Karnataka High Court 
ಸುದ್ದಿಗಳು

ಸಮತೆಯ ನೆಲೆಯಲ್ಲಿ ಕೊಲೆ ಆರೋಪಿಗೆ ಜಾಮೀನು ಮಂಜೂರು ಮಾಡಿದ ಕರ್ನಾಟಕ ಹೈಕೋರ್ಟ್‌

ತನಿಖೆ ಪೂರ್ಣಗೊಂಡು, ಆರೋಪ ಪಟ್ಟಿ ಸಲ್ಲಿಸಿರುವುದರಿಂದ ಅರ್ಜಿದಾರರನ್ನು ವಶದಲ್ಲಿಟ್ಟುಕೊಳ್ಳುವುದು ಅವರ ಜೀವಿಸುವ ಮತ್ತು ಸ್ವಾತಂತ್ರ್ಯದ ಹಕ್ಕನ್ನು ಕಸಿಯುವುದಕ್ಕೆ ಸಮನಾಗುತ್ತದೆ ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

Bar & Bench

ಕೊಲೆ ಪ್ರಕರಣದಲ್ಲಿ ಮೊದಲ ಆರೋಪಿಗೆ ಈಚೆಗೆ ಜಾಮೀನು ಮಂಜೂರು ಮಾಡಿರುವ ಕರ್ನಾಟಕ ಹೈಕೋರ್ಟ್‌ ಸಮತೆಯ ಆಧಾರದಲ್ಲಿ ಆರೋಪಿಗೆ ಜಾಮೀನು ನೀಡಿರುವುದಾಗಿ ಹೇಳಿದೆ.

ಬೆಂಗಳೂರಿನ ಯಲಹಂಕದ ರವಿ ಅಲಿಯಾಸ್‌ ಕಮ್ರಾನ್‌ ರವಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ಜಿ ಉಮಾ ನೇತೃತ್ವದ ಏಕಸದಸ್ಯ ಪೀಠವು ಪುರಸ್ಕರಿಸಿದೆ. ಅರ್ಜಿದಾರ ಮತ್ತು ಇತರೆ ಆರೋಪಿಗಳ ವಿರುದ್ಧದ ಆರೋಪಗಳು ಗಂಭೀರ ಸ್ವರೂಪದ್ದಾಗಿವೆ. ಅರ್ಜಿದಾರರ ವಿರುದ್ಧದ ಆರೋಪವೇ ಇತರೆ ಆರೋಪಿಗಳ ವಿರುದ್ಧವೂ ಇದ್ದು, ಅವರಿಗೆ ಈಗಾಗಲೇ ಜಾಮೀನು ಮಂಜೂರು ಮಾಡಲಾಗಿದೆ ಎಂದು ನ್ಯಾಯಾಲಯವು ಜಾಮೀನು ಮಂಜೂರಾತಿಯನ್ನು ಸಮರ್ಥಿಸಿದೆ.

“ತನಿಖಾಧಿಕಾರಿಯು ಸಲ್ಲಿಸಿರುವ ಆರೋಪ ಪಟ್ಟಿಯನ್ನು ಗಮನಿಸಿದರೆ ಅರ್ಜಿದಾರ ಸೇರಿದಂತೆ ಇತರೆ ಆರೋಪಗಳ ವಿರುದ್ಧ ಮೇಲ್ನೋಟಕ್ಕೆ ಪ್ರಕರಣ ಕಾಣುತ್ತದೆ. ಅರ್ಜಿದಾರ ಆರೋಪಿಯ ವಿರುದ್ಧದ ಆರೋಪಗಳೇ ಎರಡು ಮತ್ತು ಮೂರನೇ ಆರೋಪಿಗಳ ವಿರುದ್ಧವೂ ಇದೆ. ಈಗಾಗಲೇ 2 & 3ನೇ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಲಾಗಿದೆ. ಹೀಗಾಗಿ, ಅರ್ಜಿದಾರರಿಗೂ ಸಮತೆಯ (ಪಾರಿಟಿ) ಲಾಭ ಸಿಗುವಂತೆ ನೋಡಿಕೊಳ್ಳಬೇಕಾಗುತ್ತದೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

ತನಿಖೆ ಪೂರ್ಣಗೊಂಡು, ಆರೋಪ ಪಟ್ಟಿ ಸಲ್ಲಿಸಿರುವುದರಿಂದ ಅರ್ಜಿದಾರರನ್ನು ವಶದಲ್ಲಿಟ್ಟುಕೊಳ್ಳುವುದು ಅವರ ಜೀವಿಸುವ ಮತ್ತು ಸ್ವಾತಂತ್ರ್ಯದ ಹಕ್ಕನ್ನು ಕಸಿಯುವುದಕ್ಕೆ ಸಮನಾಗುತ್ತದೆ ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲರಾದ ರಾಘವೇಂದ್ರ ಗೌಡ ಕೆ ಮತ್ತು ಮೋಹನ್‌ ಕುಮಾರ್‌ ಡಿ ಅವರು “2020ರ ಮಾರ್ಚ್‌ 15ರಂದು ಬಂಧನವಾದಾಗಿನಿಂದಲೂ ರವಿ ನ್ಯಾಯಾಂಗ ಬಂಧನದಲ್ಲಿದ್ದಾರೆ. 1 ರಿಂದ 3ನೇ ಆರೋಪಿಗಳ ವಿರುದ್ಧ ಒಂದೇ ತೆರನಾದ ಆರೋಪವಿದ್ದು, ಈಗಾಗಲೇ 2 ಮತ್ತು 3ನೇ ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಸಮತೆಯ ಆಧಾರದಲ್ಲಿ ರವಿ ಅವರೂ ಜಾಮೀನಿಗೆ ಅರ್ಹವಾಗಿದ್ದಾರೆ” ಎಂದು ವಾದಿಸಿದ್ದರು.

ಪ್ರಾಸಿಕ್ಯೂಷನ್‌ ಪ್ರತಿನಿಧಿಸಿದ್ದ ವಕೀಲರಾದ ರಾಹುಲ್‌ ರೈ ಅವರು “ಅರ್ಜಿದಾರ ರವಿ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾರೆ. ಆರೋಪ ಪಟ್ಟಿಯಲ್ಲಿ ಅರ್ಜಿದಾರರ ವಿರುದ್ಧ ಮೇಲ್ನೋಟಕ್ಕೆ ಪ್ರಕರಣ ಕಾಣಸಿಗುತ್ತಿದ್ದು, ಅಪರಾಧಗಳ ಗಂಭೀರತೆಯನ್ನು ಪರಿಗಣಿಸಿ ಅವರಿಗೆ ಜಾಮೀನು ನಿರಾಕರಿಸಬೇಕು” ಎಂದು ಕೋರಿದರು.