲ್ಲಿ ಅರ್ಹತೆ ಇದ್ದು, ಮಾರ್ಚ್‌ 28ರಂದು ಎನ್‌ಸಿಎಲ್‌ಟಿ ಆದೇಶ ಮಾಡಿದ ಬಳಿಕ ಮಾರ್ಚ್‌ 30ರಂದು ಮೇಲ್ಮನವಿ ಸಲ್ಲಿಸಲಾಗಿದೆ. ಇಂಥ ಪರಿಸ್ಥಿತಿಯಲ್ಲಿ ಎನ್‌ಸಿಎಲ್‌ಟಿ ಆದೇಶಕ್ಕೆ ಮೂರು ವಾರಗಳ ಕಾಲ ಮಧ್ಯಂತರ ತಡೆ ನೀಡುವುದು ಸೂಕ್ತ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ. ಅಲ್ಲದೇ, ವಿಚಾರಣೆಯನ್ನು ಏಪ್ರಿಲ್‌ 20ಕ್ಕೆ ಮುಂದೂಡಿದೆ.

ಪ್ರಕರಣದಲ್ಲಿ ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯ ಮಂಡಳಿ, ಇಂಡಿಯಾಬುಲ್ಸ್‌ ಹೌಸಿಂಗ್‌ ಫೈನಾನ್ಸ್‌ ಲಿಮಿಟೆಡ್‌, ಮಧ್ಯಂತರ ಪರಿಹಾರಿಕ ವೃತ್ತಿಪರರಾದ ಅಹ್ಸಾನ್‌ ಅಹ್ಮದ್‌ ಅವರನ್ನು ಪ್ರತಿವಾದಿಗಳನ್ನಾಗಿಸಲಾಗಿದೆ.

ಅರ್ಜಿದಾರರ ಪರ ಪಿ ಎಲ್‌ ವಂದನಾ ಮತ್ತು ದಿವ್ಯಾಶ್ರೀ ಅವರು ಆನ್‌ ರೆಕಾರ್ಡ್‌ ವಕೀಲರಾಗಿದ್ದಾರೆ.

ಪ್ರಕರಣದ ಹಿನ್ನೆಲೆ: ಮಂತ್ರಿ ಡೆವಲಪರ್ಸ್‌ ₹450 ಕೋಟಿ ಸಾಲವನ್ನು ಮರುಪಾವತಿ ಮಾಡಿಲ್ಲ ಎಂದು ಆಕ್ಷೇಪಿಸಿ ದಿವಾಳಿ ಮತ್ತು ದಿವಾಳಿತನ ಸಂಹಿತೆ (ಐಬಿಸಿ) ಸೆಕ್ಷನ್‌ 7ರ ಅಡಿ ಇಂಡಿಯಾ ಬುಲ್ಸ್‌ ಹೌಸಿಂಗ್‌ ಫೈನಾನ್ಸ್‌ ಸಲ್ಲಿಸಿದ್ದ ಅರ್ಜಿಯನ್ನು ನಿವೃತ್ತ ನ್ಯಾಯಮೂರ್ತಿ ಟಿ ಕೃಷ್ಣವಲ್ಲಿ ಮತ್ತು ತಾಂತ್ರಿಕ ಸದಸ್ಯರಾದ ಕುಮಾರ್‌ ದುಬೆ ಅವರ ಕೋರಂ ವಿಚಾರಣೆಗೆ ಪರಿಗಣಿಸಿತ್ತು.

“ಮೇಲೆ ಚರ್ಚಿಸಲಾದ ವಾಸ್ತವಿಕ ವಿಚಾರಗಳನ್ನು ಪರಿಗಣಿಸಿ, ಸಾಲ ಮರುಪಾವತಿ ಮೊತ್ತವು ಒಂದು ಕೋಟಿ ರೂಪಾಯಿ ಮೀರಿದ್ದು, ಐಬಿಸಿ ಸೆಕ್ಷನ್‌ ಅಡಿ ಮಂತ್ರಿ ಡೆವಲಪರ್ಸ್‌ ಪ್ರೈವೇಟ್‌ ಲಿಮಿಟೆಡ್‌ ವಿರುದ್ಧದ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲಾಗಿದೆ. ಮಧ್ಯಂತರ ಪರಿಹಾರಿಕ ವೃತ್ತಿಪರರಾಗಿ ಅಹ್ಸಾನ್‌ ಅಹ್ಮದ್‌ ಅವರನ್ನು ನ್ಯಾಯ ಮಂಡಳಿಯು ನೇಮಕ ಮಾಡಿದ್ದು, ಸಾರ್ವಜನಿಕ ನೋಟಿಸ್‌ ಸೇರಿದಂತೆ ವಿವಿಧ ವೆಚ್ಚ ಭರಿಸಲು ₹2 ಲಕ್ಷವನ್ನು ಅಹ್ಮದ್‌ ಅವರಲ್ಲಿ ಠೇವಣಿ ಇಡಬೇಕು” ಎಂದು ಇಂಡಿಯಾ ಬುಲ್ಸ್‌ಗೆ ಆದೇಶ ಮಾಡಲಾಗಿತ್ತು.

ಮಂತ್ರಿ ಡೆವಲಪರ್ಸ್‌ ಸಾಲದ ಕರಾರಿನ ಅನ್ವಯ ಸಮಯಕ್ಕೆ ತಕ್ಕಂತೆ ನಿರ್ದಿಷ್ಟ ದಿನಾಂಕದಂದು ಇಂಡಿಯಾ ಬುಲ್ಸ್‌ಗೆ ಹಣ ಪಾವತಿಸಲು ವಿಫಲವಾಗಿದೆ. ಹಲವು ನೋಟಿಸ್‌ಗಳನ್ನು ನೀಡಿದ ಬಳಿಕವೂ ಸಾಲಗಾರ ಅಥವಾ ಸಹ ಸಾಲಗಾರರು ಬಾಕಿ ಹಣವನ್ನು ಪಾವತಿಸಿಲ್ಲ ಎಂದು ಇಂಡಿಯಾ ಬುಲ್ಸ್‌ ಅರ್ಜಿಯಲ್ಲಿ ಆಕ್ಷೇಪಿಸಿತ್ತು. ಇದನ್ನು ಎನ್‌ಸಿಎಲ್‌ಟಿ ಮಾನ್ಯ ಮಾಡಿತ್ತು. ಇದನ್ನು ಪ್ರಶ್ನಿಸಿ ಮಂತ್ರಿ ಡೆವಲಪರ್ಸ್‌ ಸಲ್ಲಿಸಿದ್ದ ಅರ್ಜಿಗೆ ಹೈಕೋರ್ಟ್‌ ಈಗ ಮಧ್ಯಂತರ ತಡೆ ವಿಧಿಸಿದೆ.