ಕರ್ನಾಟಕ ವೈದ್ಯಕೀಯ ಮಂಡಳಿಗೆ (ಕೆಎಂಸಿ) ನಡೆಸಿದ್ದ ಚುನಾವಣೆಯನ್ನು ರದ್ದುಗೊಳಿಸಿದ್ದ ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠದ ಆದೇಶಕ್ಕೆ ವಿಭಾಗೀಯ ಪೀಠವು ಮಧ್ಯಂತರ ತಡೆ ನೀಡಿದೆ.
ಡಾ. ಮಧುಸೂಧನ್ ಕಿರಿಗನೂರ್ ಮತ್ತಿತರರು ಸಲ್ಲಿಸಿರುವ ಮೇಲ್ಮನವಿ ವಿಚಾರಣೆ ನಡೆಸಿದ ಕಲಬುರ್ಗಿ ಪೀಠದ ನ್ಯಾಯಮೂರ್ತಿ ಕೆ ಎಸ್ ಮುದಗಲ್ ನೇತೃತ್ವದ ವಿಭಾಗೀಯ ಪೀಠವು ಮಧ್ಯಂತರ ಆದೇಶ ನೀಡಿದೆ.
ಪ್ರಕರಣವನ್ನು ವಿಸ್ತೃತವಾಗಿ ಪರಿಗಣಿಸಬೇಕಿದೆ ಎಂದಿರುವ ಪೀಠವು ಕೆಎಂಸಿ ರಿಜಿಸ್ಟ್ರಾರ್‌ಗೆ ನೋಟಿಸ್ ಜಾರಿ ಮಾಡಿದೆ. ಜೂನ್ 7ರಂದು ಏಕಸದಸ್ಯ ಪೀಠ ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿದೆ.
ಕಳೆದ ವರ್ಷದ ಜನವರಿ 23ರಂದು ನಡೆಸಿರುವ ಚುನಾವಣೆ ಮತ್ತು ಜನವರಿ 25ರಂದು ಘೋಷಿಸಲಾದ ಫಲಿತಾಂಶವನ್ನು ಏಕಸದಸ್ಯ ಪೀಠವು ರದ್ದುಗೊಳಿಸಿತ್ತು. ಚುನಾವಣಾಧಿಕಾರಿಯ ನಡೆಯು ಕಾನೂನುಬಾಹಿರವಾಗಿದ್ದು, ವಂಚನೆಯಿಂದ ಕೂಡಿದೆ. ಹೀಗಾಗಿ, ಮುಂದಿನ ಆರು ತಿಂಗಳೊಳಗೆ ಹೊಸದಾಗಿ ಚುನಾವಣೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಏಕ ಸದಸ್ಯ ಪೀಠವು ಆದೇಶಿಸಿತ್ತು.
ಚುನಾವಣಾಧಿಕಾರಿ ನಡೆಯು ವಂಚನೆಯಿಂದ ಕೂಡಿದೆ ಎಂಬುದನ್ನು ಸಾಬೀತುಪಡಿಸಿಲ್ಲ ಎಂದು ಮೇಲ್ಮನವಿಯಲ್ಲಿ ತಗಾದೆ ಎತ್ತಲಾಗಿದೆ. ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 22ಕ್ಕೆ ಮುಂದೂಡಲಾಗಿದೆ.